Advertisement
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಗೋಕಾಕ್ ತಾಪಂ ಸದಸ್ಯರು ರಾಜೀನಾಮೆ ನೀಡಿರುವ ಬಗ್ಗೆ ಅಚ್ಚರಿ ಪಡಬೇಕಾಗಿಲ್ಲ. ಅದು ದಬ್ಟಾಳಿಕೆಯಿಂದ ಆಗಿರುವ ಬೆಳವಣಿಗೆ. ಆದರೆ, ಇದರಿಂದ ಕಾಂಗ್ರೆಸ್ ಪಕ್ಷವನ್ನು ಗೋಕಾಕ್‌ದಿಂದ ಸಂಪೂರ್ಣ ತೆಗೆದುಹಾಕುತ್ತೇವೆಂದು ತಿಳಿದುಕೊಂಡಿದ್ದರೆ, ಅದಕ್ಕಿಂತ ದೊಡ್ಡ ಭ್ರಮೆ ಬೇರೆ ಇಲ್ಲ. ಕಾಂಗ್ರೆಸ್ ಪಕ್ಷವನ್ನು ಅಲ್ಲಿಂದ ಖಾಲಿ ಮಾಡಿಸುವುದು ಸಾಧ್ಯವಾಗದ ಮಾತು ಎಂದು ಕಿಡಿ ಕಾರಿದರು.
ಗೋಕಾಕ್‌ದಲ್ಲಿ ಲಖನ್ ಜಾರಕಿಹೊಳಿ ಮಾತನಾಡಿ, ಸೋದರ ರಮೇಶ್ ಹಾಗೂ ಅಳಿಯ ಅಂಬಿರಾವ್ ಪಾಟೀಲ ಅವರ ಆಟ ಗೋಕಾಕ್ ಕ್ಷೇತ್ರದಲ್ಲಿ ಡಿ.5ರವರೆಗೆ ಮಾತ್ರ ನಡೆಯಲಿದೆ. ಸ್ಥಳೀಯ ಸಂಸ್ಥೆಗಳಲ್ಲಿರುವ ರಮೇಶ್ ಬೆಂಬಲಿತ ಸದಸ್ಯರು ರಾಜೀ ನಾಮೆ ಕೊಟ್ಟು ಹೋದರೆ ನಮಗೇನೂ ಭಯವಿಲ್ಲ. 22, 42 ಹಾಗೂ 52 ಸದಸ್ಯರು ಹೋದರೆ ಹೋಗಲಿ. ನಮ್ಮ ಜೊತೆ ಕ್ಷೇತ್ರದ 2.40 ಲಕ್ಷ ಮತದಾರರಿದ್ದಾರೆ. ಈ ಬೆಂಬಲದ ಮುಂದೆ ಮಾವ-ಅಳಿಯನ ಆಟ ಏನೂ ನಡೆಯದು ಎಂದರು.
Related Articles
Advertisement
ಚುನಾವಣೆ ಬಂದಿರುವುದರಿಂದ ಬ್ಲಾಕ್‌ಮೇಲ್ ಮಾಡಿ ರಾಜೀನಾಮೆ ಕೊಡಿಸುತ್ತಿದ್ದಾರೆ. ಮುಂದೆ ಜಿಪಂ ಸದಸ್ಯರ ರಾಜೀನಾಮೆಯನ್ನೂ ಕೊಡಿಸುತ್ತಾರೆ. ಇದರಿಂದ ನಮಗೇನೂ ಸಮಸ್ಯೆ ಇಲ್ಲ ಎಂದರು. “ನಾನು 25 ವರ್ಷಗಳಿಂದ ಇವರ ಜೊತೆ ರಾಜಕಾರಣ ಮಾಡುತ್ತ ಬಂದಿದ್ದೇನೆ. ಇವರ ಆಟವೆಲ್ಲ ಗೊತ್ತು. ಮಾವ-ಅಳಿಯನ ಭ್ರಷ್ಟಾಚಾರ ಹಾಗೂ ಬ್ಲಾಕ್‌ಮೇಲ್ ಬಂದ್ ಮಾಡಲು ನಾನು ಹಾಗೂ ಸತೀಶ್ ಹೋರಾಟ ಆರಂಭ ಮಾಡಿದ್ದೇವೆ. ಇದರಿಂದ ಹಿಂದೆ ಸರಿಯುವುದಿಲ್ಲ’ ಎಂದು ಕಿಡಿ ಕಾರಿದರು.
ಒಮ್ಮೆ ನಾನು ಸಾವಿರಾರು ಕೋಟಿ ರೂ.ಆಸ್ತಿ ಮಾಡಿದ್ದೇನೆ ಎನ್ನುತ್ತಾನೆ ಸತೀಶ್. ಇನ್ನೊಮ್ಮೆ ಸಾಲಗಾರನಾಗಿದ್ದೇನೆ ಎಂದು ಹೇಳುತ್ತಾನೆ. ಇಂತಹ ಆರೋಪಗಳಿಗೆ ಬಹಿರಂಗ ಸಭೆಯಲ್ಲಿ ಉತ್ತರ ಕೊಡುತ್ತೇನೆ.-ರಮೇಶ್ ಜಾರಕಿಹೊಳಿ, ಅನರ್ಹ ಶಾಸಕ ಎಲ್ಲ ಅನರ್ಹ ಶಾಸಕರಿಗೂ ಬಿಜೆಪಿ ಟಿಕೆಟ್ ಖಚಿತ
ಬೆಳಗಾವಿ: ಮುಂದಿನ ತಿಂಗಳು ನಡೆಯುವ ಉಪಚುನಾವಣೆಯಲ್ಲಿ ಎಲ್ಲ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಸಿಗುವುದು ಖಚಿತ. ಈ ವಿಷಯದಲ್ಲಿ ಸಿಎಂ ಯಡಿಯೂರಪ್ಪ ಅವರ ಮೇಲೆ ನಮಗೆ ಸಂಪೂರ್ಣ ವಿಶ್ವಾಸ ಇದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಉಪಚುನಾವಣೆ ಹಿನ್ನೆಲೆ ಯಲ್ಲಿ ಅಥಣಿಯಲ್ಲಿ ಶನಿವಾರ ತಮ್ಮ ಆಪ್ತ ಅನರ್ಹ ಶಾಸಕ ಮಹೇಶ ಕುಮಟಳ್ಳಿ ಹಾಗೂ ಬೆಂಬಲಿಗರ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ನಾವು ಬಿಜೆಪಿ ಸರ್ಕಾರ ರಚನೆಯಾಗಬೇಕು ಎಂಬ ಉದ್ದೇಶದಿಂದ ರಾಜೀನಾಮೆ ನೀಡಿರಲಿಲ್ಲ. ಮೈತ್ರಿ ಸರ್ಕಾರದ ನಿಲುವು ಹಾಗೂ ನಿರ್ಧಾರ ಸರಿಯಾಗಿರಲಿಲ್ಲ. ಇದೇ ಕಾರಣದಿಂದ ಬೇಸತ್ತು ಹೊರ ಬಂದಿದ್ದೇವೆ ಎಂದರು. ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಚುನಾವಣಾ ಸಿದ್ಧತಾ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಅನರ್ಹ ಶಾಸಕರ ಪರ ಮಾತನಾಡಿದ್ದಾರೆ. ನಮಗೆ ಟಿಕೆಟ್ ನೀಡಬೇಕು ಎಂದು ಬಲವಾಗಿ ಹೇಳಿದ್ದಾರೆ. ಅವರ ಮಾತಿನ ಮೇಲೆ ನಮಗೆ ನಂಬಿಕೆ ಇದೆ. ಹೀಗಾಗಿ, ಎಲ್ಲ ಅನರ್ಹ ಶಾಸಕರೂ ಟಿಕೆಟ್ ಪಡೆಯಲಿದ್ದಾರೆ ಎಂದರು. ಅನರ್ಹ ಶಾಸಕರಿಗೂ, ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎನ್ನುವ ಡಿಸಿಎಂ ಲಕ್ಷ್ಮಣ ಸವದಿಯವರು ಬಹಳ ದೊಡ್ಡ ಮನುಷ್ಯ. ಅವರಿಗೂ, ನಮಗೂ ಯಾವುದೇ ಸಂಬಂಧ ಇಲ್ಲ. ಅಥಣಿ ಕ್ಷೇತ್ರದಿಂದಲೇ ಎಲ್ಲ ನಡೆದು ಹೋಗಿದೆ. ಇಲ್ಲಿ ಮಹೇಶ ಕುಮಟಳ್ಳಿ ಅವರನ್ನು ಮತ್ತೆ ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ರಾಜಕಾರಣ ಎಂಬುದು ಒಂದು ಉದ್ದಿಮೆ ಇದ್ದಂತೆ. ಇಲ್ಲಿ ಬದಲಾವಣೆ ಸಹಜ. ಅದೇ ರೀತಿ ರಾಜಕಾರಣದಲ್ಲೂ ಆಗಾಗ ಬದಲಾವಣೆಗಳು ಆಗುತ್ತವೆ ಎಂದು ಬಿಜೆಪಿ ಸೇರುವ ಸುಳಿವು ನೀಡಿದರು.