ಚೆನ್ನೈ/ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲುಶಿಕ್ಷೆ ಅನುಭವಿಸಿ ಇತ್ತೀಚೆಗಷ್ಟೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿದ್ದ ವಿಕೆ ಶಶಿಕಲಾ ಬುಧವಾರ(ಮಾರ್ಚ್ 03) ದಿಢೀರ್ ಆಗಿ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಿಸಿದ್ದು, ಇದೀಗ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬ ಲೆಕ್ಕಾಚಾರ ನಡೆಯತೊಡಗಿದೆ.
ಇದನ್ನೂ ಓದಿ:ಉಡುಪಿ: ಸಾವನ್ನಪ್ಪಿ ಎಂಟು ತಿಂಗಳ ಬಳಿಕ ವ್ಯಕ್ತಿಯ ಮೃತದೇಹ ಪತ್ತೆ!
ತಮಿಳುನಾಡಿನ ರಾಜಕೀಯದಲ್ಲಾದ ಈ ಬೆಳವಣಿಗೆಯಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ ಹೆಚ್ಚಿನ ಬಲ ಬಂದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ನಿನ್ನೆ ರಾತ್ರಿ 9.30ಕ್ಕೆ ಚೆನ್ನೈನ ಟಿ.ನಗರದ ತಮ್ಮ ನಿವಾಸದ ಹೊರಭಾಗದಲ್ಲಿ ಕಾಯುತ್ತಿದ್ದ ಸುದ್ದಿಗಾರರಿಗೆ ವಿಕೆ ಶಶಿಕಲಾ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಅಮ್ಮ(ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ)ನ ಎಲ್ಲಾ ನಿಷ್ಠಾವಂತರು ಡಿಎಂಕೆ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ರಾಜ್ಯದಲ್ಲಿ ಮತ್ತೊಮ್ಮೆ ಅಮ್ಮ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ವಿನಂತಿಸಿಕೊಂಡಿದ್ದು, ಈ ಹೇಳಿಕೆಯನ್ನು ಎಐಎಡಿಎಂಕೆ ಮುಖಂಡರು ಸ್ವಾಗತಿಸಿದ್ದಾರೆ.
ತಿಂಗಳ ಹಿಂದಷ್ಟೇ ಬೆಂಗಳೂರು ಜೈಲಿನಿಂದ ಶಶಿಕಲಾ ಬಿಡುಗಡೆಯಾದ ನಂತರ ತಮಿಳುನಾಡಿನಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಪತ್ರಕರ್ತರನ್ನು ಉದ್ದೇಶಿಸಿ, ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಶಶಿಕಲಾ ಅವರ ಮನವೊಲಿಕೆಗೆ ಪ್ರಯತ್ನಿಸಿರುವುದಾಗಿ ತಿಳಿಸಿದ್ದರು. ಮುಂಬರುವ ಚುನಾವಣೆಯಲ್ಲಿ ಅವರ ನಿರ್ಧಾರ ಮತ್ತು ಹುದ್ದೆಯ ಕುರಿತು ಚರ್ಚೆ ನಡೆಸಿದ್ದೆ, ಆದರೆ ತಾವು ರಾಜಕೀಯದಿಂದ ಹಿಂದೆ ಸರಿಯುವ ಬಗ್ಗೆ ಜಯಾ ಟಿವಿಯಲ್ಲಿ ಘೋಷಿಸುವುದಾಗಿ ತಿಳಿಸಿದ್ದರು ಎಂದು ದಿನಕರನ್ ಮಾಹಿತಿ ನೀಡಿದ್ದಾರೆ.
ಜಯಾ ಬೆಂಬಲಿಗರಿಗಾಗಿ ಶಶಿಕಲಾ ತಂತ್ರಗಾರಿಕೆ?
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಜಯಲಲಿತಾ ಅವರ ಬೆಂಬಲಿಗರು ಒಗ್ಗಟ್ಟಾಗಿರುವ ಹಿನ್ನೆಲೆಯಲ್ಲಿ ಶಶಿಕಲಾ ರಾಜಕೀಯದಿಂದ ಹಿಂದೆ ಸರಿದಿರುವುದಾಗಿ ವಿಶ್ಲೇಷಿಸಲಾಗುತ್ತಿದೆ. ಅಲ್ಲದೇ ಚುನಾವಣೆಯಲ್ಲಿ ರಾಜಕೀಯದ ಗೊಂದಲಕ್ಕೆ ಅವಕಾಶ ನೀಡದಿರುವುದು ಶಶಿಕಲಾ ಅವರ ರಾಜಕೀಯ ಲೆಕ್ಕಾಚಾರವಾಗಿದೆ.
ಶಶಿಕಲಾ ನಿರ್ಧಾರಕ್ಕೆ ಬಿಜೆಪಿ ಹರ್ಷ, ದಿನಕರನ್ ಗೆ ಶಾಕ್!
ತಮಿಳುನಾಡು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿರುವ ವಿಕೆ ಶಶಿಕಲಾ ಅವರ ನಿರ್ಧಾರವನ್ನು ಬಿಜೆಪಿ ಮತ್ತು ಎಐಎಡಿಎಂಕೆ ಸ್ವಾಗತಿಸಿದೆ. ಮತ್ತೊಂದೆಡೆ ಶಶಿಕಲಾ ದಿಢೀರ್ ನಿರ್ಧಾರದಿಂದ ಟಿಟಿವಿ ದಿನಕರನ್ ಆಘಾತಕ್ಕೊಳಗಾಗಿದ್ದಾರೆ. ಅಲ್ಲದೇ ತಮ್ಮ ಎಎಂಎಂಕೆ(ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ) ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ. ಆದರೆ ಎಎಂಎಂಕೆ ಕೂಡಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಶಶಿಕಲಾ ಅವರ ಆಶಯದಂತೆ ಹೇಗೆ ಎಎಂಎಂಕೆ ಸರ್ಕಾರ ರಚಿಸುತ್ತೀರಿ ಎಂಬ ಪ್ರಶ್ನೆಗೆ ದಿನಕರನ್ ಯಾವುದೇ ನೇರ ಉತ್ತರ ನೀಡದೆ ನುಣುಚಿಕೊಂಡಿದ್ದರು.