ಸಾಗರ: ಭರತನಾಟ್ಯದ ನೃತ್ಯ ಶೈಲಿಯನ್ನು ಹಾಳುಗೆಡವುವ ಕೆಲಸ ನಡೆಯುತ್ತಿದೆ. ನಾಟ್ಯಶಾಸ್ತ್ರದ ಮೂಲ ಪಟ್ಟುಗಳನ್ನು ಬಿಟ್ಟು ಪ್ರದರ್ಶನಗೊಳ್ಳುವ ಭರತನಾಟ್ಯ ಹೆಚ್ಚು ಶ್ರೇಷ್ಟವಾಗಿರುವುದಿಲ್ಲ ಎಂದು ಬೆಂಗಳೂರು ನೂಪುರ ಭ್ರಮರಿ ಸಂಪಾದಕರು ಹಾಗೂ ಕಲಾ ಸಂಶೋಧಕಿ ಡಾ| ಬಿ.ಎನ್.ಮನೋರಮಾ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ನಾಟ್ಯತರಂಗ ಸಂಸ್ಥೆ ವತಿಯಿಂದ ವಿದುಷಿ ರಾಜಲಕ್ಷ್ಮಿ ಕಾನುಗೋಡು ಅವರ ಭರತನಾಟ್ಯ ರಂಗ ಪ್ರವೇಶದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭರತನಾಟ್ಯ ಕಲಿಕೆಯಲ್ಲಿ ಶ್ರದ್ಧೆ ಅಗತ್ಯ. ವಿದ್ವಾನ್ ಜಿ.ಬಿ.ಜನಾರ್ದನ್ ತಮ್ಮ ಗುರುಗಳಿಂದ ಕಲಿತ ವಿದ್ಯೆಯನ್ನು ತಮ್ಮ ವಿದ್ಯಾರ್ಥಿಗಳಿಗೆಧಾರೆ ಎರೆಯುವ ಮೂಲಕ ಅವರಲ್ಲಿ ನೃತ್ಯಾಸಕ್ತಿ ಬೆಳೆಸುವ ಜೊತೆಗೆ ಮೂಲ ಭರತನಾಟ್ಯ ಕಲೆಯನ್ನು ಉಳಿಸುತ್ತಿರುವುದು ಅಭಿನಂದನಾರ್ಹ ಸಂಗತಿ. ವಿದ್ಯಾಭ್ಯಾಸ ಸಂದರ್ಭದಲ್ಲಿ ನೃತ್ಯ ಕಲಿಕೆಯಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ನೃತ್ಯಭ್ಯಾಸವನ್ನು ಮುಂದುವರಿಸುವುದಿಲ್ಲ.
ಇದರಿಂದ ನೀವು ಕಲಿತ ವಿದ್ಯೆಗೆ ಸಾರ್ಥಕತೆ ಸಿಗುವುದಿಲ್ಲ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೃತ್ಯಗುರು ವಿದ್ವಾನ್ ಜಿ.ಬಿ.ಜನಾರ್ದನ್, ನೃತ್ಯ ಕಲಾವಿದನ ಆತ್ಮ ಕಲೆಯ ಮೂಲ ಅವರ ದೇಹದಲ್ಲಿ ಅನುಸಂಧಾನವಾಗುತ್ತದೆ. ಶ್ರದ್ಧೆ ಮತ್ತು ಆಸಕ್ತಿ ಇರುವವರು ಮಾತ್ರ ನೃತ್ಯವನ್ನು ಶೀಘ್ರವಾಗಿ ಕಲಿಯಬಹುದು ಎಂದು ಹೇಳಿದರು.
ರಂಗಪ್ರವೇಶ ಮಾಡಿದ ರಾಜಲಕ್ಷ್ಮೀ ಕಾನುಗೋಡು ಮಾತನಾಡಿ, ಯಾವುದೇ ಕಲೆಯನ್ನು ಸಂಪೂರ್ಣವಾಗಿ ಅರಗಿಸಿಕೊಳ್ಳುವ ಮಾರ್ಗದಲ್ಲಿ ಅದರ ಕುರಿತಾದ ಗ್ರಾಂಥಿಕ ಅಧ್ಯಯನವೂ ಮುಖ್ಯವಾಗುತ್ತದೆ. ಅಗೆದಷ್ಟೂ ಖುಷಿ, ನೆಮ್ಮದಿಗಳು ನಾಟ್ಯದಲ್ಲಿದೆ. ದುರಂತವೆಂದರೆ ಸಮಾಜ ಪರೀಕ್ಷೆ ಆಧಾರಿತ ಅಂಕ ಸಂಪಾದಕ ಸಾಧಕರಿಗೆ ಪ್ರೋತ್ಸಾಹಿಸಲು ಹೆಚ್ಚಿನ ಆದ್ಯತೆ ನೀಡುತ್ತಿದೆ. ವಾಸ್ತವವಾಗಿ ನೃತ್ಯದಿಂದ ನಾವು ಏನನ್ನೂ ಕಳೆದುಕೊಳ್ಳುವುದಿಲ್ಲ. ನೃತ್ಯ ಓದಿಗೆ ತೊಂದರೆ ಕೊಡುವುದಿಲ್ಲ ಎಂದು ಪ್ರತಿಪಾದಿಸಿದರು.
ನಾಟ್ಯ ತರಂಗ ಸಂಸ್ಥೆ ಅಧ್ಯಕ್ಷ ಐ.ವಿ.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಗಣಪತಿ ಕಟ್ಟಿನಕೆರೆ, ಸಂಸ್ಕೃತ ಉಪನ್ಯಾಸಕ ಗಜಾನನ ಭಟ್ ರೇವಣಕಟ್ಟಾ, ವರದಾಂಬಿಕೆ ಜನಾರ್ದನ್ ಇದ್ದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಹರತಾಳು ಹಾಲಪ್ಪ, ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ ಇದ್ದರು. ವಿದುಷಿ ರಾಜಲಕ್ಷ್ಮೀ ಕಾನುಗೋಡು ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
ಹ್ಯಾಂಗಿದಿಯೋ ತಮ್ಮಯ್ನಾ?
ಸಾಗರ: ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದ ವೇಳೆ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದ ನಂತರ ಮೊದಲ ಬಾರಿಗೆ ಸೋಲನುಭವಿಸಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ
ಹಾಗೂ ಶಾಸಕ ಹರತಾಳು ಹಾಲಪ್ಪ ಮುಖಾಮುಖೀಯಾದರು.
ಕಾರ್ಯಕ್ರಮದ ಆರಂಭದಲ್ಲಿ ಬಂದು ಕುಳಿತಿದ್ದ ಕಾಗೋಡು, ವಿಳಂಬವಾಗಿ ಬಂದ ಶಾಸಕ ಹರತಾಳು ಇನ್ನೊಂದೆಡೆ ಕುಳಿತಿದ್ದರು. ಕಾರ್ಯಕ್ರಮದ ಮಧ್ಯೆ ಹೊರಗಡೆ ಬಂದ ಕಾಗೋಡಿಗೆ ಹಾಲಪ್ಪ ಎದುರಾದರು. ಕಾಗೋಡು ಅವರನ್ನು
ಕಂಡ ಹಾಲಪ್ಪ ಗೌರವದಿಂದ ಎದ್ದುನಿಂತರೆ, ಹಸ್ತಲಾಘವ ಕೊಟ್ಟ ಕಾಗೋಡು, ಹ್ಯಾಗಿದೀಯೋ ತಮ್ಮಾ ಎಂದರು.