Advertisement

ಕಾಂಗ್ರೆಸ್ ನಾಯಕರ ತೀವ್ರ ವಿರೋಧದ ನಡುವೆ ಸಂತೋಷ್ ಪಾಟೀಲ್ ಅಂತ್ಯಕ್ರಿಯೆ

10:40 AM Apr 14, 2022 | Team Udayavani |

ಬೆಳಗಾವಿ: ಉಡುಪಿಯ ಖಾಸಗಿ ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಗುತ್ತಿಗೆದಾರ ಸಂತೋಷ್​ ಪಾಟೀಲ್​ ಅವರ ಅಂತ್ಯಕ್ರಿಯೆ ಬೆಳಗಾವಿ ತಾಲೂಕಿನ ಬಡಸ್ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆಯಿತು.

Advertisement

ಕಾಂಗ್ರೆಸ್ ನಾಯಕರ ತೀವ್ರ ವಿರೋಧ ಹಾಗೂ ಪ್ರತಿಭಟನೆಯ ನಡುವೆಯೂ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಸೇರಿ ಸಂತೋಷ್ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಗ್ರಾಮದಲ್ಲಿ ಮೂರು ಮದುವೆ ಇದ್ದ ಕಾರಣ ಬೇಗ ಅಂತ್ಯಕ್ರಿಯೆ ಮುಗಿಸುವಂತೆ ಗ್ರಾಮಸ್ಥರು ಕೋರಿದ್ದರು. ಜೊತೆಗೆ ಮೃತ ಸಂತೋಷ್ ಸಂಬಂಧಿಕರು ಮೃತದೇಹದ ಮುಂದೆ ಪ್ರತಿಭಟನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಜಮೀನಿಗೆ ತಂದು, ಲಿಂಗಾಯತ ವಿಧಿವಿಧಾನಗಳಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಇದನ್ನೂ ಓದಿ:ಪ್ರಾಥಮಿಕ ತನಿಖೆ ಆಗುವವರೆಗೂ ಈಶ್ವರಪ್ಪ ರಾಜೀನಾಮೆ ಪಡೆಯಲ್ಲ: ಸಿಎಂ ಬೊಮ್ಮಾಯಿ 

ಈ ಸಂದರ್ಭದಲ್ಲಿ ವಿಧಿವಿಧಾನಗಳು ಮುಗಿಯುತ್ತಿದ್ದಂತೆ ಅಂತ್ಯಸಂಸ್ಕಾರಕ್ಕೆ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಶವದ ಎದುರು ಧರಣಿ ನಡೆಸಿದರು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅವರ ಆಪ್ತ ಅಡಿವೇಶ ಇಟಗಿ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತಪಡಿಸಿ ಪರಿಹಾರ ಘೋಷಣೆ ಮಾಡಬೇಕು ಹಾಗೂ ಬಾಕಿ ಬಿಲ್ ಮಂಜೂರಾತಿ ಮಾಡಿಸಬೇಕು ಎಂದು ಆಗ್ರಹಿಸಿದರು.

Advertisement

ಜಿಲ್ಲೆಯಲ್ಲೇ ಇರುವ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಇಲ್ಲವೇ ಬಿಜೆಪಿ ಮುಖಂಡರು ಸ್ಥಳಕ್ಕೆ ಬರಬೇಕು ಎಂದು ಶಾಸಕಿ ಹೆಬ್ಬಾಳ್ಕರ್ ಪಟ್ಟು ಹಿಡಿದಿದ್ದರು. ಆಗ ಗ್ರಾಮಸ್ಥರು ನ್ಯಾಯಕ್ಕಾಗಿ ಹೋರಾಡೋಣ, ಈಗ ಅಂತ್ಯಕ್ರಿಯೆ ನೆರವೇರಿಸೋಣ ಎಂದರು. ನಂತರ ಅಂತ್ಯಕ್ರಿಯೆ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next