Advertisement

Sasthana: ಸ್ಥಳೀಯರಿಗೆ ಟೋಲ್‌ ಬಗ್ಗೆ ಪ್ರತಿಭಟನೆ

02:06 PM Nov 10, 2024 | Team Udayavani |

ಕೋಟ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯ ಸಮಸ್ಯೆಗಳು ಹಾಗೂ ಸ್ಥಳೀಯರಿಗೆ ಶುಲ್ಕ ವಿಧಿಸುತ್ತಿರುವುದನ್ನು ವಿರೋಧಿಸಿ ನ.9ರಂದು ಸಾಸ್ತಾನ ಟೋಲ್‌ನಲ್ಲಿ ಪ್ರತಿಭಟನೆ ನಡೆಯಿತು.

Advertisement

ಹೆದ್ದಾರಿ ಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಪ್ರತಾಪ್‌ ಶೆಟ್ಟಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಬೀದಿ ದೀಪ ಸಮಸ್ಯೆ ಎಲ್ಲ ಕಡೆ ಇದೆ. ಪಾದಚಾರಿ ದಾರಿಯ ಸಮಸ್ಯೆ ಹಾಗೂ ಸಂಸ್ಥೆಯ ಹೆಸರಿನಲ್ಲಿ ನೋಂದಾಯಿಸಿರುವ ಸ್ಥಳೀಯ ವಾಹನಗಳಿಗೆ, ಸ್ಥಳೀಯ ಶಾಲೆಗಳ ವಾಹನಕ್ಕೆ, ಉದ್ಯಮಗಳ ವಾಹನಗಳಿಗೆ ಟೋಲ್‌ ಪಡೆಯುತ್ತಿರುವುದು ಕಂಡುಬಂದಿದೆ. ಟೋಲ್‌ ಕಂಪೆನಿ ಸ್ಥಳೀಯರ ತಾಳ್ಮೆ ಪರೀಕ್ಷೆ ನಡೆಸುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.

ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮ್‌ಸುಂದರ್‌ ನಾಯರಿ ಸಮಸ್ಯೆ ಬಗೆಹರಿಯದಿದ್ದರೆ ರಸ್ತೆಯಲ್ಲೇ ಪ್ರತಿಭಟನೆ ಕುಳಿತುಕೊಳ್ಳುವುದಾಗಿ ಎಚ್ಚರಿಸಿದರು.

ಟೋಲ್‌ ಮುತ್ತಿಗೆ ಎಚ್ಚರಿಕೆ ಈ ಸಂದರ್ಭ ಟೋಲ್‌ಗೆ ಮುತ್ತಿಗೆ ಹಾಕಲು ಹೋರಾಟಗಾರರು ಮುಂದಾದಾಗ ಬ್ರಹ್ಮಾವರ ಪೊಲೀಸ್‌ ವೃತ್ತ ನಿರೀಕ್ಷಕ ದಿವಾಕರ ಮಧ್ಯಪ್ರವೇಶಿಸಿ ಟೋಲ್‌ನವರು ಹಾಗೂ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿದರು. ಈ ಬಗ್ಗೆ ಚರ್ಚಿಸಲು ಸೋಮವಾರ ಬ್ರಹ್ಮಾವರ ತಹಶೀಲ್ದಾರರ ಕಚೇರಿಯಲ್ಲಿ ಎರಡು ಕಡೆಯವರೊಂದಿಗೆ ಮಾತುಕತೆ ನಡೆಸಲಾಗುವುದು. ಟೋಲ್‌ ನಿರ್ವಹಣೆ ಕಂಪೆನಿಯ ಹಿರಿಯ ಅಧಿಕಾರಿಗಳನ್ನು ಸಭೆಗೆ ಕರೆಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಪೊಲೀಸರ ಮಾತಿಗೆ ಒಪ್ಪಿ ಹೋರಾಟವನ್ನು ಸ್ಥಗಿತಗೊಳಿಸಲಾಯಿತು.

ಹೆದ್ದಾರಿ ಜಾಗೃತಿ ಸಮಿತಿ ಕಾರ್ಯದರ್ಶಿ ಅಲ್ವಿನ್‌ ಅಂದ್ರಾದೆ, ನಾಗರಾಜ್‌ ಗಾಣಿಗ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಕೋಟ ಠಾಣೆಯ ಕ್ರೈಂ ವಿಭಾಗದ ಉಪನಿರೀಕ್ಷಕಿ ಸುಧಾ ಪ್ರಭು, ಬ್ರಹ್ಮಾವರ ಠಾಣೆಯ ಪಿ.ಎಸ್‌.ಐ. ಮಧು, ಕ್ರೈಂ ವಿಭಾಗದ ತೇಜಸ್ವಿ ಮತ್ತು ಸಿಬಂದಿ ಉಪಸ್ಥಿತರಿದ್ದರು.

Advertisement

ಮುಂದೆ ಟೋಲ್‌ ತೊಲಗಿಸಿ ಹೋರಾಟ ನಾವು ಆರೇಳು ವರ್ಷಗಳಿಂದ ಟೋಲ್‌ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಆದರೆ ಸ್ಥಳೀಯರಿಗೆ ಬೇರೆ-ಬೇರೆ ರೀತಿಯಲ್ಲಿ ನಿರಂತರ ಸಮಸ್ಯೆ ನೀಡಲಾಗುತ್ತಿದೆ. ಮುಂದೆ ಇದನ್ನು ನೋಡಿಕೊಂಡು ಸುಮ್ಮನಿರಲು ಅಸಾಧ್ಯ ಹಾಗೂ ಜನಸಾಮಾನ್ಯರಿಗೆ ಸಮಸ್ಯೆ ನೀಡುವ ಟೋಲ್‌ ನಮ್ಮೂರಿಗೆ ಬೇಡ. ಹೀಗಾಗಿ ಸೋಮವಾರ ನಡೆಯುವ ಸಭೆಯಲ್ಲಿ ನಮ್ಮ ಬೇಡಿಕೆಗಳಿಗೆ ಶಾಶ್ವತ ಪರಿಹಾರ ಸಿಗದಿದ್ದರೆ ಮುಂದೆ ಗ್ರಾಮ-ಗ್ರಾಮದಲ್ಲಿ ಸಭೆ ನಡೆಸಿ, ಸಾವಿರಾರು ಮಂದಿಯನ್ನು ಒಟ್ಟು ಸೇರಿಸಿ ಟೋಲ್‌ ತೊಲಗಿಸಿ-ನಮ್ಮೂರು ಉಳಿಸಿ ಎನ್ನುವ ಹೋರಾಟ ಕೈಗೊಳ್ಳಲಿದ್ದೇವೆ ಎಂದು ಶ್ಯಾಮ್‌ಸುಂದರ್‌ ನಾಯರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next