Advertisement
ಲೋಕೋಪಯೋಗಿ ಸಚಿವರೂ ಆಗಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ದಸರಾ ನೆಪದಲ್ಲಿ ಜಿಲ್ಲೆಯ 20ಕ್ಕೂ ಹೆಚ್ಚು ಶಾಸಕರನ್ನು ಮೈಸೂರಿನತ್ತ ಕರೆದೊಯ್ಯಲು ಬಸ್ ಸಿದ್ಧಪಡಿಸಿಕೊಂಡಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಅವರ ಕಾರ್ಯತಂತ್ರವೀಗ ಕುತೂಹಲಕ್ಕೆ ಕಾರಣವಾಗಿದೆ.
ಸಿಎಂ ಮತ್ತು ಡಿಸಿಎಂ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದ್ದರೂ ಅನುಸರಿಸಿಕೊಂಡು ಹೋಗಲಾಗುತ್ತಿದೆ. ಇದರೊಂದಿಗೆ ಇತ್ತೀಚೆಗಷ್ಟೇ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸುವ ವಿಚಾರದಲ್ಲಿ ಸಚಿವರಲ್ಲೇ ಪರ-ವಿರೋಧದ ಚರ್ಚೆಗಳಾಗಿದ್ದವು. ಸಚಿವರು ತಮಗೆ ಸ್ಪಂದಿಸುತ್ತಿಲ್ಲ, ಶಾಸಕಾಂಗ ಸಭೆ ಕರೆಯಿರಿ ಎಂದು ಸಿಎಂಗೆ ದೂರು ಸಲ್ಲಿಸಿದ್ದರು. ಈಗ ಮತ್ತೂಮ್ಮೆ ಕಾಂಗ್ರೆಸ್‌ನೊಳಗೆ ಬಣ ರಾಜಕಾರಣ ಕುಡಿಯೊಡೆದಂತಿದ್ದು, ಇದಕ್ಕೆ ಸಚಿವ ಸತೀಶ್ ಮುನ್ನುಡಿ ಬರೆದಿದ್ದಾರೆ.
Related Articles
ಶಾಸಕರ ಮೈಸೂರು ಪ್ರವಾಸದ ವಿಷಯ ತಿಳಿಯುತ್ತಿದ್ದಂತೆ ಮಧ್ಯಪ್ರವೇಶಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗುಂಪು ಕಟ್ಟಿಕೊಂಡು ಎಲ್ಲೂ ಹೋಗದಂತೆ ಬುದ್ಧಿ ಮಾತು ಹೇಳಿದ್ದಾರೆ. ಒಂದೆಡೆ ಬರಗಾಲವಿದೆ, ಇನ್ನೊಂದೆಡೆ ಪಂಚರಾಜ್ಯಗಳ ಚುನಾವಣೆ ಇದೆ. ಇಂಥ ಸಂದರ್ಭದಲ್ಲಿ ಗುಂಪಾಗಿ ಹೋಗುವುದು ಅನಾವಶ್ಯಕವಾಗಿ ವಿಪಕ್ಷದವರಿಗೆ ಆಹಾರ ಕೊಟ್ಟಂತಾಗುತ್ತದೆ. ಹೀಗಾಗಿ ಎಲ್ಲೂ ಹೋಗಬೇಡಿ ಎಂದು ತಾಕೀತು ಮಾಡಿದ್ದಾರೆ.
Advertisement
ಪ್ರವಾಸ ರದ್ದಾಗಿಲ್ಲ, ಮುಂದೂಡಿದ್ದೇವೆಎಲ್ಲಿಯಾದರೂ ಪ್ರವಾಸ ಹೋಗಬೇಕೆಂದು ಶಾಸಕರೊಂದಿಗೆ ಮಾತುಕತೆ ಮಾಡಲಾಗಿತ್ತು. ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ಬರುವಂತೆ ಅಲ್ಲಿನ ಶಾಸಕರಿಂದ ಆಹ್ವಾನವಿತ್ತು. ಹಾಗಾಗಿ ವಿಶೇಷ ಸಂದರ್ಭ ಎಂಬ ಕಾರಣದಿಂದ ನಮ್ಮ ಕೆಲವು ಸಮಾನಮನಸ್ಕ ಶಾಸಕರು ಮೈಸೂರಿಗೆ ತೆರಳುವ ಯೋಜನೆ ಹಾಕಿಕೊಂಡಿದ್ದೆವು. ಎಲ್ಲರೂ ಒಟ್ಟಾಗಿದ್ದೇವೆ. ಪ್ರವಾಸ ರದ್ದಾಗಿಲ್ಲ, ಸದ್ಯಕ್ಕೆ ಮುಂದೂಡಿದ್ದೇವಷ್ಟೇ. ನಮ್ಮಲ್ಲಿ ಬಣ ರಾಜಕಾರಣ ಇಲ್ಲ. ಸಿಎಂ ಹಾಗೂ ಅಧ್ಯಕ್ಷರ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಪ್ರವಾಸ ಮಾಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ಅವರೇ ಸ್ಪಷ್ಟನೆ ನೀಡಿದ್ದಾರೆ. ದುಬಾೖಗೆ ಹಾರಿದ ಕೆಲವು ಶಾಸಕರು?
ಇದೆಲ್ಲದರ ಮಧ್ಯೆ ಸಚಿವ ಸತೀಶ್‌ಜಾರಕಿಹೊಳಿ ಅವರ ಅಣತಿಯಂತೆ ಕೆಲವು ಶಾಸಕರು ಮುಂದಾಲೋಚನೆಯಿಂದ ದುಬಾೖಗೆ ತೆರಳಿರುವ ಮಾಹಿತಿ ಇದ್ದು, ಪಕ್ಷದಲ್ಲಿ ಯಾರಿಗೂ ಅನುಮಾನ ಬರಬಾರದು ಹಾಗೂ ತಪ್ಪು ಸಂದೇಶ ಹೋಗ ಬಾರದೆನ್ನುವ ಕಾರಣಕ್ಕೆ ದಸರಾ ನೆಪ ಒಡ್ಡಿದ್ದರು. ಬೆಳಗಾವಿಯಿಂದ ಮೈಸೂರಿಗೆ ಹೋಗಿ, ಅಲ್ಲಿಂದ ಮಂಗಳೂರು ಅಥವಾ ಬೆಂಗಳೂರಿನ ಮೂಲಕ ಉಳಿದವರೆಲ್ಲರೂ ದುಬಾೖಗೆ ತೆರಳುವ ಮಹಾಯೋಜನೆ ರೂಪಿಸಲಾಗಿತ್ತು. ಎಲ್ಲದಕ್ಕೂ ಹೈಕಮಾಂಡ್ ತಣ್ಣೀರೆರಚಿ ದಂತಾಗಿದೆ ಎಂದು ಮೂಲಗಳು ಹೇಳಿವೆ.