Advertisement

ವಿಶ್ವ ಬ್ಯಾಡ್ಮಿಂಟನ್‌: ಸಾತ್ವಿಕ್‌-ಚಿರಾಗ್‌ ಜೋಡಿಗೆ ಕಂಚು

09:27 PM Aug 27, 2022 | Team Udayavani |

ಟೋಕ್ಯೋ: ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಕಂಚಿನ ಪದಕ ಜಯಿಸಿದರು. ಸೆಮಿಫೈನಲ್‌ನಲ್ಲಿ ಪರಾಭವಗೊಂಡ ಕಾರಣ ಇವರಿಗೆ ದೊಡ್ಡ ಪದಕ ಕೈತಪ್ಪಿತು. ಆದರೆ ಇದು ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪುರುಷ ಜೋಡಿಗೆ ಒಲಿದ ಮೊದಲ ಪದಕವೆಂಬುದು ಹೆಮ್ಮೆಯ ಸಂಗತಿ.

Advertisement

ಶನಿವಾರದ ತೀವ್ರ ಪೈಪೋಟಿಯ ಸೆಮಿಫೈನಲ್‌ ಕಾಳಗದಲ್ಲಿ ಮಲೇಷ್ಯಾದ ಆರನ್‌ ಚಿಯ-ಸೋಹ್‌ ವೂಕಿ ಯಿಕ್‌ ಸೇರಿಕೊಂಡು ಭಾರತದ 7ನೇ ರ್‍ಯಾಂಕಿಂಗ್‌ ಜೋಡಿಯನ್ನು 22-20, 21-18, 21-16 ಅಂತರದಿಂದ ಪರಾಭವಗೊಳಿಸಿದರು. 77 ನಿಮಿಷಗಳ ತನಕ ಇವರ ಸ್ಪರ್ಧೆ ಸಾಗಿತು. ಇದರೊಂದಿಗೆ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.

ಸಾತ್ವಿಕ್‌-ಚಿರಾಗ್‌ ಕಳೆದ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಬಂಗಾರದ ಪದಕ ಜಯಿಸಿದ್ದರು. ಇನ್ನೊಂದೆಡೆ ಇವರನ್ನು ಪರಾಭವಗೊಳಿಸಿದ 6ನೇ ರ್‍ಯಾಂಕಿಂಗ್‌ನ ಮಲೇಷ್ಯಾ ಜೋಡಿ ಟೋಕ್ಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿತ್ತು. ಇವರೆದುರು ಸಾತ್ವಿಕ್‌-ಚಿರಾಗ್‌ ಜೋಡಿ ಅನುಭವಿಸಿದ ಸತತ 6ನೇ ಸೋಲು ಇದಾಗಿದೆ. ಸೆಮಿಫೈನಲ್‌ನಲ್ಲಿ ಸಾತ್ವಿಕ್‌ ಉತ್ತಮ ಲಯದಲ್ಲಿದ್ದರು. ಆದರೆ ಚಿರಾಗ್‌ ಅವರ ಸರ್ವ್‌ ಮತ್ತು ಡಿಫೆನ್ಸ್‌ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ.

2011ರ ಬಳಿಕ ಸತತ ಪದಕ
ಸಾತ್ವಿಕ್‌-ಚಿರಾಗ್‌ ಜೋಡಿಯ ಸಾಹಸದಿಂದ ಭಾರತ 2011ರ ಬಳಿಕ ಸತತವಾಗಿ ಈ ಕೂಟದಲ್ಲಿ ಪದಕವೊಂದನ್ನು ಗೆಲ್ಲುತ್ತ ಬಂದಂತಾಯಿತು. ಇದು ಡಬಲ್ಸ್‌ನಲ್ಲಿ ಭಾರತಕ್ಕೆ ಒಲಿದ ಕೇವಲ 2ನೇ ಪದಕ. ಇದಕ್ಕೂ ಮುನ್ನ ವನಿತಾ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ-ಅಶ್ವಿ‌ನಿ ಪೊನ್ನಪ್ಪ ಕೂಡ ಕಂಚಿನ ಪದಕ ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next