ಪ್ಯಾರಿಸ್: ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ಸ್ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ನೇರ ಗೇಮ್‌ಗಳ ಗೆಲುವು ಸಾಧಿಸಿ ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಕೂಟದ ಫೈನಲ್ ಹಂತಕ್ಕೇರಿದರು.
ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿದ ಸಾತ್ವಿಕ್-ಚಿರಾಗ್ ಅವರು 45 ನಿಮಿಷಗಳ ಹೋರಾಟದಲ್ಲಿ ಕೊರಿಯದ ಚೋಯ್ ಸೋಲ್ ಜಿಯು ಮತ್ತು ಕಿಮ್ ವೋನ್ ಹೊ ಅವರನ್ನು 21-18, 21-14 ಗೇಮ್‌ಗಳಿಂದ ಉರುಳಿಸಿ ಪ್ರಶಸ್ತಿ ಸುತ್ತಿಗೇರಿದರು.
ಸಾತ್ವಿಕ್-ಚಿರಾಗ್ ಅವರು 2022ರಲ್ಲಿ ಬಿಡಬ್ಲ್ಯುಎಫ್ ವಿಶ್ವ ಟೂರ್ ಕೂಟಗಳಲ್ಲಿ ಎರಡನೇ ಬಾರಿ ಫೈನಲಿಗೇರಿದ ಸಾಧನೆ ಮಾಡಿದ್ದಾರೆ. ಅವರು ಈ ವರ್ಷದ ಆರಂಭದಲ್ಲಿ ನಡೆದ ಇಂಡಿಯನ್ ಓಪನ್ ಸೂಪರ್ 500 ಕೂಟದಲ್ಲಿ ಪ್ರಶಸ್ತಿ ಜಯಿಸಿದ್ದರು.
ಏಳನೇ ಶ್ರೇಯಾಂಕದ ಸಾತ್ವಿಕ್-ಚಿರಾಗ್ ಅವರು ಈ ಮೊದಲು ನಡೆದ ಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ಅಗ್ರ ಶ್ರೇಯಾಂಕದ ಜಪಾನಿನ ತಾಕುರೊ ಹೋಕಿ ಮತ್ತು ಯುಗೊ ಕೊಬಯಾಶಿ ಅವರನ್ನು ನೇರ 21-12, 21-16 ಗೇಮ್‌ಗಳಿಂದ ಸೋಲಿಸಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾಗಿದ್ದರು. ಸಾತ್ವಿಕ್-ಚಿರಾಗ್ ಮಾತ್ರ ಈ ಕೂಟದಲ್ಲಿ ಉಳಿದಿರುವ ಭಾರತದ ಸ್ಪರ್ಧಿಗಳಾಗಿದ್ದಾರೆ.
ಈ ಮೊದಲು ಕಿದಂಬಿ ಶ್ರೀಕಾಂತ್, ಎಚ್.ಎಸ್. ಪ್ರಣಯ್ ಮತ್ತು ಸಮೀರ್ ವರ್ಮ ಅವರು ಪುರುಷರ ಸಿಂಗಲ್ಸ್ ಪ್ರಿ-ಕ್ವಾರ್ಟರ್‌ಫೈನಲ್‌ನನಲ್ಲಿ ಸೋತಿದ್ದರು.