Advertisement

ಮಾರ್ಚ್‌ನಿಂದ ಸಪ್ತಪದಿ ಸಾಮೂಹಿಕ ವಿವಾಹ

02:50 PM Feb 10, 2021 | Team Udayavani |

ಮೈಸೂರು: ರಾಜ್ಯ ಸರ್ಕಾರದ ವತಿಯಿಂದ ನಡೆಯುವ ಸಪ್ತಪದಿ ಸರಳಸಾಮೂಹಿಕ ವಿವಾಹ ಜಿಲ್ಲೆಯಲ್ಲಿ ಮಾರ್ಚ್‌ನಿಂದ ಮತ್ತೆ ಆರಂಭವಾಗಲಿದೆ. ಸಾಮೂಹಿಕ ವಿವಾಹ ನಡೆಸುವ ಕುರಿತು ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್‌.ಮಂಜುನಾಥಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಮುಜರಾಯಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾರ್ಚ್‌ ತಿಂಗಳಿಂದ ಸಪ್ತಪದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ನಿರ್ಧರಿಸಲಾಯಿತು.

Advertisement

ಡಾ.ಬಿ.ಎಸ್‌. ಮಂಜುನಾಥಸ್ವಾಮಿ ಮಾತನಾಡಿ, ಸಪ್ತಪದಿ ಕಾರ್ಯಕ್ರಮದ ಕುರಿತು ಪ್ರಮುಖ ದೇವಾಲಯಗಳ ಎದುರು ಮಾಹಿತಿ ಫ‌ಲಕಗಳನ್ನು ಅಳವಡಿಸಿದರೆ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಲಿದೆ. ಕಾರ್ಯಕ್ರಮ ನಿರಂತರವಾಗಿ ನಡೆಯಲಿರುವುದರಿಂದ ಸಾಮೂಹಿಕ ವಿವಾಹದ ಕುರಿತು ಹೆಚ್ಚು ಪ್ರಚಾರದ ಅಗತ್ಯವಿದೆ ಎಂದರು.

ಸುತ್ತೂರು ಕ್ಷೇತ್ರದಲ್ಲಿ ಪ್ರತಿ ವರ್ಷ ಸಾಮೂಹಿಕ ವಿವಾಹ ನಡೆಯಲಿದೆ ಎಂಬ ಮಾಹಿತಿ ಎಲ್ಲರಿಗೂ ಇರುತ್ತದೆ. ಸಪ್ತಪದಿ ಕಾರ್ಯಕ್ರಮ ಪ್ರತಿತಿಂಗಳು ನಡೆಯುವುದರಿಂದ ಈ ಬಗ್ಗೆ ದೇವಾಲಯಗಳ ಮುಂಭಾಗ ಹಾಗೂ ಡಿಸಿ, ಎಸಿ ಮತ್ತು ತಾಲೂಕು ಕಚೇರಿಗಳ ಮುಂದೆ ಫ‌ಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಸಪ್ತಪದಿ ಕಾರ್ಯಕ್ರಮದಡಿ ವಿವಾಹ ಮಾಡಿಕೊಳ್ಳುವವರು ಆಯಾ ತಾಲೂಕು ಕಚೇರಿಯಲ್ಲಿ ನೋಂದಾಯಿಸಿಕೊಳ್ಳಲು ಅವಕಾಶವಿದೆ. ವಿವಾಹದಲ್ಲಿ ಪಾಲ್ಗೊಳ್ಳುವ ಜೋಡಿಗಳು ತಮ್ಮ ಅಧಿಕೃತ ಮಾಹಿತಿ ಹಾಗೂ ದಾಖಲೆಗಳೊಂದಿಗೆ ಸಪ್ತಪದಿ ಕಾರ್ಯಕ್ರಮದಡಿ ವಿವಾಹಕ್ಕೆ ಅರ್ಜಿ ಸಲ್ಲಿಸಬಹುದು. ಸರಳ ಸಾಮೂಹಿಕ ವಿವಾಹದಲ್ಲಿ ಜೋಡಿಗಳೊಂದಿಗೆ ಆಗಮಿಸುವ ಸಂಬಂಧಿಕರು, ಹಿತೈಷಿಗಳಿಗೆ ಊಟೋಪಚಾರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಡೆಸಲು ತಿಳಿಸಿದರು.

ಸಭೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ತಹಶೀಲ್ದಾರ್‌ ಸಿ.ಜಿ.ಕೃಷ್ಣ , ಚಾಮುಂಡೇಶ್ವರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಸ್‌. ಎನ್‌.ಯತಿರಾಜ್‌ ಸಂಪತ್‌ ಕುಮಾರನ್‌, ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಎಸ್‌. ಎಂ.ವೆಂಕಟೇಶ್‌, ಜಿಲ್ಲಾ ನೋಂದಣಾಧಿಕಾರಿಗಳಾದ ವಿಜಯಲಕ್ಷ್ಮೀ ಇನಂದಾರ್‌ ಇದ್ದರು.

Advertisement

ಜಿಲ್ಲೆಯಲ್ಲಿ ಎಲ್ಲೆಲ್ಲಿ ಸಪ್ತಪದಿ ಕಾರ್ಯಕ್ರಮ? :

ಮಾರ್ಚ್‌ನಿಂದ ಜುಲೈವರೆಗೆ ಸಪ್ತಪದಿ ಸರಳ ಸಾಮೂಹಿಕ ವಿವಾಹ ನಡೆಸುವಂತೆ ಸರ್ಕಾರದಿಂದ ಸೂಚನೆ ಇದೆ. ಮಾ. 15 ರಂದು ಚಾಮುಂಡಿ ಬೆಟ್ಟ, ಏ.22 ನಂಜನ ಗೂಡು, ಮೇ 13ರಂದು ಮುಡುಕುತೊರೆ, ಜೂ. 17ರಂದು ಚಾಮುಂಡಿ ಬೆಟ್ಟ ಹಾಗೂ ಜು. 7ರಂದು ನಂಜನಗೂಡಿನಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್‌. ಮಂಜುನಾಥಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next