ಹೊಸದಿಲ್ಲಿ: ಭಾರತ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಅವರನ್ನು 13 ಸದಸ್ಯರನ್ನೊಳಗೊಂಡ ಹಾಕಿ ಇಂಡಿಯಾ ಆಯ್ಕೆ ಸಮಿತಿಗೆ ಆಯ್ಕೆ ಮಾಡಲಾಗಿದೆ.
2020 ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಡುವ ಕನಸು ಹೊಂದಿದ್ದ ಸರ್ದಾರ್ ಸಿಂಗ್ ಕಳೆದ ವರ್ಷ ಏಶ್ಯನ್ ಗೇಮ್ಸ್‌ನ ಕಳಪೆ ಪ್ರದರ್ಶನ ಬಳಿಕ ವಿದಾಯ ತಿಳಿಸಿದ್ದರು.
“ಈ ಕಾರ್ಯದ ಕುರಿತು ಈ ಹಿಂದೆ ಕೇಳಲಾಗಿತ್ತು. ನಾನು ಒಪ್ಪಿಗೆ ಸೂಚಿಸಿದ್ದೇನೆ. ಇದು ನನಗೆ ಹೊಸ ಸವಾಲು. ಯಾವ ರೀತಿಯಲ್ಲಾದರೂ ಭಾರತೀಯ ಹಾಕಿಗೆ ಸೇವೆ ಸಲ್ಲಿಸಬೇಕೆಂಬ ಆಸೆ ನನ್ನಲ್ಲಿತ್ತು. ಅದಕ್ಕಾಗಿ ಈ ಕೆಲಸವನ್ನು ಒಪ್ಪಿಕೊಂಡೆ. ಕಳೆದ 2 ದಶಕಗಳಿಂದ ತಂಡದಲ್ಲಿ ಆಟಗಾರನಾಗಿದ್ದೆ. ಈಗ ತಂಡದ ಪರವಾಗಿ ಕೆಲಸ ಮಾಡಲಿದ್ದೇನೆ. ತಂಡಕ್ಕೆ ಏನು ಅಗತ್ಯವಿದೆ ಎಂಬುದರ ಬಗ್ಗೆ ನನಗೆ ಅರಿವಿದೆ. ತಂಡ ಎಂದಿಗೂ ಅನುಭವಿ ಹಾಗೂ ಯುವ ಆಟಗಾರರಿಂದ ಸಂಘಟಿತವಾಗಿರಬೇಕು. ಆಯ್ಕೆಗಾರನಾಗಿ ನನ್ನ ಯೋಚನೆ ಒಂದೇ ತೆರನಾಗಿರುತ್ತದೆ. ಅನುಭವಿ ಆಟಗಾರರೊಂದಿಗೆ ಯುವ ಆಟಗಾರರು ಕೂಡ ತಂಡದಲ್ಲಿರಬೇಕು ಎನ್ನುವುದು ನನ್ನ ಆಶಯ’ ಎಂದು ಸರ್ದಾರ್ ಸಿಂಗ್ ತಿಳಿಸಿದ್ದಾರೆ.
ಉಳಿದಂತೆ ಹರ್ಬಿಂದರ್ ಸಿಂಗ್, ಸಯೈದ್ ಅಲಿ, ಆರ್.ಪಿ. ಸಿಂಗ್, ರಜನೀಶ್ ಮಿಶ್ರಾ ಅವರನ್ನು ಒಳಗೊಂಡಂತೆ ಹಿರಿಯ ಪುರುಷರ ಹಾಗೂ ವನಿತಾ ತಂಡದ ಕೋಚ್‌ಗಳನ್ನು ಆಯ್ಕೆ ಸಮಿತಿ ಸದಸ್ಯರಾಗಿ ನೇಮಕಮಾಡಲಾಗಿದೆ.