Advertisement

ಸಪ್ತಪದಿ ಕಾರ್ಯಕ್ರಮ ಶೀಘ್ರ ಆರಂಭ

07:17 PM Oct 31, 2020 | Suhan S |

ನಾಯಕನಹಟ್ಟಿ: ಕೋವಿಡ್ ಕಾರಣ ದಿಂದ ಸ್ಥಗಿತಗೊಂಡಿದ್ದ ಸರಕಾರದ ಮಹಾತ್ವಾಕಾಂಕ್ಷಿ ಕಾರ್ಯಕ್ರಮವಾದ “ಸಪ್ತಪದಿ’ ಕಾರ್ಯಕ್ರಮವನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಕೆ.ಎ. ದಯಾನಂದ ತಿಳಿಸಿದರು.

Advertisement

ಇಲ್ಲಿನ ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ಸಪ್ತಪದಿ’ ಕಾರ್ಯಕ್ರಮಕ್ಕೆ ಈ ಹಿಂದೆ ಪ್ರಕಟಿಸಿದ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿ ಹೊಸ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಜನರ ಸಂಖ್ಯೆಯನ್ನು ನೂರಕ್ಕೆ ಮಿತಿಗೊಳಿಸಲಾಗಿದ್ದು, ದಂಪತಿಗಳಿಗೆ ನೀಡುವ ಉಡುಗೊರೆಗಳಲ್ಲಿ ಬದಲಾವಣೆಗಳಿಲ್ಲ. ಪ್ರತಿ ಜೋಡಿಗೆ ಎಂಟು ಗ್ರಾಂ ಚಿನ್ನ ನೀಡಲಾಗುವುದು. ಹಟ್ಟಿ ಗೋಲ್ಡ್‌ ಮೈನ್‌ ಕಂಪನಿ, ಕಾಯಿನ್‌ ರೂಪದಲ್ಲಿ ನೀಡುವುದಾಗಿ ತಿಳಿಸಿದೆ. ಆದರೆ ಕೆಲವರು ಆಭರಣ ರೂಪದಲ್ಲಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಅದರ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ ಎಂದರು.

ಸ್ಥಳೀಯ ದೇವಾಲಯಗಳು ಟೆಂಡರ್‌ ಕರೆದು ಆಭರಣ ನೀಡಲು ಯಾವುದೇ ತೊಂದರೆಗಳಿಲ್ಲ. ಜೋಡಿಗಳ ಸಂಖ್ಯೆಯನ್ನು ಗುರುತಿಸಿ ಸ್ಥಳೀಯ ದೇವಾಲಯಗಳು ಶೀಘ್ರದಲ್ಲಿ ಕಾರ್ಯಕ್ರಮವನ್ನು ಜಾರಿಗೊಳಿಸಲಿವೆ. ಈಗಾಗಲೇ ಸಪ್ತಪದಿ ಕಾರ್ಯಕ್ರಮದ ಮಾರ್ಗಸೂಚಿಗಳನ್ನು ಅಂತಿಮಗೊಳಿಸಲಾಗಿದೆ. ಅಗತ್ಯವಿದ್ದರೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.

ತಿಪ್ಪೇರುದ್ರಸ್ವಾಮಿ ದೇವಾಲಯದ ದಾಸೋಹ ಭವನ ಸಮಸ್ಯೆ ಗಮನಕ್ಕೆ ಬಂದಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಪರಿಶೀಲಿಸಲಾಗಿದೆ. ಭವನಕ್ಕೆ ಭೂಮಿ ಖರೀದಿಸುವಾಗ ಸಮಸ್ಯೆಗಳಾಗಿವೆ. ಪ್ಲ್ಯಾನ್‌ ರೀತಿಯಲ್ಲಿ ಪಾರ್ಕ್‌ಗೆ ಜಾಗ ನೀಡಬೇಕು. ನಗರಾಭಿವೃದ್ಧಿ ಇಲಾಖೆಯಿಂದ ತಿದ್ದುಪಡಿ ಮಾಡಿದ ನಂತರ ಕ್ರಮ ಶೀಘ್ರವಾಗಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದೇವಾಲಯದ ಇಒ ಎಸ್‌.ಪಿ.ಬಿ ಮಹೇಶ್‌, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಎಂ.ವೈ.ಟಿ. ಸ್ವಾಮಿ, ಜಿ.ಪಿ. ರವಿಶಂಕರ್‌, ಪಪಂ ಅಧ್ಯಕ್ಷ ಎನ್‌. ಮಹಾಂತಣ್ಣ, ಸಿಬ್ಬಂದಿ ಸತೀಶ್‌ ಇದ್ದರು.

Advertisement

ದೇಗುಲಗಳಲ್ಲಿ ಪೂಜಾ ವಿಧಿ ಶುರು : ರಾಜ್ಯದಲ್ಲಿನ ಎಲ್ಲ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಲ್ಲಿ ಪೂಜಾ ವಿ ಧಿಗಳನ್ನು ಆರಂಭಿಸಲಾಗಿದೆ. ಆದರೆ ದಾಸೋಹ ಆರಂಭಿಸಿಲ್ಲ ಎಂದ ದಯಾನಂದ, ಕೆಲವು ದೇವಾಲಯಗಳಲ್ಲಿ ಆದಾಯದ ಕೊರತೆ ಇದ್ದು, ನಾಯಕನಹಟ್ಟಿ ದೇವಾಲಯದಲ್ಲಿ ಆರಂಭಕ್ಕೆ ಸಮಸ್ಯೆಗಳಿಲ್ಲ. ಆದರೆ ದಾಸೋಹ ಪುನಾರಂಭಕ್ಕೆ ಜಿಲ್ಲಾಡಳಿತದ ಅನುಮತಿ ಅಗತ್ಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಕೆ.ಎ. ದಯಾನಂದ ತಿಳಿಸಿದರು. ಪೂಜಾ ಕಾರ್ಯಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬಹುದು. ಆದರೆ ದಾಸೋಹದಲ್ಲಿ ಕಾಪಾಡುವುದು ಕಷ್ಟವಾಗುತ್ತದೆ. ಕೊರೊನಾ ತೀವ್ರತೆ, ಹಣಕಾಸು ಸ್ಥಿತಿ ಹಾಗೂ ಸರಕಾರ ಎಸ್‌ಒಪಿ ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಸರಕಾರದ ನಿಯಮಗಳಂತೆ ರಾಜ್ಯಾದ್ಯಂತ ಏಕರೂಪದಲ್ಲಿ ದಾಸೋಹ ಆರಂಭಿಸಲಾಗುವುದು ಎಂದರು.

ವ್ಯವಸ್ಥಾಪನ ಸಮಿತಿ ರಚನೆಗೆ ಆದೇಶ : ಕೊಲ್ಲೂರು, ಕುಕ್ಕೆ ಸೇರಿದಂತೆ ರಾಜ್ಯದಲ್ಲಿ ಕೆಲವು “ಎ’ ಗ್ರೇಡ್‌ ದೇವಾಲಯಗಳ ವ್ಯವಸ್ಥಾಪನ ಸಮಿತಿಗಳನ್ನು ಅಂತಿಮಗೊಳಿಸಲಾಗಿದೆ. ನಾಲ್ಕು ದಿನಗಳ ಹಿಂದೆ ಜರುಗಿದ ರಾಜ್ಯ ಧಾರ್ಮಿಕ ಪರಿಷತ್‌ ಸಭೆಯಲ್ಲಿ ಇನ್ನುಳಿದಿರುವ ದೇವಾಲಯಗಳ ವ್ಯವಸ್ಥಾಪನ ಸಮಿತಿ ರಚನೆಗೆ ಒಪ್ಪಿಗೆ ಪಡೆಯಲಾಗಿದೆ. ನಾಯಕನಹಟ್ಟಿ ದೇವಾಲಯದ ವ್ಯವಸ್ಥಾಪನ ಸಮಿತಿ ಅವಧಿ ಮುಕ್ತಾಯಗೊಂಡಿದೆ. ಇಂತಹ ದೇವಾಲಯಗಳ ಸಮಿತಿಗಳನ್ನು ಶೀಘ್ರದಲ್ಲಿ ರಚಿಸಲು ಆದೇಶ ಹೊರಡಿಸಲಾಗುವುದು ಎಂದರು

Advertisement

Udayavani is now on Telegram. Click here to join our channel and stay updated with the latest news.

Next