ಪ್ಯಾರಿಸ್: ಮಂಗಳವಾರ ಮೊದಲ್ಗೊಂಡ “ಫ್ರೆಂಚ್ ಓಪನ್ ಸೂಪರ್ 750′ ಬ್ಯಾಡ್ಮಿಂಟನ್ ಪಂದ್ಯಾವಳಿಯ ಡಬಲ್ಸ್‌ನಲ್ಲಿ ಭಾರತದ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಗೆಲುವಿನ ಆರಂಭ ಪಡೆದಿದ್ದಾರೆ.
ವಿಶ್ವದ ನಂಬರ್ ವನ್ ಜೋಡಿಯಾದ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ವಿಶ್ವದ 12ನೇ ರ್‍ಯಾಂಕಿಂಗ್‌ನ ಮಲೇಷ್ಯನ್ ಜೋಡಿಯಾದ ಓಂಗ್ ವ್ಯೂ ಸಿನ್-ಟೆ ಈ ಯೀ ವಿರುದ್ಧ 21-13, 24-22 ಅಂತರದ ಗೆಲುವು ಸಾಧಿಸಿದರು. ಇದು ಮಲೇಷ್ಯನ್ ಜೋಡಿ ವಿರುದ್ಧ ಆಡಿದ 8 ಪಂದ್ಯಗಳಲ್ಲಿ ಚಿರಾಗ್-ಸಾತ್ವಿಕ್ ಸಾಧಿಸಿದ 5ನೇ ಗೆಲುವು. 47 ನಿಮಿಷಗಳ ಕಾಲ ಇವರ ಹೋರಾಟ ಸಾಗಿತು.
ದ್ವಿತೀಯ ಸುತ್ತಿನಲ್ಲೂ ಚಿರಾಗ್-ಸಾತ್ವಿಕ್ ಜೋಡಿಗೆ ಮಲೇಷ್ಯನ್ ಜೋಡಿಯೇ ಎದುರಾಗಲಿದೆ. ಮಾನ್ ವೀ ಚೋಂಗ್-ಕೈ ವುನ್ ಟೀ ವಿರುದ್ಧ ಸೆಣಸಲಿದ್ದಾರೆ.
“ಆಲ್ ಇಂಡಿಯಾ’ ವನಿತಾ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಸೇರಿಕೊಂಡು ಅಶ್ವಿನಿ ಪೊನ್ನಪ್ಪ-ತನಿಷಾ ಕ್ರಾಸ್ಟೊ ಜೋಡಿಗೆ 16-21, 21-19, 21-17 ಅಂತರದ ಸೋಲುಣಿಸಿತು. ಈ ಎರಡೂ ಜೋಡಿ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆಗಾಗಿ ಹೋರಾಟ ನಡೆಸುತ್ತಿದ್ದು, ಇಲ್ಲಿ ಟ್ರೀಸಾ-ಗಾಯತ್ರಿ ಜೋಡಿಗೆ ಅವಕಾಶ ಹೆಚ್ಚಿದೆ.