ಹಾಸನ: ವಾಣಿಜ್ಯ ಕ್ರಾಂತಿಯನ್ನು ಉಂಟು ಮಾಡುವುದರಲ್ಲಿ ಬಾಹ್ಯಾಕಾಶ ಹಾಗೂ ಉಪಗ್ರಹಗಳು ಪ್ರಮುಖ ಪಾತ್ರವಹಿಸುತ್ತಿವೆ. ಇದರ ಹಿಂದಿನ ಶಕ್ತಿ ಇಸ್ರೋ ಹಾಗೂ ಹಾಸನದ ಮುಖ್ಯ ನಿಯಂತ್ರಣ ಕೇಂದ್ರ (ಎಂಸಿಎಫ್) ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.ನಗರದ ಗಂಧದ ಕೋಠಿಯ ಬಾಲಕಿಯರ ಪಿಯು ಕಾಲೇಜು ಆವರಣದಲ್ಲಿ ಆಜಾದಿ-ಕಾ-ಅಮೃತ ಮಹೋತ್ಸವ ಹಾಗೂ ವಿಶ್ವ ಅಂತರಿಕ್ಷ ದಿನದ ಅಂಗವಾಗಿ ಹಮ್ಮಿಕೊಂಡಿರುವ ವಿಶ್ವ ಬಾಹ್ಯಕಾಶ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಸ್ರೋ ಜಗತ್ತಿನ ಕೆಲವೇ ಸಂಸ್ಥೆಗಳಲ್ಲಿ ಬಾಹ್ಯಾಕಾಶದಲ್ಲಿ 36ಸಾವಿರ ಕಿ.ಮೀ, ದೂರದಲ್ಲಿ ಜಿಯೋಸಿಂಕ್ರೋನಸ್ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಪ್ರಪಂಚದ 6 ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಈ ಉಪಗ್ರಹಗಳೆಲ್ಲದರ ನಿಯಂತ್ರಣ ಹಾಸನದ ಎಂಸಿಎಫ್ನಲ್ಲಿ ಆಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಇದನ್ನೂ ಓದಿ;- ಅಕಾಡೆಮಿಗಳು ಅಕಾಡಮ್ಮಿಗಳಾಗಿವೆ: ಕದಂಬ ಸೈನ್ಯ ಆರೋಪ
ವಿದ್ಯಾರ್ಥಿಗಳು ಅಂತರಿಕ್ಷದ ಅರಿವು ಪಡೆದುಕೊಳ್ಳಬೇಕು. ವಿಶ್ವ ಬಾಹ್ಯಾಕಾಶ ಸಪ್ತಾಹದ ವಸ್ತುಪ್ರದರ್ಶನ ಅಭಿಯಾನವನ್ನು ಬಸ್‌ನ ಒಳಗೆ ಪ್ರದರ್ಶಿಸಲಾಗುತ್ತಿದೆ. ಮಕ್ಕಳು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮುಖ್ಯ ನಿಯಂತ್ರಣಾ ಕೇಂದ್ರದ ಉಪ ನಿರ್ದೇಶಕ ಶ್ರೀ ಸತ್ಯನಾರಾಯಣ್, ವಿಶ್ವ ಬಾಹ್ಯಾಕಾಶ ಸಪ್ತಾಹ ಸಮಿತಿಯ ಮುಖ್ಯಸ್ಥ ರಮೇಶ್ ಮುದುಂಬಾ,ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಟಿ. ಸುರೇಶ್, ಎಂ.ಸಿ.ಎಫ್.ನ ಉದ್ಯೋಗಿಗಳು, ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.