Advertisement

ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಗೆ ಸ್ಯಾಪ್‌ ಅನುದಾನ

03:55 AM Jun 29, 2017 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯು ಸಲ್ಲಿಸಿದ ‘ಕರಾವಳಿ ಕರ್ನಾಟಕದ ಭಾಷಿಕ ಮತ್ತು ಸಾಂಸ್ಕೃತಿಕ ಬಹುತ್ವ’ವನ್ನು ಕುರಿತ ಅಧ್ಯಯನ ಪ್ರಸ್ತಾವನೆಯನ್ನು ಪರಿಗಣಿಸಿ, ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ಯ ಸ್ಪೆಷಲ್‌ ಅಸಿಸ್ಟೆಂಟ್‌ ಪ್ರೋಗ್ರಾಂ (ಸ್ಯಾಪ್‌) ಅನುದಾನ ನೀಡಲಾಗಿದೆ. ಐದು ವರ್ಷಗಳ ಅವಧಿಯ ಈ ಯೋಜನೆಯಿಂದ ಕನ್ನಡ ವಿಭಾಗದ ಸಂಶೋಧನಾ ಚಟುವಟಿಕೆಗಳು ಚುರುಕುಗೊಳ್ಳಲಿವೆ. ಈ ಸಂಶೋಧನೆಗೆ ಯುಜಿಸಿಯು 29 ಲಕ್ಷ ರೂ. ಅನುದಾನ ಮಂಜೂರು ಮಾಡಿದೆ.

Advertisement

ತುಳು, ಕೊಂಕಣಿ, ಬ್ಯಾರಿ, ಕೊಡವ, ಕೊರಗ ಮತ್ತಿತರ ಕರಾವಳಿ ಪ್ರದೇಶದ ವಿವಿಧ ಭಾಷೆಗಳ ಪರಸ್ಪರ ಪ್ರಧಾನ ಮತ್ತು ಸ್ವೀಕರಣ, ಈ ಪ್ರದೇಶದಲ್ಲಿ ರಚನೆಗೊಂಡಿರುವ ಸಾಹಿತ್ಯದ ಮೇಲೆ ಬಹು ಭಾಷೆ, ಸಂಸ್ಕೃತಿಗಳ ಪರಸ್ಪರ ಪ್ರಭಾವವನ್ನು ಭಾಷಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ನೆಲೆಯಿಂದ ಈ ಯೋಜನೆಯಲ್ಲಿ ಅಧ್ಯಯನ ನಡೆಸಲಾಗುವುದು. ಈಗಾಗಲೇ ಕೇಂದ್ರ ಸರಕಾರದ ಸಂಸ್ಕೃತಿ ಹಾಗೂ ಪತ್ರಾಗಾರ ಇಲಾಖೆಗಳಿಂದ ಹಸ್ತ ಪ್ರತಿ ಸಂರಕ್ಷಣಾ ಯೋಜನೆಯಲ್ಲಿ ಅಪೂರ್ವ ತಾಡವೋಲೆಗಳ ಸಂಗ್ರಹ, ಸಂರಕ್ಷಣೆ ಹಾಗೂ ಪ್ರಕಟನೆಯ ಕೆಲಸವನ್ನು ನಿರ್ವಹಿಸಲಾಗಿದೆ.

ತುಳುವಿನ ಪ್ರಾಚೀನ ಮಹಾಕಾವ್ಯ ‘ಶ್ರೀ ಭಾಗವತೊ’, ‘ಕಡೆಂಗೋಡ್ಲು ಸಾಹಿತ್ಯ’ ಈ ಕೃತಿಗಳನ್ನು ಪ್ರಕಟಿಸಿದ್ದಲ್ಲದೆ ಈ ಯೋಜನೆಗಾಗಿ ವಿ.ವಿ.ಯ ಆಯೋಗ ನೀಡಿರುವ ಅನುದಾನದಲ್ಲಿ ಕಳೆದ ಶತಮಾನದ ಪೂರ್ವಾರ್ಧದಲ್ಲಿ ಪ್ರಕಟಗೊಳ್ಳುತ್ತಿದ್ದ ಸ್ವದೇಶಾಭಿಮಾನಿ, ನವಯುಗ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಆಯ್ದ ಬರಹಗಳನ್ನು ಸಂಪಾದಿಸಿ ಕೃತಿಗಳನ್ನು ಪ್ರಕಟಿಸಲಾಗಿದೆ. ಫಿನ್ಲಂಡಿನ ತುರ್ಕು ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗ, ಜರ್ಮನಿಯ ಇಂಡಾಲಜಿ ವಿಭಾಗ, ಜಪಾನಿನ ಟೋಕಿಯೋದ ವಿ.ವಿ.ಯೊಂದಿಗೆ ಸಂಶೋಧನೆ ನಡೆಸಿದ್ದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಗೆ ಕರ್ನಾಟಕ ಸರಕಾರ ನೀಡುವ ಶಾಸ್ತ್ರಿಯ ಭಾಷಾ ಸ್ಥಾನಮಾನ ಯೋಜನೆಯಡಿ 1 ಕೋ. ರೂ. ಅನುದಾನ ಪಡೆದಿತ್ತು ಎಂದು ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next