Advertisement
ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಅರಳಿದ್ದ ಗಾಯನಲೋಕದ ದೈತ್ಯರಾಗಿದ್ದ ಕೆದ್ಲಾಯರು ಅತೀ ಸಣ್ಣ 46 ನೇ ವಯಸ್ಸಿನಲ್ಲಿ ಯಕ್ಷರಂಗವನ್ನು ಅಗಲಿದ್ದಾರೆ. ಮಧುಮೇಹದ ಸಮಸ್ಯೆಯಿಂದ ಬಳುತ್ತಿದ್ದ ಅವರು ತನ್ನ ದೇಹದ ಮೇಲಿನ ಪರಿಣಾಮ ಮರೆತು ವೃತ್ತಿ ಮತ್ತು ಹವ್ಯಾಸಿ ಮೇಳಗಳ ಆಟಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತಿದ್ದರು.
Related Articles
Advertisement
ಯಕ್ಷರಂಗದ ದಿಗ್ಗಜರಾದ ಚಿಟ್ಟಾಣಿ ರಾಮಚಂದ್ರ ಹೆಗಡೆ ಕೋಡಿ ಶಂಕರ ಗಾಣಿಗ, ಮೊಳಹಳ್ಳಿ ಹೆರಿಯ ನಾಯ್ಕ, ನೀಲಾವರ ಮಹಾಬಲ ಶೆಟ್ಟಿ, ಮಾರ್ಗೋಳಿ ಗೋವಿಂದ ಸೇರಿಗಾರ್ , ಬಳ್ಕೂರು ಕೃಷ್ಣಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ , ಹವ್ಯಾಸಿ ರಂಗದ ಡಾ.ಭಾಸ್ಕರಾನಂದ ಕುಮಾರ್, ಸುಜಯೀಂದ್ರ ಹಂಜೆ, ಶಶಾಂಕ್ ಪಟೇಲ್, ಸುಧೀರ್ ಉಪ್ಪೂರು ಮುಂತಾದವರನ್ನು ಕುಣಿಸಿದ ಕೀರ್ತಿ ಕೆದ್ಲಾಯರದ್ದು.
ಪರಂಪರೆಯ ಚೌಕಟ್ಟಿನೊಳಗೆ ಪದ್ಯದ, ಸಾಹಿತ್ಯ ವನ್ನು ಸ್ಪಷ್ಟವಾಗಿ ಸಂದರ್ಭಕ್ಕನುಗುಣವಾಗಿ ಹಾಡುತ್ತಿದ್ದುದು ಕೆದ್ಲಾಯ ಭಾಗವತರ ಹೆಚ್ಚುಗಾರಿಕೆ.
ಉತ್ತಮ ಸ್ವರತ್ರಾಣ ಹೊಂದಿದ್ದ ಕೆದ್ಲಾಯರು ವೀರರಸವಾಗಲಿ, ಶೃಂಗಾರವಾಗಿ ಬಣ್ಣದ ವೇಷದ ಆರ್ಭಟವಾಗಲಿ ಪರಿಪೂರ್ಣ ನ್ಯಾಯ ಒದಗಿಸುತ್ತಿದ್ದರು.
ಭಾಗವತ ಮೊದಲ ವೇಷಧಾರಿ ಎನ್ನುವುದನ್ನು ತಿಳಿದಿದ್ದ ಕೆದ್ಲಾಯರು ವಿದ್ಯಾರ್ಥಿಗಳನ್ನು ರಂಗದಲ್ಲೇ ತಿದ್ದುತ್ತಿದ್ದರು. ಕೆದ್ಲಾಯರ ಪದ್ಯಗಳಿಗೆ ಒಮ್ಮೆ ವೇಷ ಮಾಡಿದವರು ಇನ್ನೊಂದು ಬಾರಿ ಅವರೆದುರು ಕುಣಿಯಲು ಇದೆ ಎಂದು ತಿಳಿದಲ್ಲಿ ಖಚಿತ ಅಭ್ಯಾಸ ಮಾಡಿಯೇ ರಂಗವೇರುತ್ತಿದ್ದರು. ಯಾವುದರಲ್ಲೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ ಕೆದ್ಲಾಯರು,ಕೆದ್ಲಾಯರ ರಂಗದ ಮೇಲಿನ ಶಿಸ್ತು ಪ್ರದರ್ಶನದ ಯಶಸ್ಸಿಗೆ ಕಾರಣವಾಗುತ್ತಿತ್ತು.
ಯಾವುದೇ ಪ್ರಸಂಗಕ್ಕೆ ಸೈ ಎನಿಸಕೊಂಡಿದ್ದ ಕೆದ್ಲಾಯರು ಅಪಾರ ಪ್ರೀತಿ ಇರಿಸಿದ್ದು ಪೌರಾಣಿಕ ಪ್ರಸಂಗಳ ಮೇಲೆ. ತಾಮ್ರಧ್ವಜ ಕಾಳಗ, ಜಾಂಬವತಿ ಕಲ್ಯಾಣ, ಧ್ರುವ ಚರಿತ್ರೆ, ವಾಲಿವಧೆ, ಪಂಚವಟಿ , ಸುಧನ್ವಾರ್ಜುನ, ಶಶಿಪ್ರಭಾ ಪರಿಣಯ ಮೊದಲಾದ ಪ್ರಸಂಗಗಳು ಕೆದ್ಲಾಯರ ನೆಚ್ಚಿನ ಪ್ರಸಂಗವಾಗಿದ್ದವು. ಇಂತಹ ಕ್ಲಿಷ್ಟಕರ ಬಂಧಗಳಿಗರುವ ಪದ್ಯಗಳಿಗೆ ಕೆದ್ಲಾಯರು ಸರ್ವ ರೀತಿಯಲ್ಲೂ ನ್ಯಾಯ ಒದಗಿಸಿಕೊಡುತ್ತಿದ್ದರು.
ಕೇಂದ್ರದಲ್ಲಿ ಗುರುವಾಗಿಯೂ ವಿದ್ಯೆಯನ್ನು ಧಾರೆ ಎರೆದಿದ್ದ ಕೆದ್ಲಾಯರಿಗೆ ಹಲವು ಶಿಷ್ಯರಿದ್ದಾರೆ. ಅವರಲ್ಲಿ ಪ್ರಖ್ಯಾತ ಭಾಗವತ ರಾದ ಜನ್ಸಾಲೆ ರಾಘವೇಂದ್ರ ಆಚಾರಿ, ಚಂದ್ರಕಾಂತ ಮೂಡುಬೆಳ್ಳೆ,ಪ್ರಸಾದ್ ಮೊಗೆ ಬೆಟ್ಟು ಪ್ರಮುಖರು.
ಹಟ್ಟಿಯಂಗಡಿ, ಕಮಲಶಿಲೆ ಮೇಳಗಳಲ್ಲಿ ಅತಿಥಿ ಭಾಗವತರಾಗಿ ಎಲ್ಲಾ ರೀತಿಯ ಪ್ರಸಂಗಳ ಪದ್ಯಗಳಿಗೆ ನ್ಯಾಯ ಒದಗಿಸುತ್ತಿದ್ದರು.
ತನ್ನ ಎಡೆ ಬಿಡದ ನಿರಂತರ ಸೇವೆಯಲ್ಲಿ ಎಂದೂ ಕಳಪೆ ಪ್ರದರ್ಶನ ನೀಡದ,ಯಕ್ಷಗಾನ ಭಾಗವತಿಕೆಯ ಚೌಕಟ್ಟನ್ನು ಮೀರದ ಕೆದ್ಲಾಯರು ಕೊನೆಯಲ್ಲಿ ತೀವ್ರ ಅನಾರೋಗ್ಯದ ನಡುವೆಯೂ ಆಕಾಶವಾಣಿಯಲ್ಲಿ ಧ್ವನಿ ಮುದ್ರಣ ಕಾರ್ಯಕ್ರಮಕ್ಕೆ ಭಾಗವತಿಕೆ ಮಾಡಿದ್ದರು.
ಮನೆಯಲ್ಲಿ ಮಲಗಿದ್ದ ಅವರು ಅಭಿಮಾನಿಗಳ ಕರೆಗೆ ಓಗೊಡದೆ ಮಲಗಿದ್ದಲ್ಲೇ ಮರೆಯಾಗಿದ್ದಾರೆ. ಅವರ ಭಾಗವತಿಕೆಯ ಅನೇಕ ಧ್ವನಿ ಸುರುಳಿಗಳು,ಕ್ಯಾಸೆಟ್‌ಗಳು ಮುದ್ರಣಗೊಂಡಿದ್ದು ಅವರ ಅಭಿಮಾನಿಗಳು ಅವುಗಳ ಮೂಲಕ ಕೆದ್ಲಾಯರ ಶಾರೀರವನ್ನು ಕಾಣಬೇಕಾಗಿದೆ.