ಸುರತ್ಕಲ್: ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಆಕಾಂಕ್ಷಿಯಾಗಿದ್ದ ಸತ್ಯಜಿತ್ ಸುರತ್ಕಲ್ ಅವರಿಗೆ ಮತ್ತೆ ಟಿಕೆಟ್ ಕೈತಪ್ಪಿರುವುದು ಬಿಲ್ಲವ ಸಂಘಟನೆಗಳು, ಬೆಂಬಲಿಗರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಮುಂದಿನ 24 ತಾಸುಗಳಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು, ಇಲ್ಲದಿದ್ದಲ್ಲಿ ಮುಂದಿನ ಬೆಳವಣಿಗೆಗೆ ಪಕ್ಷವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.
ರವಿವಾರ ಕಾರ್ಯಕರ್ತರು, ಬಿಲ್ಲವ ಸಂಘಗಳು ಸಭೆ ನಡೆಸಿ ಸತ್ಯಜಿತ್ ಅವರನ್ನು ಪಕ್ಷೇತರವಾಗಿ ಕಣಕ್ಕಿಳಿಯಲು ಒತ್ತಾಯಿಸುವ ನಿರ್ಣಯ ಕೈಗೊಂಡರು. ಕಳೆದ 35 ವರ್ಷಗಳಿಂದ ಹಿಂದುತ್ವಕ್ಕಾಗಿ ಹೋರಾಟ ನಡೆಸಿ, ಹಿಂದೂ ಕಾರ್ಯಕರ್ತರ ಧ್ವನಿಯಾಗಿದ್ದ ಸತ್ಯಜಿತ್ ಅವರನ್ನು ಪಕ್ಷ ಕಡೆಗಣಿಸಿದೆ. ಒಂದೆರಡು ವರ್ಷಗಳ ಹಿಂದೆ ವಲಸೆ ಬಂದವರಿಗೆ ಟಿಕೆಟ್ ನೀಡಲಾಗಿದೆ. ಕೇವಲ ಒಂದು ಸಮುದಾಯದಿಂದ ಪಕ್ಷವು ಐವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇತರ ಸಮುದಾಯಗಳಿಗೆ ನೋವುಂಟಾಗಿದೆ. ಸತ್ಯಜಿತ್ ಅವರನ್ನು ಪಕ್ಷೇತರವಾಗಿ ನಿಲ್ಲುವಂತೆ ಒತ್ತಾಯಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಕಾರ್ಯಕರ್ತರು, ಬೆಂಬಲಿಗರು, ವಿವಿಧ ಬಿಲ್ಲವ ಸಂಘಗಳು ಪಕ್ಷೇತರವಾಗಿ ಸ್ಪರ್ಧಿಸುವಂತೆ ಆಗ್ರಹಿಸುತ್ತಿದ್ದಾರೆ. ಕಳೆದ 35 ವರ್ಷಗಳಿಂದ ಸಂಘದ ವರ್ಚಸ್ಸಿಗೆ ಧಕ್ಕೆಯಾಗದಂತೆ ದುಡಿದಿದ್ದೇನೆ. ಟಿಕೆಟ್ ಯಾಕೆ ನೀಡಿಲ್ಲ ಎಂಬುದಕ್ಕೆ ಪಕ್ಷ ಕಾರಣ ನೀಡಬೇಕು. ಕೇಂದ್ರದ ನಾಯಕರ ಮೇಲೆ ಬೆರಳು ತೋರಿಸಿ ರಾಜ್ಯ ನಾಯಕರು ತಪ್ಪಿಸಿ ಕೊಳ್ಳು ತ್ತಿದ್ದಾರೆ. ನಾನು ಈ ಮಾತನ್ನು ಒಪ್ಪುವುದಿಲ್ಲ. ಮಂಗಳೂರು ಸಂಸದರು ಹಾಗೂ ಸಂಘದ ಪ್ರಮುಖರಾದ ಪಿ. ಪ್ರಕಾಶ್ ನನಗೆ ಟಿಕೆಟ್ ತಪ್ಪಲು ಕಾರಣ. ಆಗಿರುವ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ನೀಡಲಾಗುವುದು. ಟಿಕೆಟ್ ವಿಚಾರದಲ್ಲಿ ಬದಲಾವಣೆ ಮಾಡಬೇಕು. ಸೋಮವಾರ ಬೆಳಗ್ಗೆ 10 ಗಂಟೆಯ ಒಳಗಾಗಿ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನನ್ನ ನಿರ್ಧಾರವನ್ನು ಮಾಧ್ಯಮದ ಮೂಲಕ ತಿಳಿಸಲಿದ್ದೇನೆ.
ಸತ್ಯಜಿತ್ ಸುರತ್ಕಲ್