Advertisement

ಸಪ್ತ ಪ್ರೇಮಸ್ವರದ ಚಿತ್ರ

10:08 AM Jan 24, 2020 | Lakshmi GovindaRaj |

“ಪ್ರತಿಯೊಬ್ಬರೂ ಪ್ರೀತಿಸಿ. ಪ್ರೀತಿಸಿಲ್ಲ ಅಂದರೆ, ಪ್ರೀತಿಸಲು ಪ್ರಯತ್ನಿಸಿ. ಪ್ರೀತಿ ಮಾಡಿಲ್ಲ ಅಂದರೆ, ಜೀವನದಲ್ಲಿ ಏನನ್ನೋ ಕಳೆದುಕೊಳ್ಳುತ್ತೀರಾ. ಎಲ್ಲದ್ದಕ್ಕೂ ಕೊನೆ ಎಂಬುದಿದೆ. ಆದರೆ, ಪ್ರೀತಿಗೆ ಕೊನೆಯಿಲ್ಲ…’ ಇಷ್ಟು ವಿಷಯ ಇಟ್ಟುಕೊಂಡು ಪ್ರೀತಿ ಕಥೆ ಹೇಳಹೊರಟಿದೆ ಇಲ್ಲೊಂದು ಚಿತ್ರತಂಡ. ಸಾಮಾನ್ಯವಾಗಿ ಸಿನಿಮಾ ಅಂದಮೇಲೆ, ಪ್ರೀತಿ ಗೀತಿ ಇತ್ಯಾದಿ ಇದ್ದೇ ಇರುತ್ತೆ. ಆದರೆ, ಇಲ್ಲೊಬ್ಬ ನಿರ್ದೇಶಕ ಒಂದಲ್ಲ, ಎರಡಲ್ಲ, ಮೂರಲ್ಲ, ಬರೋಬ್ಬರಿ ಏಳು ರೀತಿಯ ಪ್ರೀತಿ ಕಥೆ ಹೇಳ್ಳೋಕೆ ಹೊರಟಿದ್ದಾರೆ.

Advertisement

ಆ ಚಿತ್ರಕ್ಕೆ “ಪ್ರೇಮಸ್ವರ’ ಎಂಬ ಹೆಸರಿಟ್ಟಿದ್ದಾರೆ. ಶೀರ್ಷಿಕೆಗೆ ತಕ್ಕಂತೆ ಇಲ್ಲಿ ಏಳು ಪ್ರೀತಿ ಕಥೆಗಳಿಗೂ ಒಂದೊಂದು ಹೆಸರಿಟ್ಟಿದ್ದಾರೆ. ಸರಿಗಮಪದನಿ ಸಪ್ತ ಸ್ವರಗಳಂತೆ ಸಂಗೀತ, ರಿಷಬ, ಗಾನವಿ, ಮಂಜರಿ, ಪಲ್ಲವಿ, ದಮನಿ ಮತ್ತು ನಿಷಾದ ಪಾತ್ರಗಳನ್ನಿಟ್ಟು ಪ್ರೀತಿ ಕಥೆ ಹೆಣೆದಿದ್ದಾರೆ. 2002 ರಿಂದ 2017ರವರೆಗಿನ ಒಬ್ಬ ಮನುಷ್ಯನ ಜೀವನದಲ್ಲಿ ನಡೆದ ಸತ್ಯ ಘಟನೆ ಚಿತ್ರದ ಜೀವಾಳವಾಗಿದ್ದು, ಆತನ ಲೈಫ‌ಲ್ಲಿ ಬಂದು ಹೋದ ಒಬ್ಬ ಹುಡುಗಿ ಇಲ್ಲಿ ನಟಿಸಿರುವುದು ವಿಶೇಷವಂತೆ.

ಸಿದ್ದರಾಮಯ್ಯ ಲಕ್ಷೀನರಸಿಂಹ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಕಲನ, ನಿರ್ಮಾಣದ ಜೊತೆಯಲ್ಲಿ ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಡಾಟ ವಿಜ್ಞಾನಿಯಾಗಿದ್ದು, ಸಿಎಸ್‌ಐ ಫಿಲ್ಮೀ ವರ್ಲ್ಡ್ ಸಂಸ್ಥೆ ಹುಟ್ಟುಹಾಕಿದ್ದಾರೆ. ಈ ಸಂಸ್ಥೆಯಡಿ ಆಡಿಯೋ, ಸ್ಟುಡಿಯೋ, ಅಡಿಷನ್‌, ಯೂನಿಟ್‌, ಪ್ರೊಡಕ್ಷನ್‌ ಹೌಸ್‌, ಕ್ಯಾಮರಾ ಸಲಕರಣೆಗಳನ್ನು ವಿತರಣೆ ಮಾಡುತ್ತಿದ್ದಾರೆ. ಹಾಗಾಗಿ, ಇದೇ ಹೆಸರಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಪ್ರೀತಿ ಪ್ರತಿಯೊಬ್ಬರ ಬದುಕಿಗೂ ಇರಬೇಕಾದ ಅಂಶ. ಪ್ರೀತಿ ಕೆಲವರ ಪಾಲಿಗೆ ಒಲಿದರೆ, ಕೆಲವರ ಪಾಲಿಗೆ ದೂರವಾಗುತ್ತೆ. ಹಾಗಾಗಿ, ಮನುಷ್ಯ ಬದುಕಿನುದ್ದಕ್ಕೂ ಪ್ರೀತಿಸಬೇಕು. ಪ್ರೀತಿ ಇಲ್ಲವೆಂದರೆ,ಪಡೆಯೋಕೆ ಶ್ರಮಿಸಬೇಕು. ಪ್ರೀತಿ ಇಲ್ಲದ ಮನುಷ್ಯ ದೊಡ್ಡದ್ದನ್ನೇ ಕಳೆದುಕೊಂಡಂತೆ. ಆ ವಿಷಯ ಚಿತ್ರದ ವಿಶೇಷತೆಗಳಲ್ಲೊಂದು. ಅದೇ ವಿಷಯ ಚಿತ್ರದುದ್ದಕ್ಕೂ ಇದೆ ಎಂಬುದು ನಿರ್ದೇಶಕರ ಮಾತು. ಇಲ್ಲಿ ಯಾರೂ ನಾಯಕ, ನಾಯಕಿ ಅಂತೇನಿಲ್ಲ.

ಚಿತ್ರದ ಕಥೆ, ಚಿತ್ರಕಥೆಯೇ ಇಲ್ಲಿ ನಾಯಕ, ನಾಯಕಿ. ನೋಡುಗರಿಗೆ ಆ ಪಾತ್ರಗಳು ನಾವೇ ಎಂಬಂತೆ ಭಾಸವಾಗುವಷ್ಟರ ಮಟ್ಟಿಗೆ ಪರಿಣಾಮಕಾರಿ ಯಾಗಿರಲಿವೆ ಎನ್ನುತ್ತಾರೆ ನಿರ್ದೇಶಕರು. ಚಿತ್ರದಲ್ಲಿ ವಿಜಯ ರಂಜಿನಿ, ನಿರೋಷ, ಅಮೃತಾ, ಲಕ್ಷೀ, ಕೃತಿಕಾ, ನೀತು ಮತ್ತು ರಂಜಿತಾ ನಾಯಕಿಯರು. ಖಳನಟನಾಗಿ ಅಪ್ಪಿ, ಇವರೊಂದಿಗೆ ಶಾಂತಮ್ಮ, ಶಿವಮೊಗ್ಗ ರಾಮಣ್ಣ, ಕೃಷ್ಣಪ್ಪ, ರಮೇಶ್‌, ಸುಬ್ರಮಣ್ಯ, ಯಶವಂತ್‌ರಾವ್‌ ಇತರರು ನಟಿಸಿದ್ದಾರೆ. ಏಳು ಹಾಡುಗಳಿಗೆ ಕಮಲೇಶ್‌.ಪಿ.ಎ ಸಂಗೀತ ನೀಡಿದ್ದಾರೆ.

Advertisement

ಹರೀಶ್‌-ಶಿವು-ಮಧು-ಮಂಜುನಾಥ್‌ ಛಾಯಾಗ್ರಹಣವಿದೆ. ದಿವಾಕರ್‌‌ ನೃತ್ಯವಿದೆ. ಶ್ರೀರಾಮ್‌ ಸಾಹಸವಿದೆ. ಶಿವಮೊಗ್ಗ, ಸಕಲೇಶಪುರ, ಮಡಕೇರಿ, ತುಮಕೂರು ಹಾಗೂ ಬೆಂಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಮಾನಸ, ವಿಜಯ್‌ಕುಮಾರ್‌, ಹರೀಶ್‌ ಸಹ ನಿರ್ಮಾ ಪಕರು. ಚಿತ್ರಕ್ಕೆ ಸೆನ್ಸಾರ್‌ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಫೆ.14ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next