Advertisement

ಶರಣರು ಮಾನವ ಕುಲದ ಮಾರ್ಗದರ್ಶಕರು : ಕಟ್ಟೆ

09:30 PM Mar 22, 2021 | Team Udayavani |

ಬೀದರ: ಬಸವಾದಿ ಶಿವಶರಣರ ಜೀವನ ಸಿದ್ಧಾಂತವನ್ನು, ವಚನಗಳಲ್ಲಿ ವ್ಯಕ್ತವಾದ ಸಾರ್ವತ್ರಿಕ ಜೀವನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದ ಶುದ್ಧೀಕರಣವಾಗುತ್ತದೆ. ಎಲ್ಲ ಕಡೆಗಳಲ್ಲಿ ಶಾಂತಿ ಸಮೃದ್ಧಿ ನೆಲೆಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಪ್ರೊ| ಶಿವಕುಮಾರ ಕಟ್ಟೆ ಅಭಿಪ್ರಾಯಪಟ್ಟರು. ನಗರದ ಜನಸೇವಾ ಪ್ರೌಢಶಾಲೆ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಸಹಯೋಗದೊಂದಿಗೆ ವಿಕಾಸ ಅಕಾಡೆಮಿ ಹಾಗೂ ವಚನ ಚೇತನ ಟ್ರಸ್ಟ್‌ ಆಶ್ರಯದಲ್ಲಿ ಏರ್ಪಡಿಸಿದ್ದ “ಶರಣರ ವಚನ ಸಾಹಿತ್ಯ ವಿಚಾರ ಸಂಕಿರಣ’ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ವಚನಗಳನ್ನು ಓದುವುದರ ಜೊತೆಗೆ ಅನುಷ್ಠಾನಕ್ಕೆ ತರಬೇಕು ಎಂದರು. ಕಲಬುರಗಿಯ ಪ್ರಾಧ್ಯಾಪಕ ಡಾ| ಕಲ್ಯಾಣರಾವ್‌ ಪಾಟೀಲ ಮಾತನಾಡಿ, ನಾವು ಸಮಾಜ ಮೆಚ್ಚುವಂತೆ ಜೀವಿಸಬೇಕು. ನಮ್ಮ ಜೀವನ ವಿಧಾನವು ನಾಲ್ಕು ಜನರಿಗೆ ಮಾದರಿಯಾಗಿರಬೇಕು. ಇಂದು ಎಲ್ಲಿ ನೋಡಿದಲ್ಲಿ ಹಿಂಸೆ, ಕ್ರೌರ್ಯ, ದೌರ್ಜನ್ಯ, ದಬ್ಟಾಳಿಕೆಗಳ ಅಟ್ಟಹಾಸ ವ್ಯಾಪಕವಾಗುತ್ತ ಸಾಗುತ್ತಿದೆ. ಇದೇ ರೀತಿ ಮುಂದುವರೆದರೆ ಇಡೀ ಮನುಕುಲವೇ ನಾಶವಾಗುತ್ತದೆ. ಇದನ್ನು ತಪ್ಪಿಸಬೇಕಾದರೆ ಶರಣರು ತಿಳಿಸಿದ ತತ್ವ, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಾದದ್ದು ಅಗತ್ಯವಾಗಿದೆ ಎಂದು ತಿಳಿಸಿದರು.

ಕೇಂದ್ರೀಯ ವಿವಿ ನಿರ್ದೇಶಕ ಡಾ| ಬಿ.ಬಿ. ಪೂಜಾರಿ ಮಾತನಾಡಿ, ಕಾಯಕದ ಪರಿಕಲ್ಪನೆಯನ್ನು ವಚನಕಾರರು ಜಗತ್ತಿಗೆ ಕೊಟ್ಟಿರುವ ಅಮೂಲ್ಯವಾದ ಸಿದ್ಧಾಂತವಾಗಿದೆ. ತಾನು ಮಾಡುವ ಕಾಯಕದಲ್ಲಿ ತನು ಮನ ಪ್ರಾಣವನ್ನು ಸವೆಸಬೇಕು. ಕಾಯಕದಲ್ಲಿ ಎಳ್ಳಷ್ಟು ಆಲಸ್ಯವಿರಬಾರದು ಎಂದರು. ರಾಜ ಆಚಾರ್ಯ, ಜಯರಾಮ ಮಣಿಯಾಡಿ, ಸೌಭಾಗ್ಯವತಿ ಆರ್‌. ಜೆ, ಡಾ| ಬಸವರಾಜ ಬಲ್ಲೂರ್‌, ರಮೇಶ ಬಿರಾದಾರ, ಡಾ| ಶ್ರೀಕಾಂತ ಪಾಟೀಲ, ಪ್ರೊ| ಅಶೋಕ ಕೋರೆ, ಅಪ್ಪಾರಾವ್‌ ಬಿರಾದಾರ, ಬಸವರಾಜ ಮುಗಟಾಪೂರೆ, ಸುನೀತಾ ದಾಡಗೆ, ಶಾಂತಾ ಎಚ್‌., ಗೀತಾ ನಾರಾ, ವಾಮನ ಮಾನೆ, ಇಂದುಬಾಯಿ ಬಿರಾದಾರ, ಲಕ್ಷ್ಮಣರಾವ್‌ ಎರನ್ನಳ್ಳಿ, ರಾಹುಲ ಮೇತ್ರಸ್ಕರ, ನೀಲಮ್ಮ ಚಾಮರೆಡ್ಡಿ, ರಾಜಶ್ರೀ ಮೊದಲಾದವರು ಇದ್ದರು. ಸಮಾರೋಪ: ನಿವೃತ್ತ ಪ್ರಾಧ್ಯಾಪಕ ಪ್ರೊ| ಸಿದ್ರಾಮಪ್ಪ ಮಾಸಿಮಾಡೆ ಸಮಾರೋಪ ಭಾಷಣ ಮಾಡಿ, ವಚನಕಾರರ ವಿಚಾರ ಸರಣಿಯನ್ನು ಸಮಕಾಲೀನ ಸಾಂಸ್ಕೃತಿಕ, ಸಂದರ್ಭಗಳಿಗೆ ಅನ್ವಯಿಸಿಕೊಂಡರೆ ಕಲುಷಿತಗೊಂಡಿರುವ ಪರಿಸರವನ್ನು ಹಸನು ಮಾಡಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.

ಸಂಘದ ನಿರ್ದೇಶಕ ರೇವಣಸಿದ್ಧಪ್ಪ ಜಲಾದೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಡೆ ನುಡಿಗಳನ್ನು ಒಂದಾಗಿಸಿಕೊಂಡು ಬಾಳಿ ಬದುಕಿದ ಶರಣರು ನಮಗೆಲ್ಲ ಮಾರ್ಗದರ್ಶಕರು ಎಂದು ಹೇಳಿದರು. ವಚನ ಕಂಠಪಾಠ, ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡಾ| ರಘುಶಂಖ ಭಾತಂಬ್ರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರೂಪಾ ಚಿಟ್ಟಾ ನಿರೂಪಿಸಿದರು. ಶಿವಾನಂದ ಮಲ್ಲ ವಂದಿಸಿದರು

Advertisement

Udayavani is now on Telegram. Click here to join our channel and stay updated with the latest news.

Next