Advertisement
ವಿಶೇಷ ಎಂದರೆ ನರ್ಮದಾ ನದಿಗೆ ಕಟ್ಟಿರುವ ಈ ಡ್ಯಾಂ 14 ಪ್ರಧಾನಿಗಳನ್ನು ಕಂಡಿದೆ. ಆರಂಭವಾದ ದಿನದಿಂದಲೂ ಒಂದಲ್ಲ ಒಂದು ಅಡೆತಡೆಯನ್ನು ಎದುರಿಸಿ, ನಿವಾರಿಸಿಕೊಂಡು ಕಡೆಗೂ ಕಾಮಗಾರಿ ಪೂರ್ಣವಾಗಿ ರವಿವಾರ ಜನತೆಗೆ ಸಮರ್ಪಿತವಾಗಿದೆ. ಅದೂ ಪ್ರಧಾನಿ ನರೇಂದ್ರ ಮೋದಿ ಅವರ 67ನೇ ಹುಟ್ಟುಹಬ್ಬದಂದೇ ಈ ಡ್ಯಾಂ ಲೋಕಾರ್ಪಣೆಯಾಗಿದೆ.ಸರ್ದಾರ್ ಸರೋವರ ಡ್ಯಾಂನಿಂದ 55 ಕಿ.ಮೀ. ದೂರದಲ್ಲಿರುವ ದಭೋಯ್‌ನಲ್ಲಿ ಬೃಹತ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಇಡೀ ಜಗತ್ತಿನಲ್ಲಿ ಈ ಪ್ರಮಾಣದ ಅಡೆತಡೆಗಳನ್ನು ಎದುರಿಸಿ ನಿರ್ಮಾಣವಾದ ಡ್ಯಾಂ ಇನ್ನೊಂದಿಲ್ಲ’ ಎಂದರು. ಯೋಜನೆಯ ಆರಂಭದಲ್ಲಿ ಡ್ಯಾಂ ನಿರ್ಮಾಣಕ್ಕೆ ವಿಶ್ವಬ್ಯಾಂಕ್ ಸಾಲದ ನೆರವು ಘೋಷಿಸಿದ್ದರೂ ಅನಂತರ ಅದು ಪರಿಸರಾತ್ಮಕ ವಿಚಾರಗಳನ್ನು ಎತ್ತಿ ಸಾಲ ನಿರಾಕರಿಸಿತು. ಆದರೂ ಈ ಬೃಹತ್ ಯೋಜನೆಯನ್ನು ನಾವು ಮುಗಿಸಿದ್ದೇವೆ. ಇಡೀ ಜಗತ್ತಿಗೆ ಭಾರತದ ಸಾಮರ್ಥ್ಯ ತೋರಿಸಿದ್ದೇವೆ ಎಂದರು. ವಿಶೇಷವೆಂದರೆ ಈ ಯೋಜನೆಗೆ ವಿಶ್ವಬ್ಯಾಂಕ್ ಸಾಲ ನೀಡಲು ನಿರಾ ಕರಿಸಿದರೂ ಗುಜರಾತ್‌ನ ದೇವಸ್ಥಾನಗಳೇ ಧನ ಸಹಾಯ ಮಾಡಿದ್ದವು ಎಂದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಬಿ.ಆರ್. ಅಂಬೇಡ್ಕರ್ ಅವರ ಸಾಧನೆಯನ್ನು ಸ್ಮರಿಸಿದ ಮೋದಿ ಅವರು, ಈ ಇಬ್ಬರು ದಿಗ್ಗಜರು ಹೆಚ್ಚು ವರ್ಷ ಬದುಕುತ್ತಿದ್ದರೆ ಈ ಡ್ಯಾಂ 60 ಅಥವಾ 70ರ ದಶಕದಲ್ಲಿ ಪೂರ್ತಿಗೊಂಡು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿತ್ತು. ಅಲ್ಲದೆ ಬರ ಮತ್ತು ನೆರೆಯ ಸಮಸ್ಯೆಗೂ ಪರಿಹಾರವಾಗುತ್ತಿತ್ತು ಎಂದರು.
“ಸಮಗ್ರ ಭಾರತವೇ ಅಭಿವೃದ್ಧಿಯಾಗಬೇಕಿದೆ. ದೇಶದ ಪಶ್ಚಿಮ ಭಾಗದಲ್ಲಿ ಸಮರ್ಪಕವಾಗಿ ನೀರು ಲಭ್ಯವಿಲ್ಲ. ಪೂರ್ವ ಭಾಗದಲ್ಲಿ ವಿದ್ಯುತ್ ಮತ್ತು ಅನಿಲ ಪೂರೈಕೆ ಸರಿಯಾಗಿಲ್ಲ. ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಲು ಕಾರ್ಯನಿರತರಾಗಿದ್ದೇವೆ. ಇದೆಲ್ಲ ಕಾರ್ಯಸಾಧುವಾದಾಗ ನವ ಭಾರತ ನಿರ್ಮಾಣ ವಾಗಲು ಸಾಧ್ಯ’ ಎಂದು ಮೋದಿ ಹೇಳಿದರು.
n ಇದು ಎಂಜಿನಿಯರಿಂಗ್ ವಿಸ್ಮಯ. ತಾಂತ್ರಿಕ ಕ್ಷೇತ್ರದ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಯೋಗ್ಯ ವಿಷಯ.
n ಮೊದಲಿನಿಂದಲೂ ಡ್ಯಾಂ ಬಗ್ಗೆ ಅಪಶ್ರುತಿ ಕೇಳಿ ಬರುತ್ತಲೇ ಇದೆ. ಅದು ಯಾರಿಂದ ಎಂದು ಈಗ ಹೇಳುವುದಿಲ್ಲ.
n ವಿಶ್ವಬ್ಯಾಂಕ್ ಮೊದಲು ಸಾಲ
ಕೊಡಲು ಒಪ್ಪಿದ್ದರೂ ಬಳಿಕ ನಿರಾಕರಿಸಿದರೂ ದೇಗುಲಗಳು ಸಹಾಯ ಕೊಟ್ಟವು.
n ನನಗೆ ಗೊತ್ತಿರುವಂತೆ ಎಲ್ಲರೂ ಈ ಅಣೆಕಟ್ಟಿಗೆ ಅಡ್ಡಿ ಮಾಡಿದರು. ಇದರ ಬಗ್ಗೆ ತಪ್ಪು ಮಾಹಿತಿಗಳನ್ನೇ ಕೊಟ್ಟರು.
n ಈ ಡ್ಯಾಂನಿಂದಾಗಿ ಗುಜರಾತ್‌ಗೆ ಹೊಂದಿಕೊಂಡ ಪಾಕ್ ಗಡಿಯಲ್ಲಿನ ಬಿಎಸ್‌ಎಫ್ ಯೋಧರಿಗೂ ನೀರು ಸಿಗುತ್ತೆ. ಆಮರಣಾಂತ
ಉಪವಾಸ
ಡ್ಯಾಂನಿಂದಾಗಿ ನಿರಾಶ್ರಿತರಾಗಿರುವ ಮಧ್ಯ ಪ್ರದೇಶದ ಬರ್ವಾನಿ ಜಿಲ್ಲೆಯ ರೈತರು ಆಮರಣಾಂತ ಉಪವಾಸ ನಡೆಸಲು ತೀರ್ಮಾನಿಸಿದ್ದಾರೆ. ರವಿವಾರವೇ ಡ್ಯಾಂ ಲೋಕಾರ್ಪಣೆ ಮಾಡಲಾಗಿದೆ. ಆದರೆ ನಮ್ಮ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಡ್ಯಾಂನ ನೀರಿನಿಂದಾಗಿ ನಮ್ಮ ಭೂಮಿ ಮುಳುಗುತ್ತದೆ. ಆದರೂ ಪರಿಹಾರ ನೀಡುವ ಭರವಸೆ ಕೊಟ್ಟಿಲ್ಲ. ಹೀಗಾಗಿ ಸಾಯುವವರೆಗೂ ಉಪವಾಸ ನಡೆಸುತ್ತೇವೆ ಎಂದು ಹಳ್ಳಿಗರು ಹೇಳಿದ್ದಾರೆ. ಈ ಹಳ್ಳಿಗರ ಬೆನ್ನಿಗೆ ನಿಂತಿದ್ದಾರೆ ನರ್ಮದಾ ಬಚಾವೋ ಚಳವಳಿಯ ನಾಯಕಿ ಮೇಧಾ ಪಾಟ್ಕರ್.