Advertisement

ಶಶಿಕಲಾ ಕೇಸ್‌ : ಎಂಟೇ ನಿಮಿಷದಲ್ಲಿ ಮುಗಿದು ಹೋದ ಸುಪ್ರೀಂ ತೀರ್ಪು

12:36 PM Feb 14, 2017 | Team Udayavani |

ಹೊಸದಿಲ್ಲಿ : ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ  ವಿ ಕೆ ಶಶಿಕಲಾ ನಟರಾಜನ್‌ ವಿರುದ್ದದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಇಂದು ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ ಹತ್ತು ಕೋಟಿ ರೂ. ದಂಡವನ್ನು ವಿಧಿಸಿ ತೀರ್ಪು ನೀಡಲು ಸುಪ್ರೀಂ ಕೋರ್ಟ್‌ ದ್ವಿಸದಸ್ಯ ಪೀಠ ತೆಗೆದುಕೊಂಡ ಕಾಲಾವಧಿ ಕೇವಲ ಎಂಟು ನಿಮಿಷ. 

Advertisement

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಜಸ್ಟಿಸ್‌ ಪಿ ಸಿ ಘೋಷ್‌ ಮತ್ತು ಜಸ್ಟಿಸ್‌ ಅಮಿತಾವ್‌ ರಾಯ್‌ ಅವರು ಇಂದು ಮಂಗಳವಾರ ಬೆಳಗ್ಗೆ 10.32ಕ್ಕೆ ಸರಿಯಾಗಿ ಕೋರ್ಟ್‌ ರೂಮ್‌ ನಂಬರ್‌ 6 ಪ್ರವೇಶಿಸಿದರು. ಕೋರ್ಟಿನಲ್ಲಿ ಭಾರೀ ಸಂಖ್ಯೆಯ ವಕೀಲರು ಮತ್ತು ಮಾಧ್ಯಮದವರು ಅದಾಗಲೇ ಜಮಾಯಿಸಿದ್ದರು. 

ನ್ಯಾಯಮೂರ್ತಿ ದ್ವಯರ ಸಮ್ಮುಖದಲ್ಲಿ ಭಾರೀ ಗಾತ್ರದ ಕೋರ್ಟ್‌ ತೀರ್ಪಿನ ಸೀಲನ್ನು ತೆರೆಯಲಾಯಿತು. ಅದನ್ನು ಅನುಸರಿಸಿ ಇಬ್ಬರು ನ್ಯಾಯಾಧೀಶರು ಕೆಲ ಕ್ಷಣಗಳ ಕಾಲ ಪರಸ್ಪರ ಚರ್ಚೆ ನಡೆಸಿದರು. 

ಸೂಜಿ ಬಿದ್ದರೂ ಸದ್ದು ಕೇಳುವಷ್ಟು ನಿಶಬ್ದವಾಗಿದ್ದ  ಕೋರ್ಟಿನಲ್ಲಿ ಜಸ್ಟಿಸ್‌ ಘೋಷ್‌ ಅವರು ತೀರ್ಪನ್ನು ಪ್ರಕಟಿಸಿದರು. ಭಾರೀ ಗಾತ್ರದ ತೀರ್ಪನ್ನು ನೀವು ಅರ್ಥ ಮಾಡಿಕೊಳ್ಳಬಲ್ಲಿರಿ ; ಆದರೂ ನಾವದರ ಹೊಣೆ ಹೊತ್ತಿದ್ದೇವೆ’ ಎಂದು ಜಸ್ಟಿಸ್‌ ಘೋಷ್‌ ಹೇಳಿದರು. 

ಅದಾಗಿ ಒಡನೆಯೇ ಜಸ್ಟಿಸ್‌ ಘೋಷ್‌ ಅವರು ಬೃಹತ್‌ ಗಾತ್ರದ ತೀರ್ಪಿನಲ್ಲಿ ಜಾರಿಗೆ ಬರಬೇಕಿರುವ ಅಂಶಗಳನ್ನು  ಓದಿ ಹೇಳಿದರು. ಇದು 10.40ರ ಹೊತ್ತಿಗೆ ಮುಕ್ತಾಯವಾಯಿತು. 

Advertisement

ಘೋಷ್‌ ಅವರಿಂದ ತೀರ್ಪಿನ ಅನುಷ್ಠಾನ ಭಾಗದ ಓದುವಿಕೆ ಮುಗಿದೊಡನೆಯೇ ಕೋರ್ಟಿನಲ್ಲಿ ಸದ್ದು ಗುಲ್ಲು ಕೇಳಿ ಬಂತು. ಮಾಧ್ಯಮದವರು ಮತ್ತು ಕೆಲ ವಕೀಲರು ಕೋರ್ಟ್‌ ರೂಮ್‌ ಪ್ರಹಸನದ ವಿವರಗಳನ್ನು ನೀಡಲು ಹೊರ ಧಾವಿಸಿ ಬಂದಿರು. 

ಈ ನಡುವೆ ಜಸ್ಟಿಸ್‌ ರಾಯ್‌ ಅವರು ಜಸ್ಟಿಸ್‌ ಘೋಷ್‌ ಪ್ರಕಟಿಸಿರುವ ತೀರ್ಪಿನ ಪೂರಕ ತೀರ್ಪನ್ನು ತಾನು ಮಾಡುತ್ತಿರುವುದಾಗಿ ಪ್ರಕಟಿಸಿದರು. ಸಮಾಜದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರದ ಪಿಡುಗಿನ ಬಗ್ಗೆ ತೀವ್ರವಾದ ಕಳವಳವನ್ನು ನಾವು ವ್ಯಕ್ತಪಡಿಸುತ್ತಿದ್ದೇವೆ ಎಂದು ಜಸ್ಟಿಸ್‌ ರಾಯ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next