Advertisement
ಮುಂದೆ ಬ್ಯಾರಿಸ್ಟರ್ ಆಗಬೇಕೆಂದು ಕನಸು ಕಂಡರು. ಆದರೆ ಇಂಗ್ಲೆಂಡಿಗೆ ಹೋಗಿ ಓದು ವಷ್ಟು ಅನುಕೂಲವಿರಲಿಲ್ಲ. ಆ ಕನಸನ್ನು ಜೀವಂತ ವಾಗಿರಿಸಿಕೊಂಡೇ ವಕೀಲ ವೃತ್ತಿಯನ್ನು ಪ್ರಾರಂಭಿಸಿದರು. ತಮ್ಮ ಜಾಣ್ಮೆಯಿಂದಾಗಿ ಬಹಳ ಬೇಗ ಪ್ರಸಿದ್ಧ ವಕೀಲರೆಂದೂ ಜನ ಗುರುತಿಸುವಂತಾಯಿತು. ತನ್ನ ಬ್ಯಾರಿಸ್ಟರ್ ಕನಸನ್ನು ನನಸು ಮಾಡುವುದಕ್ಕಾಗಿ ಸಂಪನ್ಮೂಲಗಳ ಸಂಗ್ರಹ ಮಾಡಿಕೊಂಡರು, ಜತೆಗೆ ಅಧ್ಯಯನವೂ ಭರದಿಂದ ಸಾಗಿತು. 17 ಕಿ.ಮೀ. ದೂರದ ಗ್ರಂಥ ಭಂಡಾರಕ್ಕೆ ನಡೆದೇ ಹೋಗುತ್ತಿದ್ದರು. ಪರಿಣಾಮ ಬ್ಯಾರಿಸ್ಟರ್ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದರು. ಮುಂದೆ ಬ್ಯಾರಿಸ್ಟರ್ ವೃತ್ತಿ. ಅಲ್ಪ ಸಮಯದಲ್ಲೇ ಅವರ ಪ್ರಭಾವ, ಕೀರ್ತಿ ಹೆಚ್ಚಾಯಿತು. ಸಹಜವಾಗಿ ಶ್ರೀಮಂತಿಕೆಯೂ ಬೆಳೆಯಿತು. ಅಹ್ಮದಾಬಾದಿನ ಅತೀದೊಡ್ಡ ಬ್ಯಾರಿಸ್ಟರ್ ಎನಿಸಿಕೊಂಡರು.
Related Articles
Advertisement
ಮುಂದೆಯೂ ಅನೇಕ ಹೋರಾಟಗಳಲ್ಲಿ ಪಟೇಲರು ಬ್ರಿಟಿಷರಿಗೆ ಸಿಂಹಸ್ವಪ್ನವಾಗುತ್ತಾರೆ. ಇಡೀ ಹಿಂದೂಸ್ಥಾನದ ಜನ ಅವರನ್ನು ಸರ್ದಾರ್ ಎಂದು ಕರೆಯುತ್ತಾರೆ. ತಮಗಾದ ಅವಮಾನಕ್ಕೆ ಪ್ರತಿಯಾಗಿ ಬ್ರಿಟಿಷರು ಎರಡು ಬಾರಿ ಪಟೇಲರನ್ನು ಬಂಧಿಸುತ್ತಾರೆ, ಚಿತ್ರಹಿಂಸೆ ನೀಡುತ್ತಾರೆ. ಆದರೆ ಅದ್ಯಾವುದೂ ಪಟೇಲರ ಸ್ವರಾಜ್ಯದ ಕನಸಿಗೆ ಅಡ್ಡಿ ಮಾಡಲಿಲ್ಲ. ಯಾಕೆಂದರೆ ಅವರು ಉಕ್ಕಿನ ಮನುಷ್ಯ.
ಸ್ವತಂತ್ರ ಭಾರತದ ಮೊದಲ ಗೃಹ ಸಚಿವರಾಗಿ ನೇಮಕವಾದರು ಸರ್ದಾರ್ ಪಟೇಲ್. ಆಗ ಭಾರತದಲ್ಲಿ 600ಕ್ಕೂಹೆಚ್ಚು ಸಂಸ್ಥಾನಗಳಿದ್ದವು. ಈ ರಾಜ್ಯಗಳೆಲ್ಲ ಸ್ವತಂತ್ರ ಭಾರತದಲ್ಲಿ ಲೀನವಾಗದಿದ್ದಲ್ಲಿ ಮುಂದೆ ರಾಷ್ಟ್ರದ ಅಖಂಡತೆಗೆ ಬಹಳ ದೊಡ್ಡ ಅಪಾಯವಿದೆ ಎಂದರಿತ ಪಟೇಲರು ತಮ್ಮ ಕಾರ್ಯ ಪ್ರಾರಂಭಿಸಿದರು. ಅನೇಕ ರಾಜರನ್ನು ತಾವೇ ಭೇಟಿಯಾಗಿ ಮಾತುಕತೆ ನಡೆಸಿದರು, ದೇಶದ ಭವಿಷ್ಯಕ್ಕಾಗಿ ಒಂದಾಗೋಣ ಎಂದು ಕೈಮುಗಿದರು, ಕೆಲವರಿಗೆ ಎಚ್ಚರಿಕೆಯನ್ನೂ ಕೊಟ್ಟರು! ಉಕ್ಕಿನ ಮನುಷ್ಯನ ಗರ್ಜನೆಯ ಪರಿಣಾಮದ ಅರಿವಿದ್ದ ಬಹುತೇಕ ರಾಜರು ಭಾರತದ ಒಕ್ಕೂಟದೊಳಗೆ ಸೇರಿಕೊಂಡರು. ಆದರೆ ಜುನಾಗಢದ ನವಾಬ ಮತ್ತು ಹೈದರಾಬಾದಿನ ನಿಜಾಮ ಪಾಕಿಸ್ಥಾನದ ಜತೆ ಸೇರಿಕೊಳ್ಳಲು ಒಳಗಿಂದೊಳಗೆ ಪಿತೂರಿ ನಡೆಸಿದ್ದರು. ಆ ಸಂಚಿನ ಅರಿವಿದ್ದ ಪಟೇಲರು, ಬ್ರಿಗೇಡಿಯರ್ ಗುರುದಯಾಳ ಸಿಂಹರನ್ನು ಸೈನ್ಯ ಸಹಿತವಾಗಿ ಜುನಾಗಢಕ್ಕೆ ಕಳುಹಿಸುತ್ತಾರೆ. ತಾವು ಭಾರತಕ್ಕೇ ಸೇರಬೇಕೆಂದುಕೊಂಡಿದ್ದ ಜುನಾಗಢದ ಜನರೂ ನವಾಬನ ವಿರುದ್ಧ ತಿರುಗಿ ನಿಂತರು. ಪರಿಣಾಮ ಜುನಾಗಢದ ನವಾಬ ಪ್ರಾಣ ರಕ್ಷಿಸಿಕೊಳ್ಳಲು ಪಾಕಿಸ್ಥಾನಕ್ಕೆ ಓಡಿಹೋದ. 1947 ನವೆಂಬರ್ 12ರಂದು ಜುನಾಗಢ ತಲುಪಿದ ಸರ್ದಾರ್ ಪಟೇಲ್ ಅಲ್ಲಿಂದಲೇ ಹೈದರಾಬಾದಿನ ನಿಜಾಮನಿಗೆ ಎಚ್ಚರಿಕೆ ನೀಡಿದರೂ ನಿಜಾಮನಿಗೆ ಬುದ್ಧಿ ಬರಲಿಲ್ಲ. ಅವನ ಪೈಶಾಚಿಕ ಕೃತ್ಯಗಳು, ದೇಶದ್ರೋಹದ ಕೆಲಸಗಳು ಮಿತಿ ಮೀರತೊಡಗಿತು. ದಂಡಂ ದಶಗುಣಂ..ಪಟೇಲರು ಮತ್ತೆ ರಂಗಕ್ಕಿಳಿದರು. ಜನರಲ್ ಚೌಧರಿಯವರನ್ನು ಸೈನ್ಯದೊಂದಿಗೆ ಕಳುಹಿಸಿ ಪೊಲೀಸ್ ಕಾರ್ಯಾಚರಣೆ ನಡೆಸಿದರು. ಕೇವಲ ಐದೇ ದಿನಗಳಲ್ಲಿ ನಿಜಾಮ ಶರಣಾದ, ಅವನ ಬಲಗೈ ಆಗಿದ್ದ ಖಾಸಿಂ ರಜ್ವಿà ಪಾಕಿಸ್ಥಾನಕ್ಕೆ ಪಲಾಯನ ಮಾಡಿದ.
ಇನ್ನುಳಿದಿದ್ದು ಕಾಶ್ಮೀರ.. ಕಾಶ್ಮೀರದ ರಾಜ ಹರಿಸಿಂಗನ ಮನವೊಲಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಗಿನ ಸರಸಂಘಚಾಲಕರಾಗಿದ್ದ ಶ್ರೀ ಮಾಧವ ಸದಾಶಿವ ಗೋಳ್ವಲ್ಕರ್ ಅವರನ್ನು ಕಳುಹಿಸುತ್ತಾರೆ ಪಟೇಲರು. “ಭಾರತದೊಂದಿಗೆ ಸೇರಿಕೊಳ್ಳದಿದ್ದರೆ ಕಾಶ್ಮೀರ ನಾಳೆ ಪಾಕಿಸ್ಥಾನದ ಕಪಿಮುಷ್ಟಿಯಲ್ಲಿರುತ್ತದೆ. ನಿಮ್ಮ ಭವಿಷ್ಯಕ್ಕೂ ಗಂಡಾಂತರವಿದೆ’ ಎಂಬುದನ್ನು ಶ್ರೀಗುರೂಜಿಯವರು ಮನವರಿಕೆ ಮಾಡಿದ ಅನಂತರ ಹರಿಸಿಂಗ್ ಭಾರತದೊಂದಿಗೆ ಸೇರಿಕೊಳ್ಳಲು ಒಪ್ಪುತ್ತಾರೆ. ಆದರೆ ಅಷ್ಟರಲ್ಲಿ ಪಾಕಿಸ್ಥಾನ ತನ್ನ ಕುತಂತ್ರವನ್ನು ಆರಂಭಿಸಿತ್ತು. ಕಾಶ್ಮೀರದ ಐದನೇ ಒಂದು ಭಾಗವನ್ನು ವಶಪಡಿಸಿಕೊಂಡಾಗಿತ್ತು. ಪಾಕ್ ಸೈನ್ಯ ಅಲ್ಲಿಂದ ಮುಂದೆ ಬಾರ ದಂತೆ ತಡೆಯುವಲ್ಲಿ ನಮ್ಮ ಸೈನಿಕರು ಯಶಸ್ವಿಯಾದರು. ತಮ್ಮ ಮುತ್ಸದ್ದಿತನದಿಂದ ನೂರಾರು ಸಂಸ್ಥಾನಗಳನ್ನು ಭಾರತದೊಂದಿಗೆ ವಿಲೀನವಾಗಿಸಿದ ಸಮಗ್ರತೆಯ ಶಿಲ್ಪಿ ಸರ್ದಾರ್ ವಲ್ಲಭಭಾಯ್ ಪಟೇಲ್.
ಭಾರತ ಸ್ವತಂತ್ರವಾದರೂ ಮಹ್ಮದ್ ಘಜ್ನಿಯಿಂದ ಪ್ರಾರಂಭಿಸಿ ಪರಕೀಯರ ದಾಳಿಯಿಂದ ಪಾಳುಬಿದ್ದಿದ್ದ ಪವಿತ್ರ ಸೋಮನಾಥ ದೇವಾಲಯ ಅವರ ಮನಸ್ಸನ್ನು ಇರಿಯುತ್ತಿತ್ತು. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪಟೇಲರು ಕಟಿಬದ್ಧರಾಗಿ ನಿಂತರು. ಕೆಲವೇ ವರ್ಷಗಳಲ್ಲಿ ಶತಶತಮಾನಗಳ ದಾಸ್ಯವನ್ನು ಕೊಡವಿಕೊಂಡು ಸೋಮನಾಥ ಮಂದಿರ ಮೇಲೆದ್ದು ನಿಂತಿತು. ಭಾರತದ ಅದ್ಭುತ ಚೈತನ್ಯ ಮತ್ತು ವಿಜಯದ ಸಂಕೇತವಾಗಿ ಅದು ಮೆರೆಯುವಂತೆ ಮಾಡಿದ ಕೀರ್ತಿ ಸರ್ದಾರ್ ಪಟೇಲರಿಗೇ ಸಲ್ಲಬೇಕು.
ಇಂದು ಸರ್ದಾರ್ ಪಟೇಲರ 147ನೇ ಜನ್ಮದಿನ. ಅವರ ಆ ಪುರುಷ ಸಿಂಹ ವ್ಯಕ್ತಿತ್ವವನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾ ಅವರ ದಾರಿಯಲ್ಲಿ ಒಂದೆರಡು ಹೆಜ್ಜೆಗಳನ್ನಾದರೂ ಹಾಕುತ್ತಾ ಸಮಾಜಮುಖಿಗಳಾಗೋಣ.
– ಪ್ರಕಾಶ್ ಮಲ್ಪೆ