ಅಹ್ಮದಾಬಾದ್: ನವೀಕರಣಗೊಳ್ಳುತ್ತಿರುವ ಇಲ್ಲಿನ ಮೊಟೆರಾದಲ್ಲಿರುವ “ಸರ್ದಾರ್ ಪಟೇಲ್ ಸ್ಟೇಡಿಯಂ’ ವಿಶ್ವದ ಅತೀ ದೊಡ್ಡ ಸ್ಟೇಡಿಯಂ ಆಗಿ ರೂಪುಗೊಳ್ಳಲಿದೆ. ಈ ವಿಚಾರವನ್ನು ಗುಜರಾತ್ ಕ್ರಿಕೆಟ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಪರಿಮಳ್ ನಥಾÌನಿ ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದು, ನಿರ್ಮಾಣವಾಗುತ್ತಿರುವ ಸ್ಟೇಡಿಯಂನ ಫೋಟೊವನ್ನೂ ಪೋಸ್ಟ್ ಮಾಡಿದ್ದಾರೆ.
“ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ಗಿಂತಲೂ ದೊಡ್ಡದಾಗಿರುವ ಸ್ಟೇಡಿಯಂ ಅಹ್ಮದಾಬಾದ್‌ನಲ್ಲಿ ನಿರ್ಮಾಣವಾಗುತ್ತಿದೆ. ಗುಜರಾತ್ ಕ್ರಿಕೆಟ್ ಅಸೋಸಿಯೇಶನ್‌ನ ಈ ಕನಸಿನ ಯೋಜನೆ ಪೂರ್ಣಗೊಂಡ ಬಳಿಕ ಭಾರತ ಹೆಮ್ಮೆ ಎಂದೆನಿಸಿಕೊಳ್ಳಲಿದೆ’ ಎಂದು ಪರಿಮಳ್ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
63 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಈ ಸ್ಟೇಡಿಯಂನಲ್ಲಿ 1,10, 000 ಆಸನಗಳ ವ್ಯವಸ್ಥೆ ಇರಲಿದೆ. ಇದು ಹಳೇ ಮೊಟೆರಾ ಸ್ಟೇಡಿಯಂನ ದುಪ್ಪಟ್ಟು ಸಾಮರ್ಥ್ಯ. ಅಷ್ಟೇ ಅಲ್ಲ, ಆಸ್ಟ್ರೇಲಿಯ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ಗಿಂತ 20 ಸಾವಿರದಷ್ಟು ಹೆಚ್ಚಿನ ಆಸನ ಸಾಮರ್ಥ್ಯವನ್ನು ಇದು ಹೊಂದಿರಲಿದೆ. 1853ರಲ್ಲಿ ನಿರ್ಮಾಣಗೊಂಡ, ಬಳಿಕ ಅನೇಕ ಸಲ ನವೀಕರಣಗೊಂಡ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನ ಸಾಮರ್ಥ್ಯ 90 ಸಾವಿರ.1982ರಲ್ಲಿ ನಿರ್ಮಾಣವಾದ ಈ ಸ್ಟೇಡಿಯಂ 49,000 ಆಸನದ ವ್ಯವಸ್ಥೆಯನ್ನು ಹೊಂಡಿತ್ತು. 1983ರಲ್ಲಿ ಮೊದಲ ಸಲ ಟೆಸ್ಟ್ ಪಂದ್ಯವನ್ನು ಆಯೋಜಿಸಲಾಯಿತು. ಬಾರಿ ಭಾರತ ಹಾಗೂ ವೆಸ್ಟ್‌ವಿಂಡೀಸ್ ನಡುವಿನ ಟೆಸ್ಟ್ ಪಂದ್ಯದ ಅತಿಥ್ಯವಹಿಸಿಕೊಂಡಿತ್ತು.
ಇತಿಹಾಸಗಳಿಗೆ ಸಾಕ್ಷಿ
ನವೀಕರಣಗೊಳ್ಳುವ ಮೊದಲ ಮೊಟೆರಾ ಸ್ಟೇಡಿಯಂನಲ್ಲಿ 12 ಟೆಸ್ಟ್ ಮತ್ತು 23 ಏಕದಿನ ಪಂದ್ಯಗಳನ್ನು ಆಡಲಾಗಿತ್ತು. ಅನೇಕ ಐತಿಹಾಸಿಕ ಸಾಧನೆಗಳಿಗೂ ಈ ಸ್ಟೇಡಿಯಂ ಸಾಕ್ಷಿಯಾಗಿದೆ. ದಾಖಲೆಗಳ ವೀರ ಸುನೀಲ್ ಗಾವಸ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ್ದು ಇದೇ ಸ್ಟೇಡಿಯಂನಲ್ಲಿ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮೊದಲ ಟೆಸ್ಟ್ ದ್ವಿಶತಕ ಬಾರಿಸಿದ್ದು ಕೂಡ ಇಲ್ಲಿಯೇ.