ಗದಗ: ಮೂರು ದಶಕ ಕಳೆದರೂ ಇಲ್ಲಿನ ಸರ್ವೋದಯ ಕಾಲೋನಿ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಸಮರ್ಪಕ ರಸ್ತೆಗಳಿಲ್ಲದ ಕಾರಣ ಅಲ್ಪಸ್ವಲ್ಪ ಮಳೆಯಾದರೂ ರಸ್ತೆಗಳು ಅಕ್ಷರಶಃ ಕೆಸರು ಗದ್ದೆಯಾಗಿ ಮಾರ್ಪಡುತ್ತವೆ. ಇದರಿಂದಾಗಿ ಸ್ಥಳೀಯ ನಿವಾಸಿಗಳ ಸಂಚಾರಕ್ಕೆ ತೊಂದರೆ ಅನುಭವಿಸುವಂತಾಗಿದ್ದು, ನಗರಸಭೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಿಡಿಶಾಪ ಹಾಕುವಂತಾಗಿದೆ.
ಇಲ್ಲಿನ ರಾಚೋಟೇಶ್ವರ ನಗರ ಹಾಗೂ ಮುಳಗುಂದ ನಾಕಾ ನಡುವೆ ಸಂಪರ್ಕ ಕಲ್ಪಿಸುವ ಸರ್ವೋದಯ ಕಾಲೋನಿಯ ಹದೆಗೆಟ್ಟ ರಸ್ತೆಗಳಿಂದ ಪಾದಚಾರಿ ಹಾಗೂ ಬೈಕ್ ಸವಾರರಿಗೆ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ಜನರು ಆತಂಕದಲ್ಲೇ ಹೆಜ್ಜೆಯಿಡುವಂತಾಗಿದೆ. ಸ್ವಲ್ಪ ಯಾಮಾರಿದರೂ, ಜಾರಿ ಬೀಳುವುದು ನಿಶ್ಚಿತ.
ಅಭಿವೃದ್ಧಿ ನೆಪದಲ್ಲಿ ರಸ್ತೆ ಹಾಳು: ಸುಮಾರು ಒಂದೂವರೆ ವರ್ಷದ ಹಿಂದೆ ಬಡಾವಣೆಯಲ್ಲಿ ಒಳಚರಂಡಿ ಹಾಗೂ 24X7 ಕುಡಿಯುವ ನೀರಿನ ಕಾಮಗಾರಿ ನಿರ್ವಹಿಸಲಾಗಿದೆ. ಸುಮಾರು ಐದಾರು ಅಡಿ ಆಳಕ್ಕೆ ರಸ್ತೆ ಅಗೆಯಲಾಗಿದೆ. ಇದರಿಂದಾಗಿ ಬಡಾವಣೆಯಲ್ಲಿ ತಕ್ಕಮಟ್ಟಿಗಿದ್ದ ಡಾಂಬರ್ ರಸ್ತೆಗಳು ಸಂಪೂರ್ಣ ಕಿತ್ತು ಹೋಗಿವೆ. ಬಳಿಕ ರಸ್ತೆಗಳನ್ನು ದುರಸ್ತಿ, ಮರು ಡಾಂಬರೀಕರಣ ಮಾಡಿಲ್ಲ. ಕಾಮಗಾರಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ಮಣ್ಣು ಮುಚ್ಚಿರುವುದೇ ಸಮಸ್ಯೆಗೆ ಮೂಲ ಕಾರಣ. ಈ ಕುರಿತು ನಗರಸಭೆ ಅಧಿಕಾರಿಗಳ ಗಮನ ಸೆಳೆದಾಗ ಕಾಟಾಚಾರಕ್ಕೆ ರಸ್ತೆಗೆ ಜೆಲ್ಲಿ ಕಲ್ಲು, ಮಣ್ಣು ಹಾಕಿ ಗುತ್ತಿಗೆದಾರರು ಕೈ ತೊಳೆದುಕೊಂಡಿದ್ದಾರೆ ಎಂಬುದು ಸಾರ್ವಜನಿಕರ ಆರೋಪ
ಕಾಮಗಾರಿಗೂ ಮುಂಚೆ ಬಡಾವಣೆಯಲ್ಲಿ ತಕ್ಕಮಟ್ಟಿಗೆ ಡಾಂಬರ್ ರಸ್ತೆಗಳಿದ್ದವು. ಆದರೆ ಕಾಲೋನಿಯ ಮೂರೂ ಕ್ರಾಸ್‌ನಲ್ಲಿ ರಸ್ತೆಗಳು 24ಗಿ7 ಕುಡಿಯುವ ನೀರು ಪೂರೈಕೆ ಯೋಜನೆ ಹಾಗೂ ಒಳಚರಂಡಿ ಕಾಮಗಾರಿಗಳಿಂದ ಹದಗೆಟ್ಟಿವೆ. ಇದೀಗ ಅಲ್ಪಸ್ವಲ್ಪ ಮಳೆ ಸುರಿದರೆ ಸಾಕು ರಸ್ತೆಯಲ್ಲಿ ಜಾರಿ ಬೀಳುವಂತಾಗಿದೆ. ಕೆಲವೆಡೆ ಕುಡಿಯುವ ನೀರಿನ ಪೈಪ್‌ಗ್ಳು ಒಡೆದು, ನೀರು ಪೋಲಾಗುತ್ತಿದೆ. ಈ ಕುರಿತು ಅಧಿಕಾರಿಗಳ ಗಮನ ಸೆಳೆದರೂ ಸ್ಪಂದಿಸುತ್ತಿಲ್ಲ.
-ಶ್ರೀಧರ ಖಟವಟೆ, ಸ್ಥಳೀಯ ನಿವಾಸಿ