Advertisement

ಸ್ಯಾಂಟ್ರೋ ರೀ ಎಂಟ್ರಿ

06:00 AM Oct 15, 2018 | |

ಕ್ಯೂಟ್‌ ಫ್ಯಾಮಿಲಿಯ ಕ್ಯೂಟ್‌ ಕಾರು ಎಂದೇ ಹೆಸರಾಗಿದ್ದ ಸ್ಯಾಂಟ್ರೋ, ಇದೀಗ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬರಲಿದೆ. ಟಾಟಾ ಟಿಯೋಗ್ನೊ, ಮಾರುತಿ ಸುಜುಕಿ ಕಾರುಗಳಿಗೆ ಇದು ಪೈಪೋಟಿ ನೀಡಲಿದೆ ಎಂಬುದರಲ್ಲಿ ಯಾವುದೇ ಅನುಮಾನವೂ ಇಲ್ಲ. 

Advertisement

ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಅಗ್ರ ಪಂಕ್ತಿಯ ಕಂಪನಿಗಳಲ್ಲಿ ಒಂದಾದ ಹ್ಯುಂಡೈ ಮೋಟಾರ್, ತಾನು ತಯಾರಿಸಿದ ಕಾರುಗಳ ಪೈಕಿ ಮೊಟ್ಟ ಮೊದಲೆನೆಯ ಮಾಡೆಲ್‌ “ಸ್ಯಾಂಟ್ರೋ’ವನ್ನು ಮತ್ತೆ ಪರಿಚಯಿಸುತ್ತಿದೆ. ಕೆಲ ವರ್ಷಗಳ ಹಿಂದೆ ಕ್ಯೂಟ್‌ ಫ್ಯಾಮಿಲಿಯ ಕ್ಯೂಟ್‌ ಕಾರು ಎಂದೇ ಜನಪ್ರಿಯತೆ ಗಳಿಸಿಕೊಂಡಿದ್ದ ಸ್ಯಾಂಟ್ರೋ ಅನಾವರಣಕ್ಕೆ, ಕಂಪನಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.

ಹ್ಯಾಚ್‌ಬ್ಯಾಕ್‌ ಸೆಗೆ¾ಂಟ್‌ ಸಾಲಿಗೆ ಸೇರುವ ಸ್ಯಾಂಟ್ರೋ ಒಂದಿಷ್ಟು ಹೊಸ ವಿನ್ಯಾಸದಲ್ಲಿ ರಸ್ತೆಗಿಳಿಯುತ್ತಿದೆ. ಸದ್ಯ ಎಎಚ್‌2 ಕೋಡ್‌ ಹೆಸರಿನಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಈ ಕಾರು ಸ್ಯಾಂಟ್ರೋದ ನೂತನ ವೇರಿಯಂಟ್‌ ಆಗಿ ಪರಿಚಯಗೊಳ್ಳುತ್ತದೋ ಅಥವಾ ಬೇರೆ ಹೆಸರಿನಲ್ಲೇ ಮಾರುಕಟ್ಟೆ ಪ್ರವೇಶಿಸುತ್ತದೋ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ ಲಭ್ಯವಿರುವ ಮಾಹಿತಿ ಪ್ರಕಾರ, ಸ್ಯಾಂಟ್ರೋ ಹೆಸರಲ್ಲೇ ವಿಭಿನ್ನ ವೇರಿಯಂಟ್‌ ಪರಿಚಯಿಸಲಾಗುತ್ತಿದೆ ಎಂದು ಹೇಳಲಾಗಿದೆ.

 ಫೇಸ್‌ಲಿಫ್ಟ್ ಸ್ಯಾಂಟ್ರೋದ ಬಾಹ್ಯ ವಿನ್ಯಾಸ ಈ ಮೊದಲ ಕಾರಿಗಿಂತ ಬೇರೆ ವಿನ್ಯಾಸದಲ್ಲೇ ಕಾಣಿಸಿಕೊಳ್ಳಲಿದೆ. 1998, ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಕಂಡು, ಒಂದೂವರೆ ದಶಕಗಳ ಕಾಲ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೊಂದಿರುವ ಹಾಗೂ ಜನಮನ್ನಣೆ ಗಿಟ್ಟಿಸಿಕೊಂಡಿದ್ದ ಸ್ಯಾಂಟ್ರೋ ಈಗ ಮತ್ತೆ ದುಪ್ಪಟ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಹಾಗಾದರೆ, ನ್ಯೂ ಸ್ಯಾಂಟ್ರೋ ಹೇಗಿದೆ?ಅದರಲ್ಲಿ  ಏನೆಲ್ಲಾ ಹೊಸತಿದೆ? ಗ್ರಾಹಕ ಸ್ನೇಹಿಯಾದ ಹೊಸ ಫ್ಯೂಚರ್‌ಗಳು ಏನಾದರೂ ಇವೆಯಾ ಎಂಬ ಕುತೂಹಲದ ಪ್ರಶ್ನೆಗಳಿಗೆ ಇಲ್ಲಿ ಮಾಹಿತಿ ಇದೆ.

ಬದಲಾದ ವಿನ್ಯಾಸ
ಹೊಸ ಸ್ಯಾಂಟ್ರೋದ ಮುಂಭಾಗದ ಗ್ರಿಲ್‌ ವಿನ್ಯಾಸವನ್ನು ಬದಲಾಯಿಸಲಾಗಿದೆೆ. ಗ್ರಾಂಡ್‌ ಐ10ಗೆ ಸಾಕಷ್ಟು ಸಾಮ್ಯತೆ ಇರುವಂತೆ ತೋರಿದರೂ, ಮಾಡರ್ನ್ ಟಾಲ್‌ ಬಾಯ್‌ ಲುಕ್‌ ಗಮನಿಸಬಹುದು. ಹೆಡ್‌ಲ್ಯಾಂಪ್‌ನ ವಿನ್ಯಾಸ ಹಾಗೂ ಗುಣಮಟ್ಟದ ಎಲ್‌ಇಡಿ ಬಲ್ಬ್ಗಳನ್ನು ಬಳಸಲಾಗಿದೆ. ಜತೆಗೆ ಫಾಗ್‌ ಲೈಟ್‌ ವಿನ್ಯಾಸದಲ್ಲೂ ಒಂದಿಷ್ಟು ಬದಲಾವಣೆ ಕಾಣಬಹುದು. 14 ಇಂಚಿನ ವೀಲ್‌Ø ಹಾಗೂ ವೀಲ್‌Ø ಕವರ್‌ ಅಳವಡಿಸಿರುವುದು ಒಟ್ಟಾರೆ ಆಕರ್ಷಣೆ ಹೆಚ್ಚಿದೆ. ಹಾಗೇ ಹಿಂಭಾಗದಲ್ಲಿರುವ ಲ್ಯಾಂಪ್‌ಗ್ಳ ವಿನ್ಯಾಸದಲ್ಲೂ ನವ್ಯತೆ ಕಾಣಬಹುದು. ಕ್ಯಾಬಿನ್‌ ಸ್ಥಳಾವಕಾಶ ಹಳೆಯ ಸ್ಯಾಂಟ್ರೋಗಿಂತಲೂ ವಿಶಾಲವೆನಿಸುವಂತಿದೆ. ಲೆಗ್‌ರೂಂ, ಹೆಡ್‌ರೂಂ ಕೂಡ ಕಂಫ‌ರ್ಟ್‌ ಆಗಿದೆ. ಐದು ಮಂದಿ ಆರಾಮವಾಗಿ ಪ್ರಯಾಣಿಸುವಂತೆ ವಿನ್ಯಾಸಗೊಂಡಿದೆ. ವಿನ್ಯಾಸದಲ್ಲಿ ಹೊಸ ಸ್ಯಾಂಟ್ರೋ ಕಾರು ಟಾಟಾ ಟಿಯಾಗೋ, ಮಾರುತಿ ಸುಜುಕಿ ಸೆಲೇರಿಯೋ ಕಾರುಗಳ ಪ್ರತಿಸ್ಪರ್ಧಿ ಎನ್ನುವುದರಲ್ಲಿ ಯಾವ ಅನುಮಾನವಿಲ್ಲ.

Advertisement

ಹೊಸ ಫ್ಯೂಚರ್‌ಗಳೇನು?
– ತಂಪನೆಯ ಗಾಳಿ (ಎಸಿ) ಕಾರಿನ ಹಿಂಭಾಗದಲ್ಲಿಯೂ ಸರಿಯಾಗಿ ತಗಲುವಂತೆ ಮಾಡಲು ಎಸಿ ವೆಂಟ್‌ ಜೋಡಣೆ.
– ಬ್ಲೂಟೂತ್‌, ಮಿರರ್‌ ಲಿಂಕ್‌ ಮತ್ತು ಇನ್‌ಬಿಲ್ಟ್ ನೇವಿಗೇಷನ್‌ ಸೇರಿದಂತೆ ಇನ್ನೂ ಸಾಕಷ್ಟು ಆಪ್ಶನ್‌ಗಳನ್ನು ಹೊಂದಿರುವ 7 ಇಂಚಿನ ಟಚ್‌ಸ್ಕ್ರೀನ್‌ ಇನ್ಫೋಟೈನ್‌ಮೆಂಟ್‌ ಅಳವಡಿಕೆ.
– ಇನ್ಫೋಟೈನ್‌ಮೆಂಟ್‌ ವ್ಯವಸ್ಥೆ ಆ್ಯಪಲ್‌ ಕಾರ್‌ಪ್ಲೇ ಮತ್ತು ಆ್ಯಂಡ್ರಾಯ್ಡ ಆಟೋ ವ್ಯವಸ್ಥೆಗಳಿಗೂ ಸಪೋರ್ಟ್‌ ಮಾಡುವಂತಿವೆ.

ಎಂಜಿನ್‌ ಮತ್ತು ಗೇರ್‌ಬಾಕ್ಸ್‌
1.1ಲೀಟರ್‌ ಎಪ್ಸಿಲಾನ್‌ ಶ್ರೇಣಿಯ 1086 ಸಿಸಿ ಎಂಜಿನ್‌ ಬಳಸಿಕೊಳ್ಳಲಾಗಿದೆ. 68ಬಿಎಚ್‌ಪಿ, 99ಎನ್‌ಎಂ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 4ಸಿಲಿಂಡರ್‌, ಬಿಎಸ್‌6 ಗುಣಮಟ್ಟದ ಎಂಜಿನ್‌ ಬಳಸಿಕೊಳ್ಳುವ ಹಾದಿಯಲ್ಲಿದೆ. ಪ್ರಮುಖವಾಗಿ ಸಿಎನ್‌ಜಿ ವ್ಯವಸ್ಥೆ ಹೊಂದಿರುವ 8ಕೆಜಿ ಸಾಮರ್ಥ್ಯದ ಅನಿಲ್‌ ಟ್ಯಾಂಕ್‌ ಬಳಕೆಗೂ ಅವಕಾಶ ಕಲ್ಪಿಸಲಾಗಿದೆ. ಅನಿಲ ಇಂಧನ ಬಳಕೆಯ ವೇಳೆ 58ಬಿಎಚ್‌ಪಿ, 99ಎನ್‌ಎಂ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಈ ಎಂಜಿನ್‌ಗೆ ಇದೆ ಎಂದು ಕಂಪನಿ ಹೇಳಿಕೊಳ್ಳುತ್ತಿದೆ.

ಮೈಲೇಜ್‌ ಎಷ್ಟು?
ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಎಆರ್‌ಎಐ ನಡೆಸಿದ ಪರೀಕ್ಷಾ ವರದಿಯಂತೆ ಪ್ರತಿ ಲೀಟರ್‌ ಪೆಟ್ರೋಲ್‌ಗೆ 20.3 ಕಿಲೋ ಮೀಟರ್‌ ಮೈಲೇಜ್‌ ನೀಡಬಲ್ಲದು.

ಯಾವೆಲ್ಲ ಬಣ್ಣಗಳಲ್ಲಿ ಲಭ್ಯ?
ಒಟ್ಟು ಏಳು ಬಣ್ಣಗಳಲ್ಲಿ ಈ ಕಾರನ್ನು ತಯಾರಿಸಲು ಹ್ಯುಂಡೈ ಮುಂದಾಗಿದೆ. ಇದಲ್ಲದೇ ಬೇಡಿಕೆಯನ್ನು ಆಧರಿಸಿ ವಿಶೇಷ ಬಣ್ಣದಲ್ಲೂ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

ಬುಕಿಂಗ್‌ ಆಫ‌ರ್‌
ಆಟೋಮೊಬೈಲ್‌ ಮಾರುಕಟ್ಟೆಯಲ್ಲಿ ಓಡಾಡುತ್ತಿರುವ ಮಾಹಿತಿಯ ಪ್ರಕಾರ, ಇದೇ ತಿಂಗಳು 23ರಂದು ನ್ಯೂ ಸ್ಯಾಂಟ್ರೋ ಅನಾವರಣಗೊಳ್ಳಲಿದೆ. ಈಗಾಗಲೇ ಬುಕಿಂಗ್‌ ಆರಂಭಗೊಂಡಿದ್ದು, ಮೊದಲ 50,000 ಬುಕಿಂಗ್‌ಗೆ ಕೇವಲ 11,100 ರೂ. ಶುಲ್ಕವಷ್ಟೇ ಎಂದು ಹ್ಯುಂಡೈ ಗ್ರಾಹಕರನ್ನು ಸೆಳೆಯುವ ಆಫ‌ರ್‌ ನೀಡಿದೆ.

ಅಂದಾಜು ಬೆಲೆ (ಎಕ್ಸ್‌ ಶೋರೂಂ): 3.7 ಲಕ್ಷ ರೂ.ನಿಂದ 5.4 ಲಕ್ಷ ರೂ.

ಹೈಲೈಟ್ಸ್‌
– ಉದ್ದ 3610ಮಿ.ಮೀ./ ಅಗಲ 1645ಮಿ.ಮೀ./ಎತ್ತರ 1560ಮಿ.ಮೀ. 
– 5 ಸ್ಪೀಡ್‌ ಮ್ಯಾನ್ಯುವಲ್‌ ಮತ್ತು ಆಟೋ ಗೇರ್‌ಬಾಕ್ಸ್‌
– ಪಾರ್ಕಿಂಗ್‌ಗೆ ಅನುಕೂಲವಾಗುವಂತೆ ಹಿಂಭಾಗದಲ್ಲೂ ಕ್ಯಾಮರಾ ಅಳವಡಿಕೆ
– ಮೌಂಟೆಡ್‌ ಕಂಟ್ರೋಲ್‌ ಸ್ಟೀರಿಂಗ್‌ ಬಳಕೆ

ಗಣಪತಿ ಅಗ್ನಿಹೋತ್ರಿ 

Advertisement

Udayavani is now on Telegram. Click here to join our channel and stay updated with the latest news.

Next