ಸತೀಶ್ ನೀನಾಸಂ ಅಭಿನಯದ “ಗೋಧ್ರಾ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಸದ್ಯದಲ್ಲೇ ಅವರ ಇನ್ನೊಂದು ಚಿತ್ರ “ಅಯೋಗ್ಯ’ದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಮಧ್ಯೆ ಅವರು ತಮ್ಮ ಬ್ಯಾನರ್ನಿಂದ ಹೊಸ ಚಿತ್ರವನ್ನು ಪ್ರಾರಂಭಿಸುವ ಉತ್ಸಾಹದಲ್ಲಿದ್ದಾರೆ. ಚಿತ್ರದ ಹೆಸರು “ರಾಮ ಕಾಡಿಗೆ ಹೋದ’. ಈ ಚಿತ್ರವನ್ನು ವಿಕ್ಕಿ ಮತ್ತು ವಿನಯ್ ಎನ್ನುವವರು ನಿರ್ದೇಶಿಸುತ್ತಿದ್ದು, ಸದ್ದಿಲ್ಲದೆ ತಯಾರಿಗಳು ನಡೆಯುತ್ತಿದೆ. ಮುಂದಿನ ಒಂದೆರೆಡು ತಿಂಗಳಲ್ಲಿ ಈ ಚಿತ್ರ ಶುರುವಾಗಲಿದೆಯಂತೆ.
ಈ ಮಧ್ಯೆ ಸತೀಶ್ ಸದ್ಯದಲ್ಲೇ ತಮಿಳು ಚಿತ್ರವೊಂದರಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಹಾಗಂತ ಅವರೇ ಟ್ವೀಟ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪ್ರೇಕ್ಷಕರ ಬೆಂಬಲವನ್ನೂ ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, “ತಮಿಳು ಮತ್ತು ಹಿಂದಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದೇನೆ. ನೀವು ಕೊಟ್ಟ ನಿರಂತರ ಬೆಂಬಲ ಹೀಗೆ ಇರಲಿ. ಶೀಘ್ರದಲ್ಲಿ ಮೊದಲ ವಿನ್ಯಾಸ ಬಿಡುಗಡೆಯಾಗಲಿವೆ’ ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರವನ್ನು ಅನೀಸ್ ಎನ್ನುವವರು ನಿರ್ದೇಶಿಸುತ್ತಿದ್ದು, ಮುಂದಿನ ತಿಂಗಳು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗುತ್ತದಂತೆ. ಆ ಸಂದರ್ಭದಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುವುದಾಗಿ ಹೇಳುತ್ತಾರೆ. ಈ ಚಿತ್ರದಲ್ಲಿ ಸತೀಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಉಳಿದಂತೆ ಕಲಾವಿದರ ಆಯ್ಕೆ ಸದ್ಯದಲ್ಲೇ ನಡೆಯಲಿದೆ. ಇದಲ್ಲದೆ ಮುಂದಿನ ವರ್ಷ ಬಾಲಿವುಡ್ ಚಿತ್ರವೊಂದರಲ್ಲಿ ನಟಿಸುತ್ತಾರಂತೆ ಸತೀಶ್. ಅಷ್ಟೇ ಅಲ್ಲ, ತೆಲುಗು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ನಿರ್ಮಾಣವಾಗುವ ಚಿತ್ರವೊಂದರಲ್ಲೂ ಅವರು ನಟಿಸುತ್ತಿದ್ದಾರಂತೆ.
ಇಷ್ಟರಲ್ಲಾಗಲೇ ಚಿತ್ರದ ಮುಹೂರ್ತವಾಗಬೇಕಿತ್ತು. ಆದರೆ, ಒಂದರ ಹಿಂದೊಂದು ಆಗಲಿ ಎಂದು ಸತೀಶ್ ಹೇಳಿದ್ದರಿಂದ, ಅದು ಸ್ವಲ್ಪ ಮುಂದಕ್ಕೆ ಹೋಗಲಿದೆ. ಇದು ಶುರುವಾಗಬೇಕಿರುವ ಚಿತ್ರಗಳ ಸುದ್ದಿಯಾದರೆ, ಬಿಡುಗಡೆಯಾಗಬೇಕಾದ ಚಿತ್ರಗಳ ಪಟ್ಟಿಯಲ್ಲಿ ಮೊದಲು ನಿಲ್ಲುವುದು “ಟೈಗರ್ ಗಲ್ಲಿ’. ರವಿ ಶ್ರೀವತ್ಸ ನಿರ್ದೇಶನದ ಈ ಚಿತ್ರವು ಅಕ್ಟೋಬರ್ನಲ್ಲಿ ಬಿಡುಗಡೆಯಾಗಲಿದೆ. ಅದಾಗಿ ಎರಡು ತಿಂಗಳ ನಂತರ “ಚಂಬಲ್’. ಅದಾದ ಮೇಲೆ “ಗೋಧ್ರಾ’, “ಅಯೋಗ್ಯ’, “ರಾಮ ಕಾಡಿಗೆ ಹೋದ’, ತಮಿಳು … ಹೀಗೆ ಒಂದರಹಿಂದೊಂದು ಚಿತ್ರಗಳು ಬಿಡುಗಡೆಯಾಗಲಿದೆ.