Advertisement

ಘಟಶ್ರಾದ್ಧ ದೇಶದ ಸಾರ್ವಕಾಲಿಕ ಅತ್ಯುತ್ತಮ ಚಿತ್ರ

10:00 AM Oct 22, 2022 | Team Udayavani |

ನವದೆಹಲಿ: ದೇಶದ ಸಾರ್ವಕಾಲಿಕ ಅತ್ಯುತ್ತಮ ಚಿತ್ರಗಳ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಕನ್ನಡದ “ಘಟಶ್ರಾದ್ಧ’ ಸಿನಿಮಾ ಟಾಪ್‌ 5ನೇ ಸ್ಥಾನ ಪಡೆದುಕೊಂಡಿದೆ. ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟದ(FIPRESCI) ಭಾರತೀಯ ವಿಭಾಗವು ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Advertisement

“ಘಟಶ್ರಾದ್ಧ’ ಸಿನಿಮಾ ಕನ್ನಡದ ಪ್ರಸಿದ್ಧ ಸಾಹಿತಿ ಯು.ಆರ್‌.ಅನಂತಮೂರ್ತಿ ಅವರ ಕಾದಂಬರಿಯನ್ನಾಧರಿಸಿರುವುದಾಗಿದೆ. ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರು 1977ರಲ್ಲಿ ಈ ಸಿನಿಮಾವನ್ನು ತೆರೆ ಮೇಲೆ ತಂದಿದ್ದಾರೆ. ಬ್ರಾಹ್ಮಣ ಸಮುದಾಯದ ವಿಧವೆಯರ ಬದುಕನ್ನು ಎಳೆ ಎಳೆಯಾಗಿ ಬಿಚ್ಚಿಡುವ ಈ ಸಿನಿಮಾದಲ್ಲಿ ಮೀನಾ ಕುಟ್ಟಪ್ಪ, ಅಜಿತ್‌ ಕುಮಾರ್‌ ಮತ್ತು ನಾರಾಯಣ ಭಟ್‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ಹಲವಾರು ಪ್ರಶಸ್ತಿಗಳನ್ನೂ ಬಾಚಿಕೊಂಡಿತ್ತು.

ಬಂಗಾಳಿ ಸಿನಿಮಾಗಳಿಗೆ 3 ಸ್ಥಾನ:
ಟಾಪ್‌ 10 ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಬಂಗಾಳಿ ಭಾಷೆಯ ಸಿನಿಮಾಗಳು ತಮ್ಮದಾಗಿಸಿಕೊಂಡಿವೆ. ನಿರ್ದೇಶಕ ಸತ್ಯಜಿತ್‌ ರೈ ನಿರ್ದೇಶನದ “ಪಥೆರ್‌ ಪಾಂಚಾಲಿ’ ಸಿನಿಮಾ ಅಗ್ರ ಸ್ಥಾನ ಪಡೆದುಕೊಂಡಿದೆ. ಈ ಸಿನಿಮಾ ಬಂಗಾಳದ ಬಿಬೂತಿಭೂಷಣ್‌ ಬಂಡೋಪಾಧ್ಯಾಯ ಅವರು 1929ರಲ್ಲಿ ಬರೆದಿದ್ದ ಕಾದಂಬರಿಯನ್ನು ಆಧರಿಸಿದ್ದಾಗಿದೆ. ಪಟ್ಟಿಯ ಎರಡನೇ ಸ್ಥಾನದಲ್ಲಿ ಬಂಗಾಳಿಯ “ಮೆಘೆ ಧಾಕಾ ತರ’ ಸಿನಿಮಾವಿದೆ. ನಿರ್ದೇಶಕ ರಿತ್ವಿಕ್‌ ಘಟಕ್‌ ನಿರ್ದೇಶನವಿರುವ ಸಿನಿಮಾ 1960ರಲ್ಲಿ ತೆರೆ ಕಂಡಿತ್ತು. ವಿಶೇಷವಾಗಿ ಪಟ್ಟಿಯ 7ನೇ ಸ್ಥಾನದಲ್ಲಿ ಸತ್ಯಜಿತ್‌ ನಿರ್ದೇಶನದ “ಚಾರುಲತಾ’ ಸಿನಿಮಾವಿದೆ. ಈ ಸಿನಿಮಾ 1964ರಲ್ಲಿ ಬಿಡುಗಡೆಯಾಗಿತ್ತು.

ಹಿಂದಿಯ 5 ಸಿನಿಮಾ ಪಟ್ಟಿಯಲ್ಲಿ:
ಪಟ್ಟಿಯಲ್ಲಿ ಹಿಂದಿಯ ಸಿನಿಮಾಗಳು ಒಟ್ಟು 5 ಸ್ಥಾನವನ್ನು ಬಾಚಿಕೊಂಡಿವೆ. 3ನೇ ಸ್ಥಾನದಲ್ಲಿ ಮೃನಾಲ್‌ ಸೇನ್‌ ನಿರ್ದೇಶನದ “ಭುವನ್‌ ಶೋಮೆ'(1969), 6ನೇ ಸ್ಥಾನದಲ್ಲಿ “ಗರ್ಮ್ ಹವಾ'(ನಿರ್ದೇಶಕ-ಎಂ.ಎಸ್‌.ಸತ್ಯು, 1973), 8ನೇ ಸ್ಥಾನದಲ್ಲಿ “ಅಂಕುರ್‌’ (ನಿರ್ದೇಶಕ- ಶ್ಯಾಮ್‌ ಬನೇಗಲ್‌, 1974), 9ನೇ ಸ್ಥಾನದಲ್ಲಿ ಪ್ಯಾಸಾ (ನಿರ್ದೇಶಕ- ಗುರು ದತ್‌, 1957) ಮತ್ತು 10ನೇ ಸ್ಥಾನದಲ್ಲಿ “ಶೋಲೆ’ (ನಿರ್ದೇಶಕ- ರಮೇಶ್‌ ಸಿಪ್ಪಿ, 1975) ಸಿನಿಮಾವಿದೆ. ಉಳಿದಂತೆ ಮಲಯಾಳಂನ “ಎಲಿಪ್ಪಥಯಂ'(ನಿರ್ದೇಶಕ-ಅದೂರು ಗೋಪಾಲಕೃಷ್ಣನ್‌, 1981) ಸಿನಿಮಾ ಪಟ್ಟಿಯ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next