ಹುಬ್ಬಳ್ಳಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಿಂದೂ ಪದದ ಕುರಿತು ನೀಡಿದ ಹೇಳಿಕೆ ಖಂಡನೀಯ. ಅದು ಅವರ ವೈಯಕ್ತಿಕ ಅಭಿಪ್ರಾಯ. ಪಕ್ಷಕ್ಕೂ ಅದಕ್ಕೂ ಸಂಬಂಧ ಇಲ್ಲ. ಈ ಕುರಿತು ಸ್ಪಷ್ಟೀಕರಣ ಕೇಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಬಹುಧರ್ಮ, ಬಹುಭಾಷೆ ಒಪ್ಪುವ ಪಕ್ಷ. ಯಾರ ಭಾವನೆಗೂ ನಾವು ಧಕ್ಕೆ ತರಲು ಬಯಸುವುದಿಲ್ಲ. ನಾನು ಕೂಡಾ ಒಬ್ಬ ಹಿಂದೂ. ನಮಗೆ ನಮ್ಮದೇಯಾದ ಇತಿಹಾಸವಿದೆ. ಹೀಗಾಗಿ ಸತೀಶ ಹೇಳಿಕೆ ವೈಯಕ್ತಿಕ ವಿಚಾರ. ಅವರು ತಮ್ಮ ಮನೆಯಲ್ಲಿ ಏನಾದರೂ ಮಾತನಾಡಿದರೆ ಏನೂ ಆಗುವುದಿಲ್ಲ. ಆದರೆ ಸಾರ್ವಜನಿಕವಾಗಿ ಮಾತನಾಡುವಾಗ ಹೀಗೆ ಆಗಬಾರದು ಎಂದರು.
ಭಾರತ ಜೋಡೋ ಯಾತ್ರೆ ವಿಡಿಯೋಗೆ ಕೆಜಿಎಫ್-2 ಸೇರಿ ಸಿನಿಮಾ ಹಾಡುಗಳನ್ನು ತಮ್ಮ ವಿಡಿಯೋಗಳಿಗೆ ಹಾಕುವುದು ಸಾಮಾನ್ಯ. ಭಾರತ ಜೋಡೋ ಯಾತ್ರೆಯ ಯಶಸ್ಸು ಕಂಡು ಬಿಜೆಪಿಗೆ ಭಯವುಂಟಾಗಿದೆ. ಈ ಹಿಂದೆ ಗಾಂಧೀಜಿ ಬ್ರಿಟಿಷರನ್ನು ಓಡಿಸಲು ಭಾರತ ಚೋಡೋ ಯಾತ್ರೆ ಮಾಡಿದರೆ, ಮೋದಿ ದೇಶ ಒಡೆಯಲು ಭಾರತ ತೋಡೋ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ದೇಶ ಒಗ್ಗೂಡಿಸಲು ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ. ಕಾಂಗ್ರೆಸ್ ಯಾತ್ರೆ ಸಹಿಸಲಾಗದೇ ಬಿಜೆಪಿಯವರು ಅದನ್ನು ನಿಲ್ಲಿಸಲು ಏನೇನೋ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಸಚಿವ ಭೈರತಿ ಬಸವರಾಜ ಬೀದಿ ಬದಿ ವ್ಯಾಪಾರಸ್ಥರಿಂದ 15 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಕೇವಲ ಅವರಷ್ಟೇ ಅಲ್ಲ, ಇಡೀ ಬಿಜೆಪಿ ಸರ್ಕಾರ ನಿಂತಿರುವುದೇ ಕಮಿಷನ್ ಮೇಲೆ. ಇದು ಲಂಚ ಮತ್ತು ಕಮಿಷನ್ ಸರ್ಕಾರ. ಇವರು ಬೀದಿ ವ್ಯಾಪಾರಿಗಳಿಂದ ಹಿಡಿದು ಯಾರನ್ನೂ ಬಿಡುವುದಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರೇ ಇದಕ್ಕೆ ಉತ್ತರ ಕೊಡಬೇಕು. ಬೀದಿ ಬದಿ ವ್ಯಾಪಾರಿಗಳಿಂದಲೂ ಹಣ ಪಡೆಯುತ್ತಾರೆಂದರೆ ಬಿಜೆಪಿ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂಬುದಕ್ಕೆ ಇದು ಉದಾಹರಣೆ ಎಂದರು.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಬೇಕೆಂದು ಕೆಲವು ಸಂಘಟನೆ, ಪಕ್ಷದವರು ಕೇಳುತ್ತಿದ್ದಾರೆ. ಆದರೆ ಅನಗತ್ಯ ಗೊಂದಲಕ್ಕೆ ಅವಕಾಶ ನೀಡಬಾರದು. ಇಷ್ಟು ವರ್ಷಗಳ ಕಾಲ ಹೇಗೆ ನಡೆದುಕೊಂಡು ಬಂದಿತ್ತೋ ಹಾಗೆ ಮುಂದುವರಿಯಬೇಕು. ಈ ರೀತಿಯ ವಿಚಾರಗಳಿಂದ ಶಾಂತಿ ಕದಡಬಾರದು. ಜಾತ್ಯತೀತ ಸಮಾಜ ಇರಬೇಕು. ನ.14ರಂದು ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯದಿಂದ ನೋಟಿಸ್ ಬಂದಿದೆ. ಸಮನ್ಸ್‌ಗೆ ಗೌರವ ಕೊಡಬೇಕು. ಅದೇ ದಿನ ನೆಹರು ಜಯಂತಿ ಕಾರ್ಯಕ್ರಮವಿದೆ. ನನ್ನ ಸಹೋದರ ಅಲ್ಲಿಗೆ ಹೋಗಿದ್ದರು. ಏನಾಯ್ತು ಎಂದು ಇನ್ನೂ ಕೇಳಿಲ್ಲ. ನಮ್ಮ ವಕೀಲರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.