ಮುಂಬಯಿ: ಪ್ರೀತಿ, ಸಾಮರಸ್ಯ, ಸಹೋದರತ್ವದಿಂದ ಮೇಳೈಸುವ ಹೋಳಿ ಹಬ್ಬ ಸರ್ವ ಮತ ಬಾಂಧವರನ್ನು ಒಗ್ಗೂಡಿಸುವ ದಿನವಾಗಿದೆ. ದುಷ್ಟತೆಯ ವಿರುದ್ಧ ಒಳ್ಳೆಯ ಅಂಶಗಳ ಗೆಲುವೆಂಬ ನೀತಿ ಹೋಲಿಕಾ ದಹನದಲ್ಲಿ ಸಮ್ಮಿಳಿತವಾಗಿದೆ. ಚಳಿ ಮತ್ತು ಬೇಸಿಗೆ ಕಾಲಗಳ ಮಧ್ಯೆ ಹರಡುವ ಸೋಂಕು ರೋಗಗಳಿಂದ ಸಂರಕ್ಷಿಸಲು, ಪರಿಸರದ ನಿರುಪಯುಕ್ತ ವಸ್ತುಗಳನ್ನು ಕಾಮ ದಹನದಲ್ಲಿ ದಹಿಸಿ ಪ್ರಕೃತಿಯ ಶುದ್ಧತೆಯನ್ನು ಕಾಪಾಡಬೇಕೆಂದು ಪಲಿಮಾರು ಮಠದ ಮುಖ್ಯ ಪ್ರಬಂಧಕ, ಟ್ರಸ್ಟಿ, ವಿದ್ವಾನ್ ರಾಧಾಕೃಷ್ಣಭಟ್ ತಿಳಿಸಿದರು.
ಮಾ. 21ರಂದು ಮೀರಾರೋಡು ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಹೋಲಿ ಪೂರ್ಣಿಮೆಯ ಪ್ರಯುಕ್ತ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆಗೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದ ಅವರು ಎಲ್ಲ ಬಣ್ಣಗಳು ಸೇರಿ ಬಿಳಿ ಬಣ್ಣವಾಗುವಂತೆ ಭೇದ ಭಾವ ಮರೆತು ಸಾಮಾಜದ ಒಗ್ಗಟ್ಟಿಗೆ ನಾಂದಿಯಾಗೋಣ. ಆಚರಣೆ ಮತ್ತು ಸಂಪ್ರದಾಯಗಳ ಮೂಲಕ ಹಬ್ಬಗಳ ಪವಿತ್ರತೆ ಉಳಿಸೋಣ ಎಂದರು.
ಟ್ರಸ್ಟಿ ಸಚ್ಚಿದಾನಂದ ರಾವ್ ಮಾತನಾಡಿ, ಉಡುಪಿ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಅವರ ಇಚ್ಚೆ, ಸಲಹೆ ಸೂಚನೆ, ಮಾರ್ಗದರ್ಶನದಲ್ಲಿ ಪ್ರತಿಯೊಂದು ಕಾರ್ಯಕ್ರಮಗಳು ನಿಗದಿತ ಅವಧಿಯಲ್ಲಿ ಯಶಸ್ವಿಯಾಗಿ ಸಾಗುತ್ತದೆ. ಉಡುಪಿ ಪರ್ಯಯದಲ್ಲಿ ನಿತ್ಯ ಜರಗುವ ಲಕ್ಷ ತುಳಸಿ ಆರ್ಚನೆ ಮತ್ತು ನಿರಂತರವಾಗಿ ನಡೆಯುವ ಭಜನೆಯಲ್ಲಿ ಪಾಲ್ಗೊಳುವವರು ಮೀರಾರೋಡು ಮಠದಲ್ಲಿ ಹೆಸರನ್ನು ನೊಂದಾಯಿಸಬಹುದು ಎಂದರು.
ಅನಂತರ ಸಾಮೂಹಿಕ ಭಜನೆ, ಪರಿವಾರ ದೇವರಿಗೆ ಹಾಗೂ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿತು. ವಿವಿಧ ಪೂಜಾ ಕೈಂಕರ್ಯದಲ್ಲಿ ವಿದ್ವಾನ್ ಗೋಪಾಲ್ ಭಟ್, ಯತಿರಾಜ ಉಪಾಧಾಯ, ಜಯರಾಮ ಹೆಬ್ಟಾರ್, ಗಣೇಶ ಭಟ್, ಕಾರ್ತಿಕ್ ಉಪಾಧ್ಯಾಯ ಸಹಕರಿದರು. ತುಳು ಕನ್ನಡಿಗರು, ಪರಿಸರದ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ : ರಮೇಶ ಅಮೀನ್