ಎರಡು ವಾರಗಳ ಹಿಂದೆ ತೆರೆಕಂಡ ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ’ ರಾಜ್ಯದಲ್ಲಿ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಶಹಬ್ಬಾಸ್ ಗಿರಿ ಪಡೆದ ಮನು- ಪ್ರಿಯಾ ಪ್ರೇಮ ಕಥೆ ಇದೀಗ ತೆಲುಗು ಭಾಷೆಯಲ್ಲಿ ತೆರೆ ಕಾಣುತ್ತಿದೆ.
ರಕ್ಷಿತ್ ಶೆಟ್ಟಿ ಅವರು ನಿರ್ಮಿಸಿ, ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರವು ಇದೀಗ ‘ಸಪ್ತ ಸಾಗರಲು ಧಾಟಿ’ ಎಂಬ ಹೆಸರಿನಲ್ಲಿ ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ ಭಾಷೆಯಲ್ಲಿ ಅದ್ಭುತ ಪ್ರಶಂಸೆ ಪಡೆದ ಚಿತ್ರದ ತೆಲುಗು ಅವತರಣಿಕೆಯು ಸೆ.22ರಂದು ತೆರೆ ಕಾಣುತ್ತಿದೆ.
ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದ ಮನು ಮತ್ತು ಪ್ರಿಯಾ ಅವರ ಪ್ರೀತಿ, ಬದುಕಿನ ಆಕಾಂಕ್ಷೆಯು ತಳ್ಳುವ ಪ್ರಪಾತ, ಅದರಿಂದ ಹೊರ ಬರಬರುವ ಪಯಣದಲ್ಲಿ ಉಂಟಾಗುವ ಅನಿರೀಕ್ಷಿತ ಏರಿಳಿತಗಳನ್ನು ಚಿತ್ರದ ಮೊದಲ ಭಾಗದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಹೇಮಂತ್ ರಾವ್.
‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರಲ್ಲದೆ ಅವಿನಾಶ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಅಚ್ಯುತ್ ಕುಮಾರ್ ಮತ್ತು ಶರತ್ ಲೋಹಿತಾಶ್ವ ನಟಿಸಿದ್ದಾರೆ.
ಚಿತ್ರಕ್ಕೆ ಚರಣ್ ರಾಜ್ ಸಂಗೀತವಿದ್ದು, ಅದ್ವೈತ್ ಗುರುಮೂರ್ತಿ ಕ್ಯಾಮರಾ ಕೈಚಳಕವಿದೆ.