Advertisement

ಮಂದಾರ್ತಿಯಲ್ಲಿ ಸ್ಯಾಟಲೈಟ್‌ ಕರೆ ? ಶ್ರೀಕೃಷ್ಣಮಠ ಪರಿಸರದಲ್ಲಿ ಮುಂದುವರಿದ ತಪಾಸಣೆ

01:00 AM Nov 28, 2022 | Team Udayavani |

ಉಡುಪಿ: ಶ್ರೀಕೃಷ್ಣ ಮಠದ ರಥಬೀದಿ ಪರಿಸರಕ್ಕೆ ಉಗ್ರ ಶಾರೀಕ್‌ ಬಂದಿರುವ ಬಗ್ಗೆ ಮಾಹಿತಿ ಮೇರೆಗೆ ಪೊಲೀಸರು ರವಿವಾರವೂ ರಥಬೀದಿ ಪರಿಸರದ ಅಂಗಡಿಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಸಮಗ್ರವಾಗಿ ಪರಿಶೀಲನೆ ನಡೆಸಿದರು.

Advertisement

ಇದೇ ವೇಳೆ ಮಂದಾರ್ತಿಯಲ್ಲಿ ಸ್ಯಾಟಲೈಟ್‌ ಕರೆ ಬಂದ ಕುರಿತೂ ಪರಿಶೀಲನೆ ಮುಂದುವರಿಯುತ್ತಿದೆ.

ಕೃಷ್ಣ ಮಠ ಪರಿಸರಕ್ಕೆ ಭೇಟಿ ನೀಡಿದ ಬಳಿಕ ಆತ ಕಾರ್ಕಳಕ್ಕೆ ತೆರಳಿದ್ದ ಎಂಬ ಮಾಹಿತಿ ಇದ್ದು, ಅಲ್ಲಿಂದ ಎಲ್ಲಿಗೆ ಹೋಗಿದ್ದ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಇಲ್ಲಿಗೆ ಭೇಟಿ ನೀಡಿದ ಸಂದರ್ಭ ಆತ ಯಾವ ಬಟ್ಟೆ ಧರಿಸಿದ್ದ ಎನ್ನುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಆದರೆ ಸಿಸಿಟಿವಿ ದೃಶ್ಯಾವಳಿಗಳಲ್ಲಿ 15 ದಿನಗಳ ಮಾಹಿತಿಯಷ್ಟೇ ಇರುವುದು ತನಿಖೆಗೆ ಹಿನ್ನಡೆಯಾಗುತ್ತಿದೆ. ಕನಿಷ್ಠ ಒಂದು ತಿಂಗಳ ದೃಶ್ಯಾವಳಿಗಳಿರುವ ಸಿಸಿಟಿವಿಗಳು ಇವೆಯೇ ಎಂಬ ಬಗ್ಗೆ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.

Advertisement

ಆಂತರಿಕ ಭದ್ರತಾ
ವಿಭಾಗದ ಪರಿಶೀಲನೆ
ಜಿಲ್ಲೆಯಲ್ಲಿ ತುರಾಯ ಸ್ಯಾಟಲೈಟ್‌ ಕರೆ ಬಂದಿರುವ ಬಗ್ಗೆ ರಾಜ್ಯ ಆಂತರಿಕ ಭದ್ರತಾ ವಿಭಾಗವು ಜಿಲ್ಲಾ ಆಂತರಿಕ ಭದ್ರತಾ ವಿಭಾಗಕ್ಕೆ ಮಾಹಿತಿ ನೀಡಿದೆ. ಮಂದಾರ್ತಿ ದೇವಸ್ಥಾನದಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ಸದ್ಗುರು ಗೇರುಬೀಜ ಕಾರ್ಖಾನೆಯ ಬಳಿ ತುರಾಯ ಸ್ಯಾಟಲೈಟ್‌ ಫೋನ್‌ನ ಸಿಗ್ನಲ್‌ ಲಭಿಸಿದ್ದು, ಈ ಬಗ್ಗೆ ಆಂತರಿಕ ಭದ್ರತಾ ವಿಭಾಗಕ್ಕೆ ನ. 9ರಂದು ಮಾಹಿತಿ ಲಭಿಸಿತ್ತು ಎನ್ನಲಾಗಿದೆ. ಇಲ್ಲಿಂದ ಕರೆ ಮಾಡಲಾಗಿದೆಯೇ ಎಂಬ ನಿಟ್ಟಿನಲ್ಲಿ ಭದ್ರತ ಪಡೆಗಳಿಂದ ತನಿಖೆ ಮುಂದುವರಿದಿದೆ.

ಹೆಚ್ಚುವರಿ ಭದ್ರತೆಗೆ ಚಿಂತನೆ
ವಾರಾಂತ್ಯ ಹಾಗೂ ಹಬ್ಬಗಳ ದಿನದಂದು ಶ್ರೀಕೃಷ್ಣ ಮಠದ ಪರಿಸರಕ್ಕೆ ಹೆಚ್ಚಿನ ಮಂದಿ ಭಕ್ತರು ಆಗಮಿಸುತ್ತಾರೆ. ಈ ವೇಳೆ ಪೊಲೀಸ್‌ ಭದ್ರತೆ ಇರುತ್ತದಾದರೂ ಮುಂದಿನ ದಿನಗಳಲ್ಲಿ ಮತ್ತಷ್ಟು ಭದ್ರತೆ ಹೆಚ್ಚಿಸುವ ಬಗ್ಗೆ ಸದ್ಯದಲ್ಲಿಯೇ ನಿರ್ಧರಿಸಲಾಗುವುದು ಎಂದು ಜಿಲ್ಲಾ ಎಸ್‌ಪಿ ತಿಳಿಸಿದ್ದಾರೆ. ಇದೇ ರೀತಿ ಪ್ರಮುಖ ದೇವಸ್ಥಾನಗಳ ಭದ್ರತೆಗೂ ಗಮನ ಹರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next