Advertisement

ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ ತೃಪ್ತಿ: ಪಾಟೀಲ್‌

04:26 PM Feb 05, 2018 | |

ಮುದಗಲ್ಲ: ಸಮೀಪದ ಕನ್ನಾಳ ಗ್ರಾಮದಲ್ಲಿ ಶಾಸಕರ ಅನುದಾನದಡಿ ಮಂಜೂರಾದ ವಿವಿಧ ಕಾಮಗಾರಿಗೆ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್‌ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿದ ಶಾಸಕರು, ಐದು ವರ್ಷದ ಅವಧಿಯಲ್ಲಿ ಒಂದು ಕೋಟಿಗೂ ಅಧಿಕ ಅನುದಾನ ಮೀಸಲಿರಿಸಿ ಗ್ರಾಮೀಣ ಭಾಗಗಳಲ್ಲಿ ಮೂಲ ಸೌಕರ್ಯ ವೃದ್ಧಿಗೆ ಆದ್ಯತೆ ನೀಡಿದ್ದು, ಇದಲ್ಲದೇ ಸರ್ಕಾರದಿಂದ ಕೋಟ್ಯಂತರ ರೂ. ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ ತೃಪ್ತಿ ಎಂದು ಹೇಳಿದರು.

ಈಗಾಗಲೇ ವಾಲ್ಮೀಕಿ ಭವನ, ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ಸಿಸಿ ರಸ್ತೆ ಕಾಮಗಾರಿ ಸೇರಿದಂತೆ ನಾಲ್ಕು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಎರಡು ಅವಧಿಗೆ ಶಾಸಕನಾಗಿ, ಕೇತ್ರದ ಪ್ರತಿ ಹಳ್ಳಿಯಲ್ಲಿ ಸಂಚರಿಸಿ ಜನರ ನಾಡಿ ಮಿಡಿತ ಅರಿತಿದ್ದೇನೆ. ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಜೊತೆಗೆ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿದ ತೃಪ್ತಿ ಇದೆ ಎಂದರು. ಈ ಬಾರಿ ಮಸ್ಕಿ ನೂತನ ತಾಲೂಕು ಕೇಂದ್ರವಾಗಿದ್ದು, ಮತ್ತಷ್ಟು ಅಭಿವೃಧಿ ಕಾರ್ಯ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.

ನೋಟ್‌ ಬ್ಯಾನ್‌ ಮಾಡಿದ್ದೇ ಕೇಂದ್ರದ ಬಿಜೆಪಿ ಸರಕಾರದ ದೊಡ್ಡ ಸಾಧನೆಯಾಗಿದೆ. 2018ರ ಬಜೆಟ್‌ ನಲ್ಲಿ ಸಹ ರೈತರಿಗೆ, ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ಯಾವುದೇ ಯೋಜನೆ ಜಾರಿ ಮಾಡಿಲ್ಲ. ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಜಾತಿಗಳ ಮಧ್ಯೆ ವಿಷದ ಬೀಜ ಬಿತ್ತುವ ಮೂಲಕ ಜನರ ನೆಮ್ಮದಿಗೆ ಭಂಗ ತರುತ್ತಿದೆ ಎಂದು ಆರೋಪಿಸಿದರು.

ಮುಂಬರುವ ಚುನಾವಣೆಯಲ್ಲಿ ಮತ್ತೂಮ್ಮೆ ಜನತೆ ಆಶೀರ್ವದಿಸಬೇಕೆಂದು ಕೋರಿದರು. ಮುಖಂಡ ಯಲ್ಲೋಜಿರಾವ್‌ ಕೋರೆಕರ್‌ ಮಾತನಾಡಿ, ಶಾಸಕರು ಎಲ್ಲರಿಗೂ ಒಳ್ಳೆಯದನ್ನು ಮಾಡಲು ಅಗಿರಲಿಕ್ಕಿಲ್ಲ. ಆದರೆ ಯಾರಿಗೂ ಕೆಟ್ಟದ್ದನ್ನು ಮಾಡಿಲ್ಲ, ಜನರಿಗಾಗಿ ಹಗಲಿರಳು ದುಡಿಯುವ ವ್ಯಕ್ತಿತ್ವ ಶಾಸಕ ಪಾಟೀಲರದಾಗಿದೆ ಎಂದರು.
 
ಜಿಪಂ ಸದಸ್ಯೆ ಅಮರಮ್ಮ ಅಮರೇಶ, ಚನ್ನಬಸನಗೌಡ ಕನ್ನಾಳ, ಶಿವಕುಮಾರ ಮಸ್ಕಿ, ಕನ್ನಾಳ ಗ್ರಾಪಂ ಮಾಜಿ ಅಧ್ಯಕ್ಷೆ ಅಂಗಡಿ ಭಾಗ್ಯಲಕ್ಷ್ಮೀ, ವಿಶ್ವನಾಥ ರಡ್ಡಿ, ನಂದನಗೌಡ ತಿಮ್ಮಾಪುರ, ವೆಂಕನಗೌಡ ಹಡಗಲಿ, ಗಂಗಮ್ಮ ಸೇರಿ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next