Advertisement
1950ರ ದಶಕ. ಶಿರಸಿ-ಕುಮಟಾ ಹೆದ್ದಾರಿಯ ಕತಗಾಲ ಸಮೀಪದ ಉಪ್ಪಿನಪಟ್ಟಣ ಎಂಬ ಪುಟ್ಟ ಊರಿನಲ್ಲಿ ಮಳೆಗಾಲದಲ್ಲಿ ನೆರೆ ಬಂದು ಮನೆ ಹಾಗೂ ಇದ್ದ ಸಣ್ಣ ಹೋಟೆಲ್ಲೂ ಹೋಯಿತು. ಹೆಂಡ್ತಿ ಮಕ್ಕಳೊಂದಿಗೆ ಜೀವನ ನಿರ್ವಹಣೆಗೆ ಶಿರಸಿಗೆ ಬಂದವರು ಕಾಯಿ ವ್ಯಾಪಾರ ಶುರು ಮಾಡಿಕೊಂಡರು. ಐದಾರು ವರ್ಷ ಕಾಯಿ ವ್ಯಾಪಾರ ಮಾಡಿದರೂ ಹಳೆ ಕಸುಬು ಹೋಟೆಲ್ ಆರಂಭಿಸುವ ಕನಸು ಗರಿ ಗೆದರಿತು. ಮೂರ್‍ನಾಲ್ಕು ಕಡೆ ಹೋಟೆಲ್ ಆರಂಭಿಸಲು ಜಾಗ ನೋಡಿ, ಕೊನೆಗೆ ಉಣ್ಣೇ ಮಠ ಗಲ್ಲಿಯ ತಗ್ಗಿನ ಜಾಗವನ್ನು ನೋಡಿದರು. 1961ನೇ ಇಸವಿಯಲ್ಲಿ ಹೋಟೆಲ್ ಆರಂಭಿಸಿ, ಅದಕ್ಕೆ ಸತ್ಕಾರ ಎಂಬ ಫಲಕ ಹಾಕಿದರು.
ಇದು ಹೋಟೆಲ್‌ನ ಕಥೆ. ಆದರೆ, ಇಷ್ಟೇ ಆಗಿದ್ದರೆ ವಿಶೇಷ ಎನಿಸುತ್ತಿರಲಿಲ್ಲ. ಎಷ್ಟೋ ಮಂದಿಗೆ ಸತ್ಕಾರ ಎಂದರೆ ತಕ್ಷಣ ನೆನಪಾಗುವುದು ಮಸಾಲೆ ದೋಸೆ. “ಸತ್ಕಾರ ದೋಸೆ ತಿಂಬನ ಬಾ’ ಎಂದು ಕರೆದುಕೊಂಡು ಹೋದರೆ ಅದು ಮಸಾಲೆ ದೋಸೆಗೇ ಆಗಿರುತ್ತದೆ. ಪುಡಿಚಟ್ನಿ ಮಸಾಲೆ ಇನ್ನೂ ಗಮ್ಮತ್ತು. ಚಟ್ನಿ ಹಾಗೂ ಸಂಬಾರ ಜೊತೆಗೆ ನೀಡುವ ಮಸಾಲೆ ದೋಸೆ ಸತ್ಕಾರ ಹೆಸರಿನ ಜೊತೆಗೂ ಕಳೆದ ಐದೂವರೆ ದಶಕಗಳಿಂದ ಅಂಟಿಕೊಂಡಿದೆ.
Related Articles
Advertisement
ಮಸಾಲೆ ದೋಸೆಯನ್ನು ಎಲ್ಲ ಕಡೆ ಮಾಡುತ್ತಾರೆ. ಅದೇನ್ ವಿಶೇಷ ಸಂಯೋಜನೆ ಗೊತ್ತಿಲ್ಲ; ಇಲ್ಲಿಯದ್ದು ಟೇಸ್ಟ್ ಬೇರೆ ಎನ್ನುತ್ತಲೇ ಊರಿಗೆ ಬಂದವರೂ ಪೇಟೆ ನಡುವಿನ ಸತ್ಕಾರ ಹೋಟೆಲ್‌ಗೆ ಬರುತ್ತಾರೆ. ಈ ಹಿಂದೆ ನಾರಾಯಣ ನಾಯಕ ಅವರೇ ಸ್ವತಃ ದೋಸೆ ಹಿಟ್ಟು ಸಿದ್ಧಗೊಳಿಸಿ ಎರೆಯುತ್ತಿದ್ದರು. ಅಕ್ಕಿ ನೆನಸಿಟ್ಟು ಅದಕ್ಕೆ ಮೆಂತ್ಯ, ಜೀರಿಗೆ, ಉದ್ದಿನಬೇಳೆ, ಉಪ್ಪುಗಳನ್ನೆಲ್ಲ ಹದವಾಗಿ ಹಾಕಿ, ರುಬ್ಬಿ ಅಣಿಗೊಳಿಸುತ್ತಿದ್ದರಂತೆ. ಈಗ ಮಕ್ಕಳೂ ಅಪ್ಪ ಹೇಳಿಕೊಟ್ಟ ರೆಸಿಪಿಯನ್ನೇ ಅನುಸರಿಸಿದ್ದಾರೆ. ಇಂದಿಗೂ ಒಮ್ಮೆಲೇ ದೋಸೆ ಹಿಟ್ಟು ಸಿದ್ಧಗೊಳಿಸುವುದಿಲ್ಲ. ಬದಲಿಗೆ ದಿನಕ್ಕೆ ಮೂರು ಸಲ ಹಿಟ್ಟು ಬೀಸಿ, ಎರೆದು ಕೊಡುತ್ತಾರೆ. ಮಸಾಲೆ ದೋಸೆಯೊಳಗೆ ಪುಟಾಣಿ ಹುಣಸೆಹಣ್ಣು, ಖಾರದಪುಡಿ, ಕೊಬ್ಬರಿ ಉಪ್ಪು ಹಾಕಿ ಹದಗೊಳಿಸಿದ ಪುಡಿ ಚಟ್ನಿ, ಬಟಾಟೆ ಪಲ್ಯ ಹಾಕಿ ಕೊಡುತ್ತಾರೆ.
“57 ವರ್ಷದಿಂದ ಅಪ್ಪ ಹೇಳಿಕೊಟ್ಟ ಮಾದರಿಯಲ್ಲೇ ಹೋಟೆಲ್ ನಡೆಸಲಾಗುತ್ತಿದೆ. 1961ರಲ್ಲಿ ಒಂದು ಮಸಾಲೆ ದೋಸೆಗೆ 25 ಪೈಸೆ ಇತ್ತು. ಆಗ ಚಹಾಕ್ಕೆ 2 ಅಣೆ. ಮೂರಾಣೆ ಮಾಡಿದ್ದಕ್ಕೆ ಗಲಾಟೆ ಕೂಡ ಆಗಿತ್ತು. ಇಂದು ನಿರ್ವಹಣಾ ವೆಚ್ಚ, ಕೂಲಿ, ಆಹಾರ ಸಾಮಗ್ರಿಗಳ ಬೆಲೆ ಏರಿಕೆ ಕಾರಣದಿಂದ ದೋಸೆಗೆ 35 ರೂ. ಮಾಡಿದ್ದೇವೆ. ಹೋಟೆಲ್ ನಿರ್ವಹಣೆ ಸುಲಭದ್ದಲ್ಲ. ಅದರದ್ದೇ ಆದ ಕಷ್ಟಗಳೂ ಇವೆ. ಆದರೆ, ನಮಗೆ ಬೇರೆ ಗೊತ್ತಿಲ್ಲ. ಗುಣಮಟ್ಟ ಕಾಯ್ದುಕೊಳ್ಳಬೇಕಾದ ಜವಾಬ್ದಾರಿಗೆ ಹೆಗಲು ಕೊಟ್ಟಿದ್ದೇವೆ. ನಮ್ಮ ಗ್ರಾಹಕರಿಗೆ ಖುಷಿ. ಅದೇ ನಮಗೆ ಸಂತೃಪ್ತಿ ಎನ್ನುತ್ತಾರೆ’ ವಾಸುದೇವ ನಾಯಕ.
ಸತ್ಕಾರದಲ್ಲಿ ಕೇವಲ ದೋಸೆ ಮಾತ್ರವಲ್ಲ. ಕಟ್ಲೆàಟ್, ಮೊಸರು ವಡೆ ಕೂಡ ಸೂಪರ್ ಎನ್ನುವವವರೂ ಇದ್ದಾರೆ. ಉತ್ತರ ಭಾರತೀಯ ತಿಂಡಿಗಳಿಗಾಗಿ ಈಗ ನ್ಯೂ ಸತ್ಕಾರ ಕೂಡ ಆರಂಭಿಸಿದ್ದಾರೆ. ಇಡ್ಲಿ, ಉಪ್ಪಿಟ್ಟು, ಪೂರಿ, ದೋಸೆ, ಬೋಂಡಾ, ಕೊಲ್ಲಾಪುರ ಸ್ವೀಟ್‌ಗಳೂ ಇವೆ. ಆದರೆ, ಹೋಟೆಲ್‌ಗೆ ಬರುವ ಗ್ರಾಹಕರಲ್ಲಿ ಇಂದಿಗೂ ಶೇ.60ಕ್ಕೂ ಹೆಚ್ಚು ದೋಸೆ ಬೇಕು ಎನ್ನುವವರೇ.
ಇನ್ನು ಮಲೆನಾಡು ಸೀಮೆಯಲ್ಲಿ ದೋಸೆ ಎಂದರೆ ಪ್ರತಿ ಮನೆಯ ಬೆಳಗು. ಸತ್ಕಾರ ಇಲ್ಲಿನ ಸಂಪ್ರದಾಯ, ಜೀವನ ವಿಧಾನ. ದೋಸೆ ಹಾಗೂ ಸತ್ಕಾರ ಎರಡೂ ಜೊತೆಯಾಗಿ ಶಿರಸಿ ಪೇಟೆಯಲ್ಲಿ “ಸತ್ಕಾರ ದೋಸೆ’ ಆಗಿದೆ.
ಮಾಹಿತಿಗೆ- 08384-226481
– ರಾಘವೇಂದ್ರ ಬೆಟ್ಟಕೊಪ್ಪ