ಬಸವಕಲ್ಯಾಣ: 12ನೇ ಶತಮಾನದಲ್ಲಿ ಶರಣರು ತಮ್ಮ ಅನುಭವದ ಮೂಲಕ ರಚಿಸಿದ ವಚನಗಳು 21ನೇ ಶತಮಾನದಲ್ಲಿಯೂ ಸಹ ಇಡೀ ವಿಶ್ವಕ್ಕೆ ಮಾರ್ಗದರ್ಶನ ಮಾಡುವ ಶಕ್ತಿ ಹೊಂದಿವೆ. ಸಮ ಸಮಾಜದ ನಿರ್ಮಾಣದ ಕನಸು ಹೊತ್ತಿದ್ದ ಬಸವಾದಿ ಶರಣರು ವೈಚಾರಿಕ ಕ್ರಾಂತಿ ನಡೆಸುತ್ತಲೇ ಪರೋಕ್ಷವಾಗಿ ವೈಜಾರಿಕ ಕ್ರಾಂತಿಗೆ ಕಾರಣರಾದರು ಎಂದು ಕಲಬುರಗಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ದಯಾನಂದ ಅಗಸರ ನುಡಿದರು.
ನಗರದ ಹರಳಯ್ಯ ಗವಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖೀಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ನಡೆಯುತ್ತಿರುವ ಶರಣ ವಿಜಯೋತ್ಸವ 42ನೇ ಲಿಂಗವಂತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಹಮ್ಮಿಕೊಂಡ ಕಲ್ಯಾಣ ಕ್ರಾಂತಿ ಚಿಂತನ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ಯುವಕರು ಕೇವಲ ಪದವಿಗೊಸ್ಕರ ಓದದೇ ಅವರಲ್ಲಿ ಸಂಸ್ಕಾರ ಮತ್ತು ಕೌಶಲ ಬೆಳೆಸಿಕೊಳ್ಳಬೇಕು. ಇದರಿಂದ ಸದೃಢ ಸಮಾಜ, ರಾಷ್ಟ್ರ ಕಟ್ಟಲು ಸಾಧ್ಯ ಎಂದರು.
ಶಾಸಕ ಶರಣು ಸಲಗರ ಮಾತನಾಡಿ, ಶರಣರು ಪ್ರಾಣ ಬಲಿದಾನ ಮಾಡಿ ನೀಡಿರುವ ತತ್ವಗಳು ವಿಶ್ವ ಮಾನವ ತತ್ವಗಳಾಗಿವೆ. ಅವುಗಳನ್ನು ವಿಶ್ವಕ್ಕೆ ಮುಟ್ಟಿಸುವ ಕಾರ್ಯ ಅಗತ್ಯವಾಗಿದೆ. ಶರಣರ ಕಾರ್ಯಗಳಿಗೆ ಸದಾ ಸಹಕಾರ ನೀಡುತ್ತೇನೆ. ಬಸವಕಲ್ಯಾಣದ ಸರ್ವಾಂಗಿಣ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ ಎಂದರು.
ಹರಳಯ್ಯ ಗವಿಯ ಡಾ| ಗಂಗಾಂಬಿಕಾ ಅಕ್ಕ ಮಾತನಾಡಿ, ಶರಣರು ಕಟ್ಟಿದ ಅನುಭವ ಮಂಟಪದಲ್ಲಿ ಎಲ್ಲಾ ಜಾತಿ ವರ್ಗ ಪ್ರತಿನಿಧಿಸುವ ಸಾವಿರಾರು ಶರಣರು ಸೇರಿ ಜಗತ್ತಿನ ಜನರ ಉನ್ನತಿಗಾಗಿ ಚಿಂತನ ಮಂಥನ ನಡೆಸಿದ್ದರು. ಜಗತ್ತಿನ ಬೇರೆ ಬೇರೆ ಕ್ರಾಂತಿಗಳಲ್ಲಿ ಅನುಯಾಯಿಗಳು ಬಲಿಯಾದರೆ ಇಲ್ಲಿ ಸಮಾನತೆ ಸಾರಿದ ಸಾವಿರಾರು ಶರಣರು ಹುತಾತ್ಮರಾದರು. ಧರ್ಮಕ್ಕೆ ತತ್ವಕ್ಕೆ ಜಯವಾಯಿತು. ಶರಣರು ಧರ್ಮ ಮತ್ತು ತಮ್ಮ ತತ್ವಕ್ಕಾಗಿ ಪ್ರಾಣ ನೀಡಿದ್ದಾರೆ ಎಂದರು.
ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ ಮಾತನಾಡಿದರು. ಬಿಡಿಪಿಸಿ ಉಪಾಧ್ಯಕ್ಷ ಅಶೋಕ ನಾಗರಾಳೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸುಭಾಷ ಹೊಳಕುಂದೆ, ಜಗನ್ನಾಥ ಖೂಬಾ, ಸಾರಿಗೆ ಅಧಿಕಾರಿ ಸಂಜೀವಕುಮಾರ ವಾಡೇಕರ್, ಉದ್ಯಮಿ ವೀರಣ್ಣಾ ಹಲಶೆಟ್ಟೆ, ಆನಂದ ದೇವಪ್ಪ, ಅರ್ಜುನ ಕನಕ, ಮನೋಹರ ಮೈಸೆ ಇದ್ದರು. ಬಸವರಾಜ ಬಾಲಿಕಿಲೆ ಸ್ವಾಗತಿಸಿದರು. ಡಾ| ಸಂಗೀತಾ ಮಂಠಾಳೆ ನಿರೂಪಿಸಿದರು.