Advertisement
ಅಕ್ಷಯ ತೃತೀಯಾದ ಶುಭ ದಿನ ಆರಂಭವಾದ ಶಿಷ್ಯ ಸ್ವೀಕಾರ ಪ್ರಕ್ರಿಯೆಯ ಭಾಗವಾಗಿ ಗುರು ವಾರ ರಾತ್ರಿ ಶಾಕಲ ಮಂತ್ರದ ಹೋಮ ನಡೆಯಿತು. ಶಾಸ್ತ್ರದಂತೆ ಉಪವಾಸವಿದ್ದು ಜಾಗರಣೆ ಮಾಡಿದ ಶೈಲೇಶರು ಪ್ರಾತಃಕಾಲ ಸನ್ಯಾಸಾಶ್ರಮವನ್ನು ಸ್ವೀಕರಿಸಿದರು. ಇದಕ್ಕೆ ಪೂರ್ವಭಾವಿಯಾಗಿ ರಾತ್ರಿ ನಡೆದ ಹೋಮದ ಅಗ್ನಿಯನ್ನು ಉಳಿಸಿಕೊಂಡು ಶುಕ್ರವಾರ ಬೆಳಗ್ಗೆ ಸನ್ಯಾಸಾಶ್ರಮ ಸ್ವೀಕಾರಕ್ಕೆ ಅತ್ಯಗತ್ಯ ವಾದ ವಿರಜಾ ಹೋಮವನ್ನು ನಡೆಸ ಲಾಯಿತು. ಪುರುಷಸೂಕ್ತ ಹೋಮ ವನ್ನೂ ವೈದಿಕರು ನಡೆಸಿಕೊಟ್ಟರು. ಬಳಿಕ ಶೈಲೇಶರು ಮಧ್ವ ಸರೋವರಕ್ಕೆ ತೆರಳಿ ಸ್ನಾನಕ್ಕೆ ಮುನ್ನ ‘ಶೈಲೇಶ’ನನ್ನು ತ್ಯಜಿಸಿ ‘ಸನ್ಯಾಸಿ’ ಯಾಗುವುದರ ಸಂಕೇತವಾಗಿ ಧರಿಸಿದ ಬಟ್ಟೆ, ಜನಿವಾರಗಳನ್ನು ವಿಸರ್ಜನೆ ಮಾಡಿದರು. ಅನಂತರ ಕಾಷಾಯ ವಸ್ತ್ರ, ದಂಡಧಾರಿಯಾಗಿ ಮಧ್ವತೀರ್ಥದಲ್ಲಿ ಅವಗಾಹನಸ್ನಾನ ಮಾಡಿದರು. ಸರೋವರದ ದಂಡೆ ಯಲ್ಲಿ ಹೋಮದ ಸಂದರ್ಭ ಪೂಜಿಸಿದ ಪವಿತ್ರ ಕಲಶಜಲವನ್ನು ಅವರಿಗೆ ಅಭಿಷೇಕ ಮಾಡಲಾಯಿತು. ಹಿಡಿದ ದಂಡಕ್ಕೆ ಹೊಸ ಯಜ್ಞೋಪ ವೀತವನ್ನು ಪೋಣಿಸಲಾಯಿತು. ದಂಡ, ಕಮಂಡಲು, ಗೋಪೀಚಂದನದೊಂದಿಗೆ ಶೋಭಿಸುವ ನೂತನ ಯತಿ ಶ್ರೀಕೃಷ್ಣ ದೇವರ ದರ್ಶನ ಮಾಡಿ, ಸರ್ವಜ್ಞ ಪೀಠದಲ್ಲಿ ವಿರಾಜಮಾನರಾಗಿದ್ದ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ರಲ್ಲಿಗೆ ತೆರಳಿ ತಲೆಬಾಗಿ ತನಗೆ ಪ್ರಣವ ಮಂತ್ರೋಪದೇಶವನ್ನು ಅನುಗ್ರಹಿಸುವಂತೆ ಪ್ರಾರ್ಥಿಸಿದರು.
ಹೋಮ ಸಂದರ್ಭ ಪೂಜಿತ ಕಲಶದ ಸ್ವಲ್ಪ ಜಲವನ್ನು ನೂತನ ಯತಿಗೆ ಅಭಿಷೇಕ ಮಾಡಿದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಣ್ತೀಜ್ಞಾನ ಚಿಂತನೆಗಳನ್ನು ನಡೆಸಿ ಪ್ರಣವ ಮಂತ್ರೋಪದೇಶವನ್ನು ನೀಡಿದರು. ಶ್ರೀ ಪೇಜಾವರ ಮಠದ ಕಿರಿಯ ಯತಿ ಉಪಸ್ಥಿತರಿದ್ದು ನೂತನ ಯತಿಗೆ ಶುಭ ಕೋರಿದರು. ಬಳಿಕ ಗುರುಗಳಾದ ಪಲಿಮಾರು ಶ್ರೀಗಳು ಶ್ರೀಕೃಷ್ಣನಿಗೆ ಮಹಾಪೂಜೆ ನಡೆಸಿದರೆ ಶಿಷ್ಯ ಜಪ, ಪಾರಾಯಣಾದಿಗಳ ಬಳಿಕ ಅನಂತೇಶ್ವರ, ಚಂದ್ರಮೌಳೀಶ್ವರ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಮಾಡಿದರು. ತಿರುಮಲ ತಿರುಪತಿ ದೇವಸ್ಥಾನದಿಂದ ಅರ್ಚಕರು ತಂದ ಪ್ರಸಾದವನ್ನು ಯುವ ಯತಿಗೆ ನೀಡಲಾಯಿತು. ಧಾರ್ಮಿಕ ವಿಧಿಗಳನ್ನು ಗುಂಡಿಬೈಲು ಸುಬ್ರಹ್ಮಣ್ಯ ಭಟ್ ನಡೆಸಿಕೊಟ್ಟರು.
Related Articles
ಶನಿವಾರ ಅಷ್ಟಮಹಾಮಂತ್ರಗಳ ಉಪದೇಶವನ್ನು ನೂತನ ಯತಿಗೆ ಗುರುಗಳು ನೀಡುವರು. ವಿವಿಧ ಹೋಮಗಳು ಕೂಡ ನಡೆಯಲಿವೆ.
ಹೆಸರು ಸೂಚನೆ, ನಾಳೆ ಘೋಷಣೆ
ಸನ್ಯಾಸ ಸ್ವೀಕಾರ ಪ್ರಕ್ರಿಯೆಯ ಅಂಗವಾಗಿರುವ ನೂತನ ನಾಮಧೇಯವನ್ನು ಶುಕ್ರವಾರವೇ ಗುರು ಶ್ರೀ ವಿದ್ಯಾಧೀಶತೀರ್ಥರು ಯುವ ಯತಿಗಳಿಗೆ ತಿಳಿಸಿದ್ದಾರೆ. ರವಿವಾರ ಅವರನ್ನು ವಿಧ್ಯುಕ್ತವಾಗಿ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ಸ್ವೀಕರಿಸುವ ಸಂದರ್ಭ ಅದನ್ನು ಬಹಿರಂಗಗೊಳಿಸುವರು.
Advertisement