ರಿಷಭ್ ಶೆಟ್ಟಿ, “ಕಥಾ ಸಂಗಮ’ ಎಂಬ ಸಿನಿಮಾ ಮಾಡುತ್ತಾರೆಂಬ ವಿಷಯ ಓಡಾಡುತ್ತಲೇ ಇತ್ತು. ಆದರೆ ಯಾವಾಗ ಸಿನಿಮಾ ಶುರುವಾಗುತ್ತದೆ, ಅದರ ವಿಶೇಷತೆಗಳೇನು ಎಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಈಗ “ಕಥಾ ಸಂಗಮ’ ಚಿತ್ರೀಕರಣಕ್ಕೆ ಹೊರಡಲು ಅಣಿಯಾಗಿದೆ. ಮೊದಲ ಹಂತವಾಗಿ ಚಿತ್ರತಂಡ ಪೋಸ್ಟರ್ ಬಿಟ್ಟಿದ್ದು, ಅದನ್ನು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ಅರ್ಪಿಸಿದೆ. ಹೆಸರಿಗೆ ತಕ್ಕಂತೆ “ಕಥಾ ಸಂಗಮ’ ಏಳು ಕಥೆಗಳನ್ನೊಳಗೊಂಡ ಸಿನಿಮಾ.
ಈ ಏಳು ಕಥೆಗಳನ್ನು ಏಳು ನಿರ್ದೇಶಕರು ನಿರ್ದೇಶಿಸುತ್ತಿದ್ದಾರೆ. ಜೊತೆಗೆ ಏಳು ಕಥೆಗಳಿಗೆ ಏಳು ಛಾಯಾಗ್ರಹಕರು, ಏಳು ಸಂಗೀತ ನಿರ್ದೇಶಕರು ಕೆಲಸ ಮಾಡಲಿದ್ದಾರೆ. ಆ “ಏಳು’ಗಳು ಸೇರಿ ಒಂದು ಸಿನಿಮಾವಾಗಲಿದೆ. ಒಂದೊಂದು ಕಥೆಯನ್ನು ಒಬ್ಬೊಬ್ಬ ನಿರ್ದೇಶಕರು ನಿರ್ದೇಶಿಸುವುದಾದರೆ ರಿಷಭ್ ಶೆಟ್ಟಿ ಕೆಲಸ ಏನು ಎಂಬ ಪ್ರಶ್ನೆ ಬರುತ್ತದೆ. ಏಳು ಕಥೆಗಳನ್ನು ಬೇರೆ ಬೇರೆ ನಿರ್ದೇಶಕರು ನಿರ್ದೇಶಿಸಿದರೂ ಒಟ್ಟು ಸಿನಿಮಾದ ನಿರ್ದೇಶನ ರಿಷಭ್ ಅವರದ್ದಾಗಿರುತ್ತದೆ.
ಅವರನ್ನು ನೀವು ಚಿತ್ರದ ಪ್ರಧಾನ ನಿರ್ದೇಶಕರೆಂದು ಕರೆಯಲಡ್ಡಿಯಿಲ್ಲ. ಹಾಗಾದರೆ, ಏಳು ಕಥೆಗಳನ್ನು ನಿರ್ದೇಶಿಸುತ್ತಿರುವ ಆ ನಿರ್ದೇಶಕರು, ಛಾಯಾಗ್ರಾಹಕರು ಸೇರಿದಂತೆ ತಂಡದಲ್ಲಿ ಯಾರೆಲ್ಲಾ ಇರುತ್ತಾರೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಆದರೆ, ರಿಷಭ್ ಮಾತ್ರ ಈಗಲೇ ಯಾವುದನ್ನೂ ಬಿಟ್ಟುಕೊಡಲು ರೆಡಿಯಿಲ್ಲ. ಒಬ್ಬೊಬ್ಬ ನಿರ್ದೇಶಕ, ಛಾಯಾಗ್ರಾಹಕ ಹಾಗೂ ಸಂಗೀತ ನಿರ್ದೇಶಕನನ್ನು ಪರಿಚಯಿಸುವ ಉದ್ದೇಶವಿದೆ ಅವರಿಗಿದೆ.
ತಮ್ಮ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಒಂದಷ್ಟು ಮಂದಿಗೆ ಈ ಸಿನಿಮಾದಲ್ಲಿ ನಿರ್ದೇಶನ ಮಾಡುವ ಅವಕಾಶ ನೀಡಲಿದ್ದಾರಂತೆ ರಿಷಭ್. ಈಗಾಗಲೇ ಅವರೆಲ್ಲ ಕಥೆ ಸಿದ್ಧಪಡಿಸಿ, ನಿರ್ದೇಶನಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಹರಿಪ್ರಿಯಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಏಳು ಕಥೆಯಲ್ಲಿ ಅವರು ಯಾವ ಕಥೆಯೊಳಗೆ ಇರುತ್ತಾರೆಂಬುದಕ್ಕೆ ಸದ್ಯಕ್ಕೆ ಉತ್ತರವಿಲ್ಲ. ಇನ್ನು,ನಿರ್ದೇಶನದ ಜೊತೆಗೆ ರಿಷಭ್ ಶೆಟ್ಟಿ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡುತ್ತಿದ್ದಾರೆ.
ಉಳಿದಂತೆ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಮುಂದಿನ ವಾರದಿಂದ ಒಂದೊಂದೇ ಕಥೆಗಳ ಚಿತ್ರೀಕರಣ ನಡೆಯಲಿದೆ. “ಕಥಾ ಸಂಗಮ’ ಚಿತ್ರವನ್ನು ಪ್ರಕಾಶ್, ಪ್ರದೀಪ್, ರಿಷಭ್ ಶೆಟ್ಟಿ, ಸುಖೇಶಿನಿ ಶೆಟ್ಟಿ ನಿರ್ಮಾಣ ಮಾಡುತ್ತಿದ್ದಾರೆ. ಈ ನಡುವೆ ಜೂನ್ 10 ರಿಂದ ರಿಷಭ್ ಶೆಟ್ಟಿ ನಿರ್ದೇಶನದ ಮಕ್ಕಳ ಚಿತ್ರ “ದ.ಕ.ಜಿ.ಪ.ಹಿ.ಪ್ರಾಥಮಿಕ ಶಾಲೆ, ಕಾಸರಗೋಡು’ ಆರಂಭವಾಗಲಿದೆ.