ಹುಬ್ಬಳ್ಳಿ: ಶರಣರ ಚಿಂತನೆಗಳು ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಹಾಯಕವಾಗಿವೆ ಎಂದು ಪ್ರಾಚಾರ್ಯ ಎಚ್.ಬಿ. ಪಂಚಾಕ್ಷರಯ್ಯ ಹೇಳಿದರು. ಇಲ್ಲಿನ ಮೂರುಸಾವಿರ ಮಠದ ಎಸ್ ಜೆಎಂವಿಎಸ್‌ನ ಕಾಲೇಜ್‌ನಲ್ಲಿ ಸೋಮವಾರ ಹುಬ್ಬಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಂಗಯ್ಯ ಮಾಸ್ತಮರಡಿ, ಶಿವಲಿಂಗ ಪ್ರಭು ದೇಸಾಯಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಮ್ಮ, ಅನ್ನ, ಅಕ್ಷರ, ಅರಿವು, ಅರಿವೆಗಳಿಂದ ಬದುಕಲು ಪ್ರಕೃತಿ ನಮಗೆ ಎಲ್ಲವನ್ನು ಕೊಟ್ಟಿದೆ. ಈ ಪಂಚತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಅರಿವು-ಅನ್ನಕ್ಕೆ ನಿಕಟವಾದ ಸಂಬಂಧವಿದೆ. ಕಾಯಕ ದಾಸೋಹದಿಂದ ಹೃದಯ ಶ್ರೀಮಂತಿಕೆ ಹೆಚ್ಚುತ್ತದೆ. ಅದೃಷ್ಟಕ್ಕಿಂತ ಶ್ರಮ ಪ್ರಯತ್ನ ನಂಬಿ ಜ್ಞಾನ ಪಡೆಯುತ್ತ ವಿಕಾಸಗೊಳ್ಳಬೇಕು.
ಗುರು, ಮಾತೃ, ಆಚಾರ, ಅಕ್ಷರ ಮತ್ತು ರಾಷ್ಟ್ರಕ್ಕೆ ದ್ರೋಹ ಬಗೆಯುವಾತ ರಾಕ್ಷಸ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎ.ಎಲ್. ಪೊಲೀಸ್ ಪಾಟೀಲ ಮಾತನಾಡಿ, ಮಹಾನ್ ವ್ಯಕ್ತಿಗಳ ಸಾಧನೆಯನ್ನರಿತುಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.
ದತ್ತಿ ದಾನಿಗಳಾದ ಡಾ| ಸರೋಜಿನಿ ಚವಲಾರರು ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಪ್ರೊತ್ಸಾಹಿದ್ದನ್ನು ಪ್ರಶಂಸಿಸಿದರು. ಎ.ಎಸ್. ಹೊನ್ನಳ್ಳಿ ಡಾ| ರಮೇಶ ಅಂಗಡಿ, ಪ್ರೊ| ಎಂ.ಬಿ. ಆಡೂರು, ಪ್ರೊ| ಎಂ.ಬಿ. ಅಂಗಡಿ, ಪ್ರೊ| ಜಯಾ ಅಂಗಡಿ, ಪ್ರೊ| ಸುನಿತಾ ರಟ್ಟಿಹಳ್ಳಿ, ಆರ್.ಬಿ. ಪೊಲೀಸಗೌಡರ ಮೊದಲಾದವರಿದ್ದರು.
ಅನಿತಾ ಶೆಟ್ಟರ, ರಕ್ಷಿತಾ ಜೋಶಿ ವಚನ ಗಾಯನ ಪ್ರಸ್ತುತ ಪಡಿಸಿದರು. ಡಾ| ಲಿಂಗರಾಜ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ| ಕೆ.ಎಸ್. ಕೌಜಲಗಿ ನಿರೂಪಿಸಿದರು. ಪ್ರೊ| ಶಂಕರಗೌಡ ಸಾತಮಾರ ವಂದಿಸಿದರು.