ಚಿಂಚೋಳಿ: ರಾಷ್ಟ್ರೀಯ ಹೆದ್ದಾರಿ 167ರ ಮಾರ್ಗಮಧ್ಯೆ ಬರುವ ಐನೋಳಿ-ದೇಗಲಮಡಿ ಗ್ರಾಮಗಳ ಹತ್ತಿರ ಹರಿಯುವ ಸರನಾಲೆಗೆ ನಿರ್ಮಿಸುತ್ತಿರುವ ದೊಡ್ಡ ಸೇತುವೆ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ.
ಐನೋಳಿ-ಮನ್ನಾಎಕ್ಕೆಳ್ಳಿ-ಬೀದರ ನಗರಕ್ಕೆ ಹೋಗಲು 1979-80ರಲ್ಲಿ ನಿರ್ಮಿಸಿದ ಸೇತುವೆ ಸಂಪೂರ್ಣ ಶಿಥಿಲವಾಗಿದ್ದರಿಂದ ವಾಹನಗಳ ಓಡಾಟಕ್ಕೆ ಅಪಾಯ ಇರುವುದನ್ನು ಮನಗಂಡು ಹಳೆ ಸೇತುವೆಯನ್ನು ಸಂಪೂರ್ಣ ನೆಲಸಮ ಮಾಡಿ ಹೊಸ ಸೇತುವೆ ನಿರ್ಮಿಸಬೇಕೆಂದು ಐನೋಳಿ, ದೇಗಲಮಡಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಹೋರಾಟ ನಡೆಸಿದ್ದರು.
ಆದರೆ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ಹಳೆ ಸೇತುವೆ ನೆಲಸಮಗೊಳಿಸದೇ ಅದನ್ನೇ ಆಧುನೀಕರಣ ಮಾಡುವ ಕಾರ್ಯಕ್ಕೆ ಮುಂದಾಗಿತ್ತು. ಇದಕ್ಕೆ ಈ ಭಾಗದ ಜನರು ವಿರೋಧ ವ್ಯಕ್ತಪಡಿಸಿದ್ದರು. ಹಳೆ ಸೇತುವೆ ಕೆಡವಿ ಹೊಸ ಸೇತುವೆ ನಿರ್ಮಿಸ ಬೇಕು ಎನ್ನುವ ಜನರ ಬೇಡಿಕೆಗೆ ಆಗಿನ ಶಾಸಕ ಡಾ| ಉಮೇಶ ಜಾಧವ (ಈಗಿನ ಕಲಬುರಗಿ ಸಂಸದ) ಸ್ಪಂದಿಸಿ, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಅಧಿ ಕಾರಿಗಳೊಂದಿಗೆ ಚರ್ಚಿಸಿ ನೂತನ ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ 5 ಕೋಟಿ ರೂ. ಮಂಜೂರಿ ಮಾಡಿಸಿದ್ದರು. ಹೀಗಾಗಿ ಹೊಸ ಸೇತುವೆ ಕಾಮಗಾರಿ ಆರಂಭವಾಗಿತ್ತು. ಈ ಕಾಮಗಾರಿ ಈಗ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.
ತಾಲೂಕಿನ ಚಂದ್ರಂಪಳ್ಳಿ ಜಲಾಶಯ ಪ್ರತಿವರ್ಷ ಮಳೆಗಾಲದಲ್ಲಿ ಭರ್ತಿಯಾಗಿ ಹೆಚ್ಚುವರಿ ನೀರು ಸರನಾಲಾ ನದಿಗೆ ಹರಿದು ಬಿಡಲಾಗುತ್ತದೆ. ಆದ್ದರಿಂದ ಸೇತುವೆ ಮೇಲೆ ವಾಹನಗಳು ಸಂಚರಿಸಲು ತೊಂದರೆ ಆಗುತ್ತಿತ್ತು. ಕಳೆದ ವರ್ಷ ಅಕ್ಟೋಬರ್, ಸೆಪ್ಟೆಂಬರ್ ತಿಂಗಳಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಸಿಡಿ (ಕೆಳಮಟ್ಟದ ಸೇತುವೆ) ನಿರಂತರ ಸುರಿದ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿ ಮೂರು ತಿಂಗಳ ಕಾಲ ರಸ್ತೆ ಸಂಪರ್ಕ ಕಡಿತವಾಗಿತ್ತು.
ಕೇಂದ್ರ ಸಚಿವ ಭಗವಂತ ಖೂಬಾ, ಕಲಬುರಗಿ ಸಂಸದ ಡಾ|ಉಮೇಶ ಜಾಧವ, ಶಾಸಕ ಡಾ| ಅವಿನಾಶ ಜಾಧವ, ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಅ ಧಿಕಾರಿಗಳ ಸತತ ಪ್ರಯತ್ನದಿಂದ ಸೇತುವೆ ನಿರ್ಮಾಣ ಕಾಮಗಾರಿ ಒಂದು ತಿಂಗಳಲ್ಲಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಬೀದರ-ಮನ್ನಾಎಕ್ಕೆಳ್ಳಿ, ಚಾಂಗಲೇರಾ- ದೇಗಲಮಡಿ, ಚಿಂಚೋಳಿ-ಮಿರಿಯಾಣ, ತಾಂಡೂರ- ಮೆಹಬೂಬ ನಗರ ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಮುಂಬೈ, ಪುಣೆ, ಹೈದ್ರಾಬಾದ, ಸೊಲ್ಲಾಪುರ, ಉಸ್ಮಾನಬಾದ, ಸಂಗಾರೆಡ್ಡಿ, ಲಾತೂರ ಪ್ರದೇಶಗಳಿಗೆ ವ್ಯಾಪಾರಿಗಳು ಮತ್ತು ಪ್ರಯಾಣಿಕರಿಗೆ ಸಂಚರಿಸಲು ಸೇತುವೆಯಿಂದ ಅನುಕೂಲವಾಗುತ್ತದೆ.
ಡಾ| ಅವಿನಾಶ ಜಾಧವ, ಶಾಸಕ
ಹೊಸ ಸೇತುವೆ ನಿರ್ಮಿಸುವಂತೆ ಅನೇಕ ಸಲ ಹೋರಾಟ ನಡೆಸಿದ ಫಲವಾಗಿ ನೂತನ ಸೇತುವೆ ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮಳೆಗಾಲದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ.
ದೀಪಕನಾಗ ಪುಣ್ಯಶೆಟ್ಟಿ,
ಜಿಪಂ ಮಾಜಿ ಅಧ್ಯಕ್ಷ
ಮಳೆಗಾಲದಲ್ಲಿ ತುಂಬಿ ಹರಿಯುವ ನದಿ ದಾಟಲು ಆಗುತ್ತಿಲ್ಲ. ಶಾಸಕರು, ಸಂಸದರು ಮುತುವರ್ಜಿ ವಹಿಸಿ ಸೇತುವೆ ನಿರ್ಮಾಣ ಮಾಡಿಸಿದ್ದರಿಂದ ಜನರಿಗೆ ಅನುಕೂಲವಾಗಲಿದೆ.
ಅವಿನಾಶ ದೇಗಲಮಡಿ, ವಿದ್ಯಾರ್ಥಿ
*ಶಾಮರಾವ ಚಿಂಚೋಳಿ