Advertisement

ಯಾತ್ರಿ ಜಾತ್ರ್ಯಾಗ ಉತ್ತತಿ ಯಾರಿಗಿ ಸಿಗತೈತೊ ಗೊತಿಲ್ಲ!

12:07 PM Oct 23, 2022 | Team Udayavani |

ಮುಂಜಾನೆ ದೌಡ್‌ ಹೋಗಬೇಕು ನಸಕ್ಲೆ ಏಳು ಅಂತ ಯಜಮಾನ್ತಿಗೆ ಹಾಸಗ್ಯಾಗ ಮಲಕೊಂಡ ಆದೇಶ ಅಲ್ಲ, ಸಣ್ಣಗ ಅಳಿ ಇಟ್ನಿ. ದೌಡ್‌ ಏಳೂದ್ರಿಂದ ನಮಗೈನರ ಸಿಗತೈತನ ಅಂತ ಇನ್‌ ಡೈರೆಕ್ಟ್ ಆಗಿ ಹಟ್ಟೆಬ್ಬಕ ಟೆಂಡರ್‌ ಹಾಕೊ ರೀತಿ ಪ್ರಶ್ನೆ ಮಾಡಿ ಹೊಳ್ಳಿ ಮಲಕೊಂಡ್ಲು.

Advertisement

ಮುಂಜಾನೆ ಯಾಕೊ ಪರಿಸ್ಥಿತಿ ಕೈಕೊಡುವಂಗ ಕಾಣತೈತಿ ಅಂತ ಕತ್ತಲದಾಗ ಸಣ್ಣ ಧ್ವನ್ಯಾಗ ಭರವಸೆ ಇಟ್ಕೊಂಡ್ರ ಏನರ ಆಗೈ ಅಕ್ಕೇತಿ ಅಂತ ನನ್ನ ಗಂಟಲದಿಂದ ಅಕಿ ಕಿವಿಗಿ ತಲುಪುವಷ್ಟ ಸೌಂಡ್‌ ಇಟ್ಟು ಸಂದೇಶ ಕಳಿಸಿದ್ನಿ.

ದೇಶದಾಗ ಕಾಂಗ್ರೆಸ್‌ ಪರಿಸ್ಥಿತಿ ಏನೈತಿ ಅಂತ ಗೊತ್ತಿದ್ರು ರಾಹುಲ್‌ ಗಾಂಧಿ ಪಾದಯಾತ್ರೆ ಮಾಡಾಕತ್ತಾರು. ಅವರ್ನ ನಂಬಿ ಸಿದ್ದರಾಮಯ್ಯ, ಡಿಕೆಶಿ ಅಧಿಕಾರಕ ಬರತೇವಿ ಅನ್ನೊ ಆಸೆಯಿಂದ ಕಾಂಪಿಟೇಶನ್‌ ಮ್ಯಾಲ ಓಡಾಕತ್ತಾರು. ಇನ್ನೊಂದ ಕಡೆ ಬಿಜೆಪ್ಯಾರು ಸಿಎಂ ಬೊಮ್ಮಾಯಿಯವರು ಮಾಜಿ ಸಿಎಂ ಯಡಿಯೂರಪ್ಪ ಅವರ್ನ ಜೋಡಿ ಮಾಡಿ ಜನ ಸಂಕಲ್ಪ ಯಾತ್ರೆ ಶುರು ಮಾಡ್ಕೊಂಡಾರು. ಹಾಲಿ ಮಾಜಿ ಸಿಎಂ ಜೋಡಿಯಾಗಿ ಪ್ರವಾಸ ಮಾಡಾಕತ್ತಿದ್ರಿಂದ ಬಿಜೆಪ್ಯಾರು ಫುಲ್‌ ಖುಷಿಯಾದಂಗ ಕಾಣತೈತಿ. ಯಾಡೂ ಪಾರ್ಟ್‌ಯಾರ ಯಾತ್ರೆದಾಗ ಭಾಷಣ ಕೇಳಿದ್ರ ಬಬ್ರುವಾಹನ ಸಿನೆಮಾದಾಗ ಅರ್ಜುನ ಬಬ್ರುವಾಹನನ ಡೈಲಾಗ್‌ ಬಂದಂಗ ಬರಾಕತ್ತಾವು. ಅದ್ರಾಗ ಬೊಮ್ಮಾಯಿ ಎಸ್ಸಿ ಎಸ್ಟಿ ಸಮು ದಾಯದಾರಿಗೆ ಮೀಸಲಾತಿ ಹೆಚ್ಚಿಗಿ ಮಾಡಿದ್ರಿಂದ ಅದ ಮುಂದಿನ ಇಲೆಕ್ಷನ್ಯಾಗ ಮತ್ತ ಪಕ್ಷಾ ಅಧಿಕಾರಕ್ಕ ತರಾಕ ಅನುಕೂಲ ಆಗಬೌದು ಅನ್ನೊ ಲೆಕ್ಕಾಚಾರದಾಗ ಇದ್ದಂಗ ಐತಿ.

ಬಿಜೆಪಿ ಅಂದ್ರ ಬರೇ ಮೇಲ್ಜಾತ್ಯಾರ ಪಾರ್ಟಿ ಅನ್ನೊದ್ನ ತಪ್ಪಿಸಿ ಎಲ್ಲಾ ಜಾತ್ಯಾರ್ಗು ಅವಕಾಶ ಕೊಡತೇವಿ ಅನ್ನೂದ್ನ ಜನರಿಗೆ ಮುಟ್ಟಸು ಪ್ರಯತ್ನ ಮಾಡಾಕತ್ತಾರು. ಹಂಗ ಮಾಡಕೋಂತನ ಕಾಂಗ್ರೆಸ್ಸಿನ ಒಂದೊಂದ ಓಟ್‌ ಬ್ಯಾಂಕ್ನ ತಮ್ಮ ಕಡೆ ಸೆಳ್ಯಾಕ್‌ ಟ್ರಾಯ್‌ ಮಾಡಾಕತ್ತಾರು ಅಂತ ಅನಸ್ತೈತಿ.

ಇದರ ನಡಕ ಕಾಂಗ್ರೆಸ್‌ ನ್ಯಾರು ಮಲ್ಲಿಕಾರ್ಜುನ ಖರ್ಗೆನ ಎಐಸಿಸಿ ಅಧ್ಯಕ್ಷರ್ನ ಮಾಡಿ ಮುಳಗು ಮನಷ್ಯಾಗ ಹುಲ್ಲ ಕಡ್ಡಿ ಆಸರೆ ಅನ್ನುವಂಗ ಅವರೂ ದಲಿತರ ಓಟ್‌ ಬ್ಯಾಂಕ್‌ ಮ್ಯಾಲ ಕಣ್‌ ಇಟ್ಕೊಂಡು ಕುಂತಾರನಸ್ತೈತಿ. ಇದೊಂದು ರೀತಿ ಟಿ ಟೊಂಟಿ ಮ್ಯಾಚ್‌ ನಡದಂಗ ನಡ್ಯಾಕತ್ತೇತಿ, ಯಾವಾಗ ಯಾರ್‌ ಕಡೆ ಟರ್ನ್ ಅಕ್ಕೇತೊ ಗೊತ್ತಿಲ್ಲಾ.

Advertisement

ಖರ್ಗೆಯವರು ಅಷ್ಟು ದೊಡ್ಡ ಮಟ್ಟದ ನಾಯಕ ಆಗಿ ರಾಷ್ಟ್ರ ಮಟ್ಟದಾಗ ಹೆಸರು ಮಾಡಿದ್ರೂ, ಅವರ ಸಾಮರ್ಥ್ಯ ಮತ್ತ ಸಾಧನೆ ಮ್ಯಾಲ ಆಯ್ಕೆ ಮಾಡ್ಯಾರು ಅನ್ನೂದ್ಕಿಂತ ದಲಿತ ನಾಯಕನ ಆಯ್ಕೆ ಮಾಡೇವಿ ಅಂತ ಹೇಳ್ಳೋದನ ಅವರಿಗೆ ಮಾಡೊ ಅವಮಾನ ಅಂತ ಅನಸ್ತೈತಿ. ಅವರ ಜಾತಿ ಕಾರಣಕ್ಕ ಅವರ ಸಾಧನೆನೂ ಅದ ಮಾನದಂಡದಾಗ ಅಳಿಯೋದು ನಮ್ಮ ಸಮಾಜದಾಗ ಇರೋ ಜಾತಿ ವ್ಯವಸ್ಥೆ ಬ್ಯಾನಿ ಯಾ ಮಟ್ಟಿಗಿ ಐತಿ ಅನ್ನೂದು ಗೊತ್ತಕ್ಕೆತಿ. ಇದರ ವಿರುದ್ದ ಇನ್ನೊಂದು ವಾದಾನೂ ಐತಿ. ಅದರ ಬಗ್ಗೆನೂ ಎಲ್ಲಾರೂ ಯೋಚನೆ ಮಾಡೂದ್ರಾಗ ತಪ್ಪಿಲ್ಲಾ ಅಂತ ಅನಸ್ತೈತಿ.

ಮೀಸಲಾತಿನ ತೊಗೊಂಡಾರ ತೊಗೊಳ್ಳಾಕತ್ತಾರು. ಹಿಂಗಾಗೆ ಎಲ್ಲಾ ದಲಿತ್ರು ಉದ್ದಾರ ಆಗಾಕ ಆಗಿಲ್ಲ ಅನ್ನೊ ಮಾತೈತಿ. ಅದು ಖರೇನು ಅನಸ್ತೈತಿ. ಮೀಸಲಾತಿ ತೊಗೊಂಡಾರು ಅದ್ನ ಅದ ಜಾತ್ಯಾರಿಗೆ ಬಿಟ್‌ ಕೊಟ್ರ ಎಲ್ಲಾರಿಗೂ ಮೀಸಲಾತಿನೂ ಸಿಕ್ಕಂಗ ಅಕ್ಕೇತಿ. ಜಾತಿ ವ್ಯವಸ್ಥೆನೂ ಸಣ್ಣಗ ಕಡಿಮಿ ಅಕ್ಕೆತಿ ಅಂತ ಅನಸ್ತೈತಿ. ಅದ್ಕ ಈಗ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿ ಆಗಬೇಕು ಅನ್ನೋದು ಚರ್ಚೆ ಶುರುವಾಗೈತಿ ಅಂತ ಕಾಣತೈತಿ. ಬಿಜೆಪ್ಯಾರಿಗೆ ಅದನ್ನ ಜಾರಿ ಮಾಡಬೇಕು ಅನ್ನೊ ಮನಸ್‌ ಇದ್ದಂಗೈತಿ, ಅದು ಬರೆ ಎಸ್ಸಿ ಸಮುದಾಯದಾರಿಗೆ ಅಷ್ಟ ಐತೆಂತ, ಎಸ್ಟಿಗೋಳು, ಒಬಿಸಿ ಎಲ್ಲಾದ್ರಾಗೂ ಒಳ ಮೀಸಲಾತಿ ಜಾರಿ ಮಾಡೂದ್ರ ಬಗ್ಗೆ ಯೋಚನೆ ಮಾಡಿದ್ರ ಚೊಲೊ ಅನಸ್ತೈತಿ.

ಎಲ್ಲಾ ಮೀಸಲಾತ್ಯಾಗೂ ತೊಗೊಂಡಾರ ತೊಗೊಳ್ಳಾಕತ್ತಾರು ಅನ್ನೋ ಆರೋಪ ಐತಿ. ಹಿಂಗಾಗಿ ಯಾರ್‌ ಯಾರ್‌ ಎಷ್ಟೆಷ್ಟ್ ಮಂದಿ ಅದಾರು ಅಷ್ಟು ಹರದ್‌ ಹಂಚಿ ಬಿಡೂದುಚೊಲೊ ಅನಸ್ತೈತಿ. ಯಾಕಂದ್ರ ಸೆಂಟ್ರಲ್‌ ಗೌರ್ಮೆಂಟ್‌ ನೂ ಜನರಲ್‌ ನ್ಯಾರಿಗೆ ಹತ್ತು ಪರ್ಶೆಂಟ್‌ ಮೀಸಲಾತಿ ಕೊಡ್ತೇವಿ ಅಂತ ಹೇಳಿದ ಮ್ಯಾಲ. ಮೀಸಲಾತಿಗೆ ಲಿಮಿಟ್‌ ಮಾಡೂದ್ರಾಗ ಏನ್‌ ಅರ್ಥ ಐತಿ?

ಇದನ್ನೂ ಓದಿ:ರಾಜ್ಯದ ಭಾಷೆ ಸಂಸ್ಕೃತಿ ಹಾಗೂ ಇತಿಹಾಸವನ್ನು ತಿರುಚಿ ನಾಶಪಡಿಸಲಾಗುತ್ತಿದೆ: ರಾಹುಲ್ ಗಾಂಧಿ

ರಾಜ್ಯದಾಗ ಈಗಿನ ಪರಿಸ್ಥಿತಿ ನೋಡಿದ್ರ ಎಲೆಕ್ಷನ್ಯಾಗ ಮೀಸಲಾತಿನ ಮೇಜರ್‌ ಸಬ್ಜೆಕ್ಟ್ ಆಗೋವಂಗ ಕಾಣತೈತಿ. ಯಾಕದಂದ್ರ ರಾಜ್ಯದಾಗ ಎಲ್ಲಾ ಜಾತ್ಯಾರು ಒಂದಿಲ್ಲೊಂದು ರೀತಿ ಮೀಸಲಾತಿ ಕೇಳಾಕತ್ತಾರು. ಎಲೆಕ್ಷನ್‌ ನ್ಯಾಗ ಹೆಂಗ್‌ ತಿರಗತೈತೊ, ಯಾರಿಗಿ ಲಕ್‌ ಹೊಡಿತೈತೊ ಗೊತ್ತಿಲ್ಲ. ನಮ್ಮ ದೇಶದಾಗ ಮೀಸಲಾತಿ ಮತ್ತ ಜಾತಿ ವ್ಯವಸ್ಥೆ ಒಂದಕ್ಕೊಂದು ಎದರಾಬದರಾ ಇದ್ದಂಗ ಕಾಣತೈತಿ. ಜಾತಿ ವ್ಯವಸ್ಥೆ ಹೋಗದ ಮೀಸಲಾತಿ ಹೋಗುದಿಲ್ಲ ಅನ್ನಾರದು ಒಂದ ವಾದ ಆದ್ರ, ಮೀಸಲಾತಿ ಇರುಮಟಾ ಜಾತಿ ಪದ್ದತಿ ಹೋಗೂದಿಲ್ಲ ಅನ್ನಾರ್ದು ಇನ್ನೊಂದು ವಾದ. ಮೀಸಲಾತಿ ಇರಬಾರದು ಅಂದ್ರ ಜಾತಿ ಪದ್ದತಿ ಇರಬಾರದು, ಇದೊಂದು ರೀತಿ ಮದುವಿ ಆಗುಮಟಾ ಹುಚ್‌ ಬಿಡುದಿಲ್ಲ. ಹುಚ್‌ ಬಿಡುಮಟಾ ಮದುವಿ ಆಗೋದಿಲ್ಲ ಅಂದಂಗ ಐತಿ.

ಈ ಮೀಸಲಾತಿನ ಇಷ್ಟು ವರ್ಷದಿಂದಾನೂ ಕೊಟಗೊಂತ ಬಂದ್ರುನು ಸಮಾಜದಾಗ ಸಿಗದಿರೋರ ಜಾಸ್ತಿ ಅದಾರು ಅಂದ್ರ ಅದೆಲ್ಲೊ ವ್ಯವಸ್ಥೆದಾಗ ಪ್ರಾಬ್ಲಿಂ ಐತಿ ಅಂತ ಅನಸ್ತೈತಿ. ಆದ್ರ ಅಧಿಕಾರಕ್ಕ ಬಂದಾರೆಲ್ಲಾ ಅಭಿವೃದ್ದಿ ಮಾಡತೇವಿ ಅಂತಾರು. ಜನರೂ ಒಂದಿಲ್ಲಾ ಒಂದೀನಾ ತಮ್ಮ ಜೀವನದಾಗೂ ಹಟ್ಟೆಬ್ಬ ಬರತೇತಿ ಅಂತ ರಾಹುಲ್‌ ಗಾಂಧಿಯಂಗ ಭರವಸೆ ಇಟ್ಕೊಂಡು ನಡದ ನಡ್ಯಾಕತ್ತಾರು.

ನಮ್ಮ ಜನರು ಜೀವನದಾಗ ಏನ್‌ ಅಕ್ಕೇತೊ ಬಿಡತೈತೊ ಆದ್ರ ಏನರ ಅಕ್ಕೇತಿ ಅಂತ ಭರವಸೆದಾಗ ಬದುಕೂದ ಜೀವನಾ. ಅದ್ಕ ಯಜಮಾನ್ತಿಗಿ ಹಟ್ಟೆಬ್ಬಕ್ಕ ಏನರ ಅಕ್ಕೇತಿ ಅನ್ನೂ ನಂಬಿಕ್ಯಾಗ ಮಲಕೊ ಅಂತ ಅಜ್ಜು ಮಾಡ್ಸಿದಿನಿ

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next