Advertisement

ಹಿರಿಕಿರಿಯರಿಂದ ಕಳೆಗಟ್ಟಿದ ಸರಯೂ ಸಪ್ತಾಹ

06:18 PM Aug 29, 2019 | Team Udayavani |

ವರ್ಷ ಋತುವಿನ ಜಡಿಮಳೆಯ ನಡುವೆಯೂ ಶ್ರೀಕ್ಷೇತ್ರ ಕದ್ರಿಯ ರಾಜಾಂಗಣದಲ್ಲಿ ನಡೆದ ಸರಯೂ ಸಪ್ತಾಹ ಯಕ್ಷಪ್ರಿಯರನ್ನು ರಂಜಿಸಿತು. ಮಕ್ಕಳ ಮೇಳದಿಂದ ನಾಲ್ಕು ಪ್ರಸಂಗಗಳು ಹಾಗೂ ಹಿರಿಯ ಖ್ಯಾತ ಕಲಾವಿದರಿಂದ ಮೂರು ಪ್ರಸಂಗಗಳು ಪ್ರದರ್ಶಿಸಲ್ಪಟ್ಟವು. ಹಿರಿಯ ಕಲಾವಿದರು ತಮ್ಮ ಪೂರ್ಣಪ್ರಮಾಣದ ಪ್ರತಿಭೆಯನ್ನು ಬಿಂಬಿಸಿದರೆ, ಮಕ್ಕಳು ಸ್ಪರ್ಧೆಗೆ ಬಿದ್ದರೇನೋ ಎಂಬಂತೆ ಕುಣಿದು – ಉಲಿದು ಬಾಲಯಕ್ಷರೇ ಆದರು.

Advertisement

ಬಲಿಪ ಪ್ರಸಾದರು, ಮುರಾರಿ ಕಡಂಬಳಿತ್ತಾಯ, ಶಂಕರನಾರಾಯಣ ಪದ್ಯಾಣ, ಕೃಷ್ಣ ಪ್ರಕಾಶರ ಉತ್ತಮ ಹಿಮ್ಮೇಳವಿತ್ತು. ಭೀಷ್ಮ- ಕರ್ಣದಲ್ಲಿ ಭೀಷ್ಮನಾಗಿ ಜಯಪ್ರಕಾಶ್‌ ಶೆಟ್ಟಿ ಮನೋಜ್ಞ ಅಭಿನಯ ನೀಡಿದರು. ಕೌರವನಾಗಿ ರವಿರಾಜ ಪನೆಯಾಲ, ಕೃಷ್ಣನಾಗಿ ಮರಕಡ ಲಕ್ಷ್ಮಣ , ಕರ್ಣನಾಗಿ ಸುಬ್ರಾಯ ಹೊಳ್ಳ, ಅರ್ಜುನನಾಗಿ ಉಮೇಶ್‌ ಶೆಟ್ಟಿ ಉಬರಡ್ಕರವರು ಎಂದಿನ ಸ್ಪರ್ಧಾತ್ಮಕ ಪ್ರದರ್ಶನವನ್ನು ನೀಡಿದರು. ಸೀತಾರಾಮ್‌ ಕುಮಾರ್‌ ಕಟೀಲ್‌ ಅವರು ವೃದ್ಧ ವಿಪ್ರನಾಗಿ ಉತ್ತಮವಾಗಿ ಪಾತ್ರನಿರ್ವಹಣೆ ನೀಡಿದರು. ಪ್ರೌಢ ಪ್ರತಿಭೆಗಳ ಸಂಗಮ ಇದಾಗಿತ್ತು. ಪ್ರಥಮ ದಿನವನ್ನು ಈ ಕಲಾವಿದರು ನೆನಪಿನಲ್ಲುಳಿಯುವಂತೆ ಮಾಡಿದರು.

ಶಬರಿಮಲೆ ಶ್ರೀ ಸ್ವಾಮಿ ಅಯ್ಯಪ್ಪ ಪ್ರಸಂಗದಲ್ಲಿ ಎಲ್ಲೂರು ರಾಮಚಂದ್ರ ಭಟ್‌, ಅರುಣ್‌ ಕೋಟ್ಯಾನ್‌, ಸೀತಾಂಗೋಳಿ ಬಾಲಕೃಷ್ಣ, ಬಂಟ್ವಾಳ ಜಯರಾಮ ಆಚಾರ್ಯ, ರಘು ಕಾವೂರು, ಸುಜಯ್‌ ಕೋಟ್ಯಾನ್‌, ಸಂಜೀವ, ಪಿ.ವಿ.ಪರಮೇಶ್‌ರವರ ನಿರ್ವಹಣೆ ಕಥೆಯು ಚೆನ್ನಾಗಿ ಮೂಡಿ ಬರಲು ಕಾರಣವಾಯಿತು. ಭೋಜರಾಜ ವಾಮಂಜೂರು ರವರು ಅಬ್ಬುವಾಗಿ ರಂಜಿಸಿದರು. ಸುಜಯ್‌ ಕೋಟ್ಯಾನ್‌ ಸೇಕುವಾಗಿ ರಂಗದ ಪ್ರೌಢಿಮೆಯನ್ನು ಹೆಚ್ಚಿಸಿದರು. ಸಿರಿಬಾಗಿಲು ರಾಮಕೃಷ್ಣ ಮಯ್ಯರು ಭಾಗವತರಾಗಿ ಸಹಕರಿಸಿದರು.

ಭಾರ್ಗವ ಪ್ರಪಂಚ ಮತ್ತೆ ಹಿರಿಯರ ಪ್ರದರ್ಶನದಿಂದ ಮೂಡಿಬಂದ ಕಥೆ.ಪುತ್ತಿಗೆ ರಘುರಾಮ ಹೊಳ್ಳರು ಈ ಕಥೆಯನ್ನು ಎಲ್ಲೂ ಸೋಲಲು ಬಿಡದೆ ಉತ್ತಮವಾಗಿ ಮೂಡಿಬರುವುದಕ್ಕೆ ಕಾರಣವಾದರು. ಉತ್ತಮ ಹಿಮ್ಮೇಳವಿದ್ದರೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವೆನ್ನುವುದಕ್ಕೆ ಈ ರಂಗ ಕಥೆಯೇ ಸಾಕ್ಷಿ. ಗಣಾಧಿರಾಜ ತಂತ್ರಿ ಉಪಾಧ್ಯಾಯ, ಸಂಜಯ್‌ ಕುಮಾರ್‌ ಗೋಣಿಬೀಡು, ಮಿಜಾರು ತಿಮ್ಮಪ್ಪ ,ರಾಮಚಂದ್ರ ಮುಕ್ಕ, ಸಂದೀಪ್‌ ಶೆಟ್ಟಿ ದೋಟ, ಜಯಪ್ರಕಾಶ್‌ ಹೆಬ್ಟಾರ್‌, ಮಹೇಶ್‌ ಪಾಟಾಳಿ, ಪ್ರಶಾಂತ ಐತಾಳರು ಪಾತ್ರಗಳಿಗೆ ಜೀವ ತುಂಬಿದರು. ರವಿ ಅಲೆವೂರಾಯ ವರ್ಕಾಡಿ ಹಾಗೂ ಕದ್ರಿ ನವನೀತ ಶೆಟ್ಟಿಯವರ ಜಮದಗ್ನಿ – ರೇಣುಕೆ ಪಾತ್ರ ಉತ್ತಮವಾಗಿ ಮೂಡಿಬಂದಿದ್ದು ಅಂದಿನ ಆಕರ್ಷಣೆಯಾಗಿತ್ತು.

ರವಿವಾರ ಬೆಳಗ್ಗಿನಿಂದಲೇ ಮಹಿಳಾ ತಾಳಮದ್ದಳೆ ಮೇಳೈಸಿತು. ಸರಯೂ ಮಹಿಳಾ ವೃಂದ ರತಿಕಲ್ಯಾಣ, ಶ್ರೀ ದುರ್ಗಾಪರಮೇಶ್ವರಿ ವೆಂಕಟರಮಣ ದೇವಳದ ಮಹಿಳಾ ತಂಡ ಸುದರ್ಶನ ಗರ್ವಭಂಗ, ರಾಮಕ್ಷತ್ರಿಯ ಮಹಿಳಾಯಕ್ಷವೃಂದದಿಂದ ಗಿರಿಜಾ ಕಲ್ಯಾಣ, ಹಾಗೂ ಯಕ್ಷ ಮಂಜುಳ ಕದ್ರಿ ರುಕ್ಮಿಣಿ ಕಲ್ಯಾಣ ಪ್ರಸಂಗಗಳನ್ನು ಪ್ರಸ್ತುತಪಡಿಸಿದರು. ಎಲ್ಲರೂ ತಮಗೆ ದೊರಕಿದ ಕಾಲಮಿತಿಯಲ್ಲಿ ಉತ್ತಮ ಕಾರ್ಯಕ್ರಮ ನೀಡಿದರು.

Advertisement

ಇನ್ನು ಸರಯೂ ಮಕ್ಕಳ ಮೇಳದ ಪ್ರದರ್ಶನಗಳು ಯಕ್ಷ ಪಂಡಿತರ ಶ್ಲಾಘನೆಗೆ ಒಳಪಡುವಂತಿದ್ದವು. ಕೆಲವೊಂದು ಬಾಲ ಕಲಾವಿದರ ಅದ್ಭುತ ಪ್ರದರ್ಶನಗಳನ್ನು ಕಂಡಾಗ ಇವರು ಮುಂದೆ ಪ್ರಬುದ್ಧ ಕಲಾವಿದರಾಗಿ ಬೆಳೆಯುವುದರಲ್ಲಿ ಅನುಮಾನವಿಲ್ಲ ಎನಿಸಿತು. ಯಕ್ಷ ಮಣಿ ತುಳು ಯಕ್ಷಗಾನ ಬಾಲ ಕಲಾವಿದರ ಅತ್ಯುತ್ತಮ ಆಖ್ಯಾನ. ಮೂರು-ನಾಲ್ಕು ಸ್ತ್ರೀ ಪಾತ್ರಗಳು ಪುಂಡುವೇಷ, ನಾಟಕೀಯ ಪಾತ್ರಗಳೆಲ್ಲ ಇದ್ದು, ಪಾಪಣ್ಣನೇ ಹಾಸ್ಯ ಪಾತ್ರ ಇದರಲ್ಲಿ. ಎಲ್ಲವೂ ಚೆನ್ನಾಗಿ ಮೂಡಿಬಂತು. ಯಕ್ಷಿಣಿ ಪಾತ್ರ ಮಾಡಿದ ಬಾಲಕ ಮುಂದೆ ಭರವಸೆಯ ಕಲಾವಿದನಾಗಿ ಮೂಡಿ ಬಂದ. ಮುಂದೆ ಆತನೇ ಚಂಡ-ಮುಂಡನಾಗಿ,ಲೀಲೆಯ ಕೃಷ್ಣನಾಗಿ ಆಕರ್ಷಣೀಯ ಪಾತ್ರಗಳನ್ನು ನಿರ್ವಹಿಸಿದ್ದ. ಸರಯೂ ತಂಡವೇ ಗುರುದಕ್ಷಿಣೆ, ಸಂಪೂರ್ಣ ಶ್ರೀ ದೇವಿ ಮಹಾತೆ¾ ,ಶ್ರೀಕೃಷ್ಣಲೀಲೆ ಕಂಸವಧೆ ಪ್ರಸಂಗಗಳನ್ನು ಪ್ರದರ್ಶಿಸಿದರು. ಸುಜಯ್‌ ಕೋಟ್ಯಾನ್‌ ಮತ್ತು ಚಿಂತನ್‌ರವರ ಚಂಡ – ಮುಂಡರು ಮಿಂಚಿನ ಸಂಚಾರವನ್ನುಂಟು ಮಾಡಿದರು. ರಕ್ತಬೀಜನಾಗಿ ವಿಜಯಲಕ್ಷ್ಮೀಯವರೂ ಯಶಸ್ವಿ ಕಲಾವಿದೆ ಎನಿಸಿಕೊಂಡರು.

ರಾಜೇಶ್‌ ಶೆಟ್ಟಿ,ಉಪ್ಪಳ

Advertisement

Udayavani is now on Telegram. Click here to join our channel and stay updated with the latest news.

Next