ನವದೆಹಲಿ : ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹಿಂದೂ ಧರ್ಮದ ಕುರಿತಾಗಿ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಎಐಸಿಸಿ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಖಂಡಿಸಿದ್ದಾರೆ.
ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿರುವ ಸುರ್ಜೇವಾಲಾ , ”ಹಿಂದೂ ಧರ್ಮ ಒಂದು ಜೀವನ ವಿಧಾನ ಮತ್ತು ನಾಗರಿಕತೆಯ ವಾಸ್ತವ. ಪ್ರತಿಯೊಂದು ಧರ್ಮ ಮತ್ತು ನಂಬಿಕೆಯನ್ನು ಗೌರವಿಸಲು ಕಾಂಗ್ರೆಸ್ ನಮ್ಮ ರಾಷ್ಟ್ರವನ್ನು ನಿರ್ಮಿಸಿದೆ. ಇದು ಭಾರತದ ಸತ್ವ.ಸತೀಶ್ ಜಾರಕಿಹೊಳಿ ಅವರ ಹೇಳಿಕೆಯು ಅತ್ಯಂತ ದುರದೃಷ್ಟಕರ ಮತ್ತು ತಿರಸ್ಕರಿಸಲು ಅರ್ಹವಾಗಿದೆ. ನಾವು ಅದನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.
ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ “ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ್ ವಿನೂತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದ ಸತೀಶ್ ಜಾರಕಿಹೊಳಿ, ಹಿಂದೂ ಎನ್ನುವುದು ಭಾರತದ ಪದವೇ ಅಲ್ಲ, ಪರ್ಷಿಯನ್ ಪದವಾಗಿದ್ದು, ಅದರ ಅರ್ಥ ಬಹಳ ಕೀಳು ಮಟ್ಟದ್ದಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮಾತ್ರವಲ್ಲದೆ ಟೈಮ್ ಪಾಸಿಗಾಗಿ ಬರೆದ ಪುಸ್ತಕಗಳು ಇಂದು ಗ್ರಂಥಗಳಾಗಿವೆ. ಆ ಗ್ರಂಥಗಳು ಇಂದು ನಮ್ಮನ್ನು ಆಳುವಂತಾಗಿದೆ. ಕೈ, ಕಾಲಿಗೆ ಬೇಡಿ ಹಾಕಿಲ್ಲ ಮೆದುಳಿಗೆ ಬೇಡಿ ಹಾಕಿದ್ದಾರೆ ಎಂದು ಹೇಳಿದ್ದರು.