Advertisement

ಹರುಷದ ಹಾದಿಗೆ ಸಪ್ತ ಸೂತ್ರಗಳು

01:26 PM Dec 30, 2017 | Team Udayavani |

ಮುಂಬರಲಿರುವ ಹೊಸ ವರ್ಷಕ್ಕೆ ಅನೇಕ ಗುರಿಗಳನ್ನು, ರೆಸಲ್ಯೂಷನ್ನುಗಳನ್ನು ಹಾಕಿಕೊಂಡಿರುತ್ತೀರಿ. ಇಲ್ಲಾ ಅದರ ಕುರಿತೇ ಯೋಚಿಸುತ್ತಿರುತ್ತೀರಿ. ಆದರೆ ಅಷ್ಟು ದೂರಕ್ಕೆ ಬೇಡದೇ ಹೋದರೂ ಹೊಸವರ್ಷದ ದಿನಕ್ಕಾದರೂ ಏನು ಪ್ಲಾನ್‌ ಮಾಡಿಕೊಂಡಿದ್ದೀರಿ? ಆ ದಿನವನ್ನು ಉಪಯುಕ್ತವಾಗಿ ಹೇಗೆ ಕಳೆಯಬೇಕೆಂದುಕೊಂಡಿದ್ದೀರಿ? ಏನೂ ಪ್ಲಾನ್‌ ಮಾಡಿಲ್ಲವೆಂದಾದರೆ ಮಂಡೆ ಬಿಸಿ ಬೇಡ, ನಿಮ್ಮ ಹೊಸ ವರ್ಷ ಸಂಭ್ರಮಾಚರಣೆ ಇಮ್ಮಡಿಸುವ 7 ದಾರಿಗಳನ್ನು ಇಲ್ಲಿ ನೀಡಿದ್ದೇವೆ.

Advertisement

ಗುಡ್‌ ಮಾರ್ನಿಂಗ್‌: ಬೆಳಗು ಶುಭಾರಂಭದ ಸಂಕೇತ. ಬೆಳಗ್ಗೆ ಚೆನ್ನಾಯಿತೆಂದರೆ ಇನ್ನುಳಿದ ದಿನವಿಡೀ ಚೆನ್ನಾಗಿಯೇ ಇರುತ್ತದೆ ಎಂದು ಹೇಳುತ್ತಾರೆ. ಅಂಥದ್ದರಲ್ಲಿ ಹೊಸ ವರ್ಷದ ಬೆಳಗನ್ನು ಒಂದೊಳ್ಳೆಯ ಸ್ಥಳದಲ್ಲಿ ಕಳಯುವುದು ಹೆಚ್ಚು ಅರ್ಥಪೂರ್ಣವಲ್ಲವೆ? ಅದಕ್ಕೇ ಹೊಸವರ್ಷದ ಬೆಳಗನ್ನು ಆಚರಿಸಿಕೊಳ್ಳಲು ಒಂದು ಸ್ಥಳವನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಹೆಸರಘಟ್ಟ ಕೆರೆ. ಬೆಂಗಳೂರಿನಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಹೆಸರಘಟ್ಟ ಪ್ರಕೃತಿಪ್ರೇಮಿಗಳು ಇಷ್ಟಪಡುವ ತಾಣ. ಸುಮಾರು 29 ಬಗೆಯ ಪಕ್ಷಿಗಳಿಗೆ ಇದು ವಾಸಸ್ಥಾನ. ಬೆಳಗ್ಗೆ ಸೂರ್ಯನ ಹೊಂಬಣ್ಣ ಕೆರೆಯ ನೀರಿನಲ್ಲಿ ಪ್ರತಿಫ‌ಲಿತಗೊಂಡು, ಸುತ್ತಲಿನ ನಿಸರ್ಗದೊಡನೆ ಬೆರೆಯುವ ‘ಸಗ್ಗವೇ ಧರೆಗಿಳಿದಂಥ’ ಕ್ಷಣವನ್ನು ಕಣ್ತುಂಬಿಕೊಳ್ಳುವುದೇ ಒಂದು ಸೊಗಸು.

ಪ್ಲಂ ಕೇಕ್‌: ಕೇಕು ಮತ್ತು ಪೇಸ್ಟ್ರಿಗಳೆಲ್ಲಾ ನೂರಾರು  ಸ್ವಾದಗಳಿರಬಹುದು, ವೈವಿಧ್ಯಗಳಿರಬಹುದು ಆದರೆ ನ್ಯೂ ಇಯರ್‌ ಮತ್ತು ಕ್ರಿಸ್‌ ಮಸ್‌ ಎಂದಾಕ್ಷಣ ಪಕ್ಕನೆ ನೆನಪಾಗೋದು ಒಂದೇ ಥರದ ಕೇಕ್‌. ಅದು ಪ್ಲಂ ಕೇಕ್‌. ಅಷ್ಟರಮಟ್ಟಿಗೆ ಪ್ಲಂ ಕೇಕ್‌ ಮತ್ತು ಹೊಸ ವರ್ಷಾಚರಣೆಯ ನಡುವೆ ಅವಿನಾಭಾವ ಸಂಬಂಧ ಬೆಳೆದುಬಿಟ್ಟಿದೆ. ಯುಗಾದಿಗೆ ಬೇವು-ಬೆಲ್ಲ ಹೇಗೆಯೋ, ಕ್ರಿಸ್‌ಮಸ್‌- ನ್ಯೂ ಇಯರ್‌ಗೆ ಪ್ಲಂ ಕೇಕ್‌ ಹಾಗೆ! ಹೀಗಾಗಿ ಹೊಸ ವರ್ಷದ ಪ್ರಯುಕ್ತ ಕೇಕುಗಳಿಗೇ ಹೆಸರುವಾಸಿಯಾದ  ಕೇಕ್‌ ಜಾಯಿಂಟ್‌ “ಬಟರ್‌ ಸೈಡ್‌ ಅಪ್‌’ನಲ್ಲಿ ಪ್ಲಂ ಕೇಕ್‌ ರುಚಿ ನೋಡಬಹುದು. 

ಹಳೇ ಬಟ್ಟೆ ಕೊಟ್ಟು ಬಿಡಿ: ನಮ್ಮ ಮನೆಗಳಲ್ಲಿ ನಾವು ಉಪಯೋಗಿಸದೇ ಬಿಟ್ಟ ಬಟ್ಟೆಗಳಿರಬಹುದು. ಸಾಮಾನ್ಯವಾಗಿ ಹೊಸ ವಸ್ತುಗಳಿಗೆ ನಾವು ಕೊಡುವ ಬೆಲೆ ಮತ್ತು ಗಮನ ಹಳತರ ಮೇಲೆ ಕೊಡುವುದಿಲ್ಲ. ಹೀಗಾಗಿಯೇ ನಮ್ಮ ಹಳೆ ಬಟ್ಟೆಗಳು ಮಾಸಿ, ಹರಿಯುವ ತನಕ ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ. ಆದರೆ ಬಟ್ಟೆಗಳು ಆ ಸ್ಥಿತಿಯನ್ನು ತಲುಪುವ ಮುನ್ನ, ಸುಸ್ಥಿತಿಯಲ್ಲೇ ಇದ್ದರೆ, ಅಂಥವನ್ನು ಅನಾಥಾಶ್ರಮಗಳ ಮಕ್ಕಳಿಗೆ ಕೊಡಬಹುದು. ಅವರು ಅದನ್ನು ತೊಟ್ಟು ಖುಷಿ ಪಡುವುದನ್ನು ಕಂಡು ನೀವೂ ಖುಷಿ ಪಡಬಹುದು.

Advertisement

ಒಂದೊಳ್ಳೆ ಸಿನಿಮಾ: ನಾವು ಕೆಲಸದ ವಿಚಾರದಲ್ಲಿ ಎಷ್ಟೇ ಬಿಝಿಯಾಗಿದ್ದರೂ ಸಂಸಾರವನ್ನು ಯಾವತ್ತಿಗೂ ನಿರ್ಲಕ್ಷಿಸಬಾರದು. ಹಬ್ಬ ಹರಿದಿನಗಳು ಮುಖ್ಯವಾಗೋದು ಇದೇ ಕಾರಣಕ್ಕೆ. ಬಿಡುವಿನ ಸಮಯದಲ್ಲಿ ಮನೆ ಮಂದಿಯೊಡನೆ ಕೂತು ಒಟ್ಟಾಗಿ ಸಿನಿಮಾ ನೋಡುವ ಖುಷಿಯೇ ಬೇರೆ. ಹೀಗಾಗಿ ಒಂದೊಳ್ಳೆ ಸಿನಿಮಾವನ್ನು ಥಿಯೇಟರಿಗೆ ಹೋಗಿ ನೋಡಬಹುದು, ಇಲ್ಲವೇ ಡಿವಿಡಿಯನ್ನು ಆನ್‌ಲೈನಿನಲ್ಲಿ ಖರೀದಿಸಿ ನೋಡಬಹುದು. ನಿಮ್ಮ ಇಂಟರ್‌ನೆಟ್‌ ವೇಗ ಚೆನ್ನಾಗಿದ್ದರೆ ಆನ್‌ಲೈನಿನಲ್ಲಿಯೇ ದುಡ್ಡು ತೆತ್ತು ಹೊಸ ಸಿನಿಮಾಗಳನ್ನು ಆ ಕೂಡಲೆ, ತಡವಿಲ್ಲದೆ  ಸ್ಟ್ರೀಮಿಂಗ್‌ ಮಾಡಿ ವೀಕ್ಷಿಸುವುದೂ ಒಳ್ಳೆಯ ಉಪಾಯ. ಅಮೇಝಾನ್‌, ಯೂಟ್ಯೂಬ್‌ ಸೇರಿದಂತೆ ಅನೇಕ ಕಡೆಗಳಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ದೈವಾನುಗ್ರಹ: ಯಾವುದೇ ಒಳ್ಳೆಯ ಕೆಲಸಕ್ಕೆ ಹೋಗಬೇಕಾದರೂ ದೇವರ ಆಶೀರ್ವಾದ ಪಡೆದರೆ ಶುಭವಾಗುತ್ತದೆ ಎಂಬ ಅಭಿಪ್ರಾಯವಿದೆ. ಅದರಂತೆ ಬರಲಿರುವ ವರ್ಷ ಫ‌ಲಪ್ರದವಾಗಲೆಂದು ದೇವಸ್ಥಾನಕ್ಕೆ ಭೇಟಿ ನೀಡಿದರೆ ಮನಸ್ಸು ಖಂಡಿತ ಉಲ್ಲಸಿತಗೊಳ್ಳುತ್ತದೆ. ಮನಸ್ಸಿಗೆ ಒಂದು ರೀತಿಯ ಶಕ್ತಿ ದೊರಕುತ್ತದೆ. ಮುಂದೆ ಎಂಥದ್ದೇ ಸವಾಲು ಎದುರಾದರೂ ಅದನ್ನು ಮೆಟ್ಟಿ ನಿಲ್ಲಲು ಮನೋಬಲ ಬರುತ್ತದೆ.

ಸಮಯವನ್ನು ಸೆರೆ ಹಿಡಿಯಿರಿ: ಹೊಸ ವರ್ಷಾಚರಣೆ, ಕ್ರಿಸ್‌ಮಸ್‌ ಮತ್ತು ಸಮೀಪದಲ್ಲೇ ಸಂಕ್ರಾಂತಿಯೂ ಬರಲಿರುವುದರಿಂದ ನಗರದ ಕೆ.ಆರ್‌ ಮಾರ್ಕೆಟ್‌ನಲ್ಲಿ ಮುಂಜಾವಿನಿಂದಲೇ ಹಬ್ಬದ ಕಳೆ ತುಂಬಿರುತ್ತದೆ. ದೂರದೂರಿನ ಮಾರಾಟಗಾರರು, ಖರೀದಿದಾರರು, ನಾಗರಿಕರು ಹೀಗೆ ಥರಹೇವಾರಿ ಜನರು ಅಲ್ಲಿ ನೆರೆದಿರುತ್ತಾರೆ. ಛಾಯಾಗ್ರಹಣದ ಆಸಕ್ತಿಯಿರುವವರಿಗೆ ಅಂದು ಹಬ್ಬ. ಬೆಳಕು ಹರಿಯುವ ಮುನ್ನವೇ ಅಲ್ಲಿಗೆ ಕ್ಯಾಮರಾದೊಂದಿಗೆ ತಲುಪಿದರೆ ಅಲ್ಲಿನ ಸಂಭ್ರಮವನ್ನು ಸೆರೆಹಿಡಿಯಬಹುದು.

ಹೊತ್ತಗೆ ಹೊತ್ತೂಯ್ಯಿರಿ: ಪುಸ್ತಕಗಳು ಮನುಷ್ಯನ ನಿಜವಾದ ಆತ್ಮಸಂಗಾತಿ. ಅವುಗಳ ಸಾಂಗತ್ಯದಲ್ಲಿದ್ದರೆ ನಮಗೆ ಹೊಳಹುಗಳು, ಜೀವನದರ್ಶನ ಸಿಗುತ್ತಾ ಹೋಗುತ್ತದೆ. ಹೀಗಾಗಿ ಗ್ರಂಥಾಲಯಗಳಿಗೆ ಭೇಟಿ ನೀಡಬಹುದು. ಅಥವಾ ಹೊಸ ವರ್ಷದಂದು ಇಂತಿಷ್ಟು ಪುಸ್ತಕಗಳನ್ನು ಓದಿ ಮುಗಿಸುತ್ತೀರೆಂದು ಗುರಿಯಿಟ್ಟುಕೊಂಡು ಇಷ್ಟವಾದ ಪುಸ್ತಕಗಳನ್ನು ಕೊಂಡೊಯ್ಯಬಹುದು. 

Advertisement

Udayavani is now on Telegram. Click here to join our channel and stay updated with the latest news.

Next