Advertisement
1968 ದಶಂಬರದಲ್ಲಿ ಸ್ನಾತಕೋತ್ತರ ಕನ್ನಡ ವಿಭಾಗದ ಉದ್ಘಾಟನೆಯ ಸಮಾರಂಭ ಸೈಂಟ್ ಅಲೋಸಿಯಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಮೈಸೂರು ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದ ಪ್ರೊ. ದೇ. ಜವರೇಗೌಡರು ಉದ್ಘಾಟನೆ ಮಾಡಿದರು. ಸೂರ್ಯನಾರಾಯಣ ಅಡಿಗರು ಮತ್ತು ಅಲೋಶಿಯಸ್ ಕಾಲೇಜಿನ ಪ್ರಿನ್ಸಿಪಾಲ್ ಫಾ. ಲಾರೆನ್ಸ್ ರಸ್ಕಿಞ್ಞ ಅವರು ಮುಖ್ಯ ಅತಿಥಿ ಆಗಿದ್ದರು. ಎಸ್‌ವಿಪಿ ಅವರ ಸ್ವಾಗತ ಮತ್ತು ಪ್ರಸ್ತಾವನಾ ಭಾಷಣ. ವಿದ್ಯಾರ್ಥಿಗಳ ಪರವಾಗಿ ನನ್ನನ್ನು ಮಾತಾಡಲು ಹೇಳಿದರು. ಮಂಗಳೂರಿನಲ್ಲಿ ಅದು ನನ್ನ ಮೊತ್ತಮೊದಲನೆಯ ಸಾರ್ವಜನಿಕ ಭಾಷಣ. ಸ್ವಲ್ಪ ಜಾಸ್ತಿ ಕಾವ್ಯಾತ್ಮಕವಾಗಿ ಮಾತಾಡಿದೆ ಎಂದು ನೆನಪು. ಆದರೆ, ಗಣ್ಯರ ಗಮನ ಸೆಳೆಯಲು ನನ್ನ ಆ ಭಾಷಣ ಸಹಾಯಕವಾಯಿತು. ಎಲ್ಲ ಅತಿಥಿಗಳು ಭವಿಷ್ಯದ ವಿಶ್ವವಿದ್ಯಾನಿಲಯದ ಕನಸನ್ನು ಕಟ್ಟಿದರು. ಸ್ನಾತಕೋತ್ತರ ಕೇಂದ್ರದ ಸ್ಥಾಪನೆಯ ಹಿಂದಿನ ಸೂರ್ಯನಾರಾಯಣ ಅಡಿಗರ ಪಾತ್ರವನ್ನು ದೇಜಗೌ ವಿಶೇಷವಾಗಿ ಸ್ಮರಿಸಿದರು.
Related Articles
Advertisement
ಮಂಗಳಗಂಗೋತ್ರಿಯ ಅಂಗಳಕ್ಕೇರಿ ಒಂದು ಸುತ್ತು ಮುಗಿಸಿ ಮತ್ತೆ ಪ್ರೊಫೆಸರ್ ಮತ್ತು ಲಕ್ಕಪ್ಪ ಗೌಡರ ಸಾರಥ್ಯದಲ್ಲಿ ಮಂಗಳತೇರಿನ ಹಿಂದೆ ಕನ್ನಡ ರಥದ ಇನ್ನೊಂದು ಸುತ್ತಿಗೆ ಮಿಣಿಯನ್ನು ಹಿಡಿದೆವು ಜುಲೈ 1969ರಲ್ಲಿ. ನಮ್ಮ ಜೊತೆಗೆ ತೇರು ಎಳೆಯಲು ಕೈಜೋಡಿಸಲು ಬರುವ ತಮ್ಮ ತಂಗಿಯರಿಗೆ ಕಾತರದಿಂದ ಕಾಯುತ್ತಿದ್ದೆವು. ನಾವು ನೋಡುನೋಡುತ್ತಿದ್ದಂತೆಯೇ ಬಂದರು ಸಾಲು ಸಾಲಾಗಿ ಮೂವತ್ತೂಂದು ಕನ್ನಡದ ಕಿಂಕರರು ನಾಡಿನ ಮೂಲೆ ಮೂಲೆಗಳಿಂದ. ನಮಗೆ ಬೆರಗು ಸಂಭ್ರಮ; ಎಸ್ವಿಪಿ ಕಿಂದರಿಜೋಗಿಯ ಮಾಂತ್ರಿಕ ಶಕ್ತಿಯ ಬಗ್ಗೆ ಅಭಿಮಾನ!
ಅಂತಿಮ ಕನ್ನಡ ಎಂಎಯ ಅಧ್ಯಯನಕ್ಕೆ ನಮಗೆ ಇದ್ದ ಪತ್ರಿಕೆಗಳು: 1. ಛಂದಸ್ಸು ಮತ್ತು ಗ್ರಂಥಸಂಪಾದನೆ 2. ವಿಶೇಷ ಸಾಹಿತ್ಯಪ್ರಕಾರ: ವಚನ ಸಾಹಿತ್ಯ 3. ಭಾರತೀಯ ಕಾವ್ಯಮೀಮಾಂಸೆ ಮತ್ತು ಸಾಹಿತ್ಯವಿಮರ್ಶೆ 4. ತೌಲನಿಕ ದ್ರಾವಿಡ ಭಾಷಾವಿಜ್ಞಾನ.
ಪ್ರೊಫೆಸರ್ ಅವರು ಭಾರತೀಯ ಕಾವ್ಯಮೀಮಾಂಸೆ ಜೊತೆಗೆ ವಚನಸಾಹಿತ್ಯದ ಕೆಲವು ಪಠ್ಯಗಳನ್ನು, ಲಕ್ಕಪ್ಪ ಗೌಡರು ಛಂದಸ್ಸು, ಸಾಹಿತ್ಯವಿಮರ್ಶೆ ಮತ್ತು ಕೆಲವು ವಚನಸಾಹಿತ್ಯದ ಪಠ್ಯಗಳನ್ನು ಪಾಠಮಾಡುತ್ತಿದ್ದರು. ಉಳಿದ ಪಾಠಗಳಿಗೆ ಹೊಸ ಅಧ್ಯಾಪಕರ ನಿರೀಕ್ಷೆಯಲ್ಲಿ ಇದ್ದೆವು. ಆದರೆ, ಯಾರೂ ಬಂದಿರಲಿಲ್ಲ. ಮಂಜುನಾಥ ಭಟ್ಟರ ಸಂಸ್ಕೃತ ಪಾಠ ಮುಂದುವರಿದಿತ್ತು.
31 ಮಂದಿ ಪ್ರಥಮ ಎಂ.ಎ.ಗೆ ಸೇರಿದ್ದು ಸಂಭ್ರಮದ ಜೊತೆಗೆ ಕೆಲವು ಸಮಸ್ಯೆಗಳನ್ನೂ ತಂದಿತು. ಆ ಹಳೆಯ ಕಟ್ಟಡದಲ್ಲಿ ಇದ್ದ ಎರಡು ಕೋಣೆಗಳು ಚಿಕ್ಕವು. ಅವುಗಳಲ್ಲಿ ಇಷ್ಟುಮಂದಿ ಕುಳಿತುಕೊಳ್ಳಲು ಸಾಧ್ಯ ಇರಲಿಲ್ಲ. ಆದರೆ, ಪ್ರೊಫೆಸರ್ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಶಕ್ತಿ ಇದ್ದವರು. ಪೋರ್ಟಿಕೋದಲ್ಲಿ ಕಾರಿಡಾರ್ ಸ್ಥಳವನ್ನೂ ಬಳಸಿಕೊಂಡು ತರಗತಿ ನಡೆಸಲು ವ್ಯವಸ್ಥೆ ಮಾಡಲಾಯಿತು. ಅಧ್ಯಾಪಕರ ಪ್ಲೇಟ್‌ಫಾರ್ಮ್, ಮೇಜು-ಕುರ್ಚಿಗಳನ್ನು ಎರಡು ಕಾರಿಡಾರ್‌ಗಳು ಸೇರುವ ಮೂಲೆಯಲ್ಲಿ ಇಟ್ಟು, ಎರಡೂ ಕಡೆ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಕುರ್ಚಿ-ಮೇಜು ಹಾಕಲಾಯಿತು. ಒಂದು ರೀತಿಯಲ್ಲಿ ಅದು ಆಲಯ ಬಯಲು ಆಗುವ ಸೊಬಗು. ತರಗತಿಗೆ ಗೋಡೆಗಳು ಇಲ್ಲದ್ದರಿಂದ ಹೊರಗಿನ ಗಾಳಿ ಬೆಳಕು, ಕೆಲವೊಮ್ಮೆ ಬಿಸಿಲು ಕೂಡಾ ಧಾರಾಳ. ಆದರೆ ಕೆಳಗೆ ರಸ್ತೆಯಲ್ಲಿ ಬೈಕ್ ಲಾರಿಗಳ ಶಬ್ದವಾದಾಗ ಪಾಠಕ್ಕೆ ಕಿರುವಿರಾಮ. ಅಧ್ಯಾಪಕರಿಗೆ ಮಾತ್ರ ತಮ್ಮ ಕತ್ತನ್ನು ತಿರುಗುವ ಫ್ಯಾನ್‌ನಂತೆ ಅರ್ಧಚಂದ್ರಾಕಾರವಾಗಿ ತಿರುಗಿಸುವ ವ್ಯಾಯಾಮ!
ನಮ್ಮ ಎಂ.ಎ. ಅಂತಿಮ ವರ್ಷದ ಮೊದಲನೆಯ ಶೈಕ್ಷಣಿಕ ಅವಧಿ ಮುಗಿದಾಗ ನವಂಬರದಲ್ಲಿ ಮೈಸೂರು ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯ ಹರಿದಾಸಸಾಹಿತ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿದ್ದ ಗುಂಡ್ಮಿ ಚಂದ್ರಶೇಖರ ಐತಾಳರು ಕನ್ನಡವಿಭಾಗದಲ್ಲಿ ಉಪನ್ಯಾಸಕರಾಗಿ ಸೇರಿದರು. ಐತಾಳರು ನಮಗೆ ದ್ರಾವಿಡ ಭಾಷಾವಿಜ್ಞಾನ ಮತ್ತು ಗ್ರಂಥಸಂಪಾದನೆ ವಿಷಯಗಳನ್ನು ಬೋಧಿಸಿದರು. ವಚನಸಾಹಿತ್ಯದ ಕೆಲವು ಪಠ್ಯಗಳನ್ನೂ ಪಾಠಮಾಡಿದರು. ದುಂಡಗಿನ ಸುಂದರ ಕೈಬರಹ, ವಿಷಯಗಳನ್ನು ನಿಧಾನವಾಗಿ ಸರಳವಾಗಿ ಸ್ಪಷ್ಟವಾಗಿ ವಿವರಿಸುವ ಉತ್ತಮ ಸಂವಹನದ ಶೈಲಿ, ನಡುವೆ ಹಾಸ್ಯದ ತುಣುಕುಗಳು ಐತಾಳರ ಅನನ್ಯತೆ. ದ್ರಾವಿಡಭಾಷಾವಿಜ್ಞಾನದಂತಹ ಶಾಸ್ತ್ರವಿಷಯವನ್ನು ವಿದ್ಯಾರ್ಥಿಗಳಿಗೆ ದ್ರಾಕ್ಷಾಪಾಕದಂತೆ ಅನುಭವಿಸುವಂತೆ ಮಾಡುವ ಅವರ ಬೋಧನಾ ವಿಧಾನ ಅಪೂರ್ವ. ಅವರು ಕೇವಲ ನಾಲ್ಕು ತಿಂಗಳು ಮಾತ್ರ ನಮಗೆ ಪಾಠಮಾಡಿದರೂ ಅವರ ಶಾಸ್ತ್ರಪಾಠದ ಅನುಭವ ವಿಶೇಷ ಪರಿಣಾಮಕಾರಿ.
ಪ್ರೊಫೆಸರ್ ಎಸ್‌ವಿಪಿಯವರು ಕನ್ನಡವಿಭಾಗದಲ್ಲಿ ನಡೆಸಿದ ಇನ್ನೊಂದು ಅಪೂರ್ವ ಪ್ರಯೋಗ “ಮನೆಮನೆಗೆ ಸರಸ್ವತಿ’. ಅವರ ನೇತೃತ್ವದಲ್ಲಿ ಕನ್ನಡವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು 1969 ನವಂಬರ ಕೊನೆಯ ವಾರ ಮತ್ತು ದಶಂಬರ ಮೊದಲನೆಯ ವಾರ, ಹದಿನೈದು ದಿನಗಳ ಕಾಲ ಚೀಲಗಳಲ್ಲಿ ಕನ್ನಡ ಪುಸ್ತಕಗಳನ್ನು ತುಂಬಿಕೊಂಡು ಮನೆಮನೆಗೆ, ಅಂಗಡಿಯಂಗಡಿಗೆ ಹೋಗಿ, ಪುಸ್ತಕಗಳನ್ನು ಮಾರಾಟಮಾಡಿದೆವು. ಪುಸ್ತಕಪ್ರಕಾಶಕರಿಂದ ಪುಸ್ತಕಗಳನ್ನು ತರಿಸಿಕೊಂಡು ಮಾರಾಟಮಾಡಿ, ಕಮಿಷನ್ ಕಳೆದು, ಹಣವನ್ನು ಪ್ರಕಾಶಕರಿಗೆ/ಲೇಖಕರಿಗೆ ಕಳುಹಿಸಿಕೊಟ್ಟದ್ದು ಒಂದು ಸಾಂಸ್ಕೃತಿಕ ದಾಖಲೆ.
ಕರಂಗಲಪಾಡಿಯ ನಮ್ಮ ಕನ್ನಡವಿಭಾಗದಿಂದ ಹೊರಟು, ಕೊಡಿಯಾಲ್‌ಬೈಲ್, ಮಣ್ಣಗುಡ್ಡೆ, ಲಾಲ್‌ಬಾಗ್, ಕದ್ರಿಕಂಬಳ, ಬಿಜೈ, ಉರ್ವದವರೆಗೆ ದಾರಿಯಲ್ಲಿ ಕಂಡ ಕಂಡ ಮನೆಗಳಿಗೆ ಸಿಕ್ಕ ಸಿಕ್ಕ ಅಂಗಡಿಗಳಿಗೆ ಪ್ರವೇಶಿಸಿ, ನಮ್ಮ ಉದ್ದೇಶವನ್ನು ವಿವರಿಸಿ ಪುಸ್ತಕ ಮಾರಾಟ ಮಾಡಿದೆವು. ಬಹುತೇಕ ಎಲ್ಲ ಕಡೆ ನಮಗೆ ಒಳ್ಳೆಯ ಸ್ವಾಗತ ಮತ್ತು ಪ್ರತಿಕ್ರಿಯೆ ದೊರೆಯಿತು. ಲಾಲ್‌ಬಾಗ್‌ನ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಕಂಪೌಂಡಿನೊಳಗೆ ನೆರಳಿಗೆ ಬಂದಾಗ, ಬಿಸಿಲಿನಲ್ಲಿ ನಡೆದು ಬಸವಳಿದಿದ್ದ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿತು! ನಮ್ಮ ಪುಸ್ತಕ ಅಭಿಯಾನದಲ್ಲಿ ಅನೇಕ ಸ್ವಾರಸ್ಯಕರ ಪ್ರಸಂಗಗಳೂ ನಡೆದುವು. ಒಂದು ಗಡಂಗು (ಸಾರಾಯಿ ಅಂಗಡಿ)ವಿಗೆ ನುಗ್ಗಿ, ಪುಸ್ತಕ ಕೊಡಲು ಹೋದಾಗ, ಅಲ್ಲಿದ್ದವರು ತುಳುವಿನಲ್ಲಿ ಹೇಳಿದರು: “”ಇಂದ್ ಗಡಂಗ್. ಈಡೆ ಪರಿಯೆರೆ ಬರ್ಪುನಕುಲು ಅತ್ತಂದೆ ಬೂಕು ಓದಿಯೆರೆ ಬರ್ಪುಜೆರ್ (ಇದು ಸಾರಾಯಿ ಅಂಗಡಿ. ಇಲ್ಲಿ ಕುಡಿಯಲು ಬರುವವರೇ ಹೊರತು, ಪುಸ್ತಕ ಓದಲು ಬರುವುದಿಲ್ಲ.) ಪ್ರೊಫೆಸರ್, “ಏನು ವಿಷಯ?’ ಎಂದು ಕೇಳಿದರು. ನಾವು ಕನ್ನಡದಲ್ಲಿ ವಿವರಿಸಿದೆವು. “ಹಾಗಾದರೆ ಅವರಿಗೆ ರಾಜರತ್ನಂ ಅವರ ರತ್ನನ ಪದಗಳು ಪುಸ್ತಕ ಕೊಡಿರಿ. ಅದರ ಎಂಡುRಡ್ಕನ ಪದಗಳನ್ನು ಓದಲಿ’ ಎಂದರು ಪ್ರೊಫೆಸರ್! ನಾವು ಅವರಿಗೆ ಒತ್ತಾಯಪೂರ್ವಕ ರತ್ನನ ಪದಗಳು ಪುಸ್ತಕ ಕೊಟ್ಟು ಹಣ ತೆಗೆದುಕೊಂಡೆವು. ಅಲ್ಲಿಂದ ಹೊರಡುತ್ತಲೇ ವಿದ್ಯಾರ್ಥಿಗಳ ಹಾಡು ಸುರುವಾಯಿತು: ಯೆಂಡ ಯೆಂಡ್ತಿ ಕನ್ನಡ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ! ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ ತಕ್ಕೊ! ಪದಗೊಳ್ ಬಾಣ!
ಎಸ್‌ವಿಪಿ ಅವರು ಸ್ನಾತಕೋತ್ತರ ಕನ್ನಡವಿಭಾಗದಲ್ಲಿ “ಮಂಗಳಗಂಗೋತ್ರಿ ಕನ್ನಡಸಂಘ’ವನ್ನು ಕಟ್ಟಿ, ಅಧ್ಯಾಪಕ ಮತ್ತು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಕರಾವಳಿ ಕರ್ನಾಟಕದಲ್ಲಿ ಸಾಹಿತ್ಯ ಸಂಸ್ಕೃತಿಯ ಹೊಸಯುಗವನ್ನು ಆರಂಭಿಸಿದರು. ಕವಿ ಪೂಜೆ, ಸಾಹಿತಿಗಳ ಭಾವಚಿತ್ರ ಅನಾವರಣ, ಸಾಹಿತಿಗಳನ್ನು ಕುರಿತ ಉಪನ್ಯಾಸಗಳು, ಸಾಹಿತಿ ಕಲಾವಿದರ ಸನ್ಮಾನ, ವಿದ್ವತ್ ಉಪನ್ಯಾಸಗಳು, ಗ್ರಂಥ ಪ್ರಕಾಶನ ಮತ್ತು ಪುಸ್ತಕ ಬಿಡುಗಡೆ, ವಿದ್ಯಾರ್ಥಿ ಪ್ರತಿಭಾ ಪ್ರದರ್ಶನ, ಯಕ್ಷಗಾನ ತಾಳಮದ್ದಳೆ ಮತ್ತು ಬಯಲಾಟಗಳ ಪ್ರದರ್ಶನ, ಕಾಲೇಜು ವಿದ್ಯಾರ್ಥಿಗಳಿಗೆ ಯಕ್ಷಗಾನ ಬಯಲಾಟ ಸ್ಪರ್ಧೆ- ಹೀಗೆ ಹತ್ತು ಹಲವು ಸಾಹಿತ್ಯ ಸಂಸ್ಕೃತಿಯ ನಿತ್ಯೋತ್ಸವಗಳು. ಅಲ್ಲಿ ಅನುರಣಿಸುತ್ತಿತ್ತು ಸಾಹಿತ್ಯ ಸಂಸ್ಕೃತಿ ಸಂವಾದ, ಮೊಳಗುತ್ತಿತ್ತು ಚೆಂಡೆಮದ್ದಳೆಗಳ ನಾದ.
ಬಿ. ಎ. ವಿವೇಕ ರೈ