Advertisement
ಈ ವೀಡಿಯೋ ಬಹಿರಂಗದಿಂದಾಗಿ ಸರಕಾರ ಹಾಗೂ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬಂದಿಯನ್ನು ಇನ್ನಷ್ಟು ಇಕಟ್ಟಿಗೆ ಸಿಲುಕಿಸಿದೆ. ಇದೇ ಮಾದರಿಯ ವೀಡಿಯೋ ಎರಡು ದಿನಗಳ ಹಿಂದೆ ಸಾಕಷ್ಟು ವೈರಲ್ ಆಗಿತ್ತು. ಆ ವೀಡಿಯೋದಲ್ಲಿ ಶಶಿಕಲಾ ಮತ್ತು ಇಳವರಸಿಗೆ ಅಡುಗೆ ಮನೆ, ಸ್ನಾನ, ಶೌಚಕ್ಕೆ 2 ಪ್ರತ್ಯೇಕ ಕೊಠಡಿಗಳನ್ನು ನೀಡಲಾಗಿದ್ದು, 4 ಕೊಠಡಿಗಳಿಗೆ ಬೇರೆಯವರು ಹೋಗದಂತೆ ಬ್ಯಾರಿಕೇಡ್ ಹಾಕಿರುವುದು ಬಹಿರಂಗಗೊಂಡಿತ್ತು. ಓದಲು ಪುಸ್ತಕ, ಕುರ್ಚಿ, ಪ್ರತ್ಯೇಕ ಹಾಸಿಗೆ ಹಾಗೂ ಸೀರೆ ಸಹಿತ ಹಲವು ಬಟ್ಟೆಗಳು ಕೊಠಡಿಯಲ್ಲಿದ್ದು, ಕುಕ್ಕರ್ ಮತ್ತು ಐದು ಬಗೆಯ ಪಾತ್ರೆಗಳನ್ನೂ ನೀಡಿರುವುದು ದೃಶ್ಯಗಳಲ್ಲಿವೆ.
Related Articles
Advertisement
ಕಾನೂನು ಪ್ರಕಾರ ನಡೆಯುತ್ತಿದೆ: ನ್ಯಾಯಾಲಯದ ಅನುಮತಿ ಇಲ್ಲದೆ ಯಾರೊಬ್ಬರಿಗೂ ನಿಯಮ ಉಲ್ಲಂಘಿಸಿ ಸವಲತ್ತು ನೀಡದಂತೆ ರಾಜ್ಯ ಸರಕಾರ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಈ ಬೆಳವಣಿಗೆಯಿಂದ ಶಶಿಕಲಾ ಈಗ ಸಾಮಾನ್ಯ ಕೈದಿಯಾಗಿದ್ದು, ಎಲ್ಲರಂತೆ ಬಿಳಿಸೀರೆ, ಬಿಳಿ ಕುಪ್ಪಸ ಧರಿಸಿ, ಜೈಲಿನಲ್ಲಿ ತಯಾರಿಸಿದ ಊಟವನ್ನೇ ಮಾಡಬೇಕಾಗಿದೆ. ಸಾಮಾನ್ಯ ಮಹಿಳಾ ಕೈದಿಗಳ ಜತೆ ಅವರು ಇರಬೇಕಾಗಿದೆ. ಉಳಿದ ಗಣ್ಯ ಕೈದಿಗಳಿಗೂ ನೀಡುತ್ತಿದ್ದ ಸವಲತ್ತುಗಳನ್ನು ಹಿಂಪಡೆದುಕೊಂಡು, ಎಲ್ಲವೂ ಕಾನೂನು ಪ್ರಕಾರ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಅನಿತಾ ಮೇಲೂ ಆರೋಪಕಾರಾಗೃಹದ ಪ್ರಭಾರ ಮುಖ್ಯ ಅಧೀಕ್ಷಕಿಯಾಗಿ ಅನಿತಾ ಮಂಗಳವಾರ ಅಧಿಕಾರ ಸ್ವೀಕರಿಸುತ್ತಿದ್ದಂತೆ ಇತ್ತ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಪರಪ್ಪನ ಅಗ್ರಹಾರದಲ್ಲಿ ನಡೆಯುತ್ತಿದ್ದ ಅಕ್ರಮಗಳಲ್ಲಿ ಅನಿತಾ ಕೂಡ ಪಾಲುದಾರರು ಎನ್ನಲಾಗಿದ್ದು, ಶಶಿಕಲಾ ಅವರಿಗೆ ರಾಜಾತಿಥ್ಯ ನೀಡಲು ಟಿಟಿ ದಿನಕರನ್ ಅವರಿಂದ ತಿಂಗಳಿಗೆ ಲಕ್ಷಾಂತರ ರೂ.ಲಂಚ ಪಡೆದು ಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ. ಜೈಲಿನ ಅಧೀಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅನಿತಾ ಮಹಿಳಾ ಬ್ಯಾರಕ್‌ನ ಸಂಪೂರ್ಣ ಹೊಣೆ ಹೊತ್ತಿದ್ದರು. ಟಿಟಿ ದಿನಕರನ್ ಶಶಿಕಲಾ ಅವರನ್ನು ಕಾಣಲು ಪ್ರತೀ ವಾರ ಪರಪ್ಪನ ಅಗ್ರಹಾರಕ್ಕೆ ಬರುತ್ತಿದ್ದರು. ಈ ವೇಳೆ ಶಶಿಕಲಾ ಅವರಿಗೆ ರಾಜಾತಿಥ್ಯ ನೀಡಲು ಅವಕಾಶ ಕಲ್ಪಿಸಿರುವುದಕ್ಕೆ ಅನಿತಾ ಅವರಿಗೆ ಪ್ರತಿ ತಿಂಗಳು ಇಂತಿಷ್ಟು ಲಂಚ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.