Advertisement

ಲಾಡ್‌-ಛಬ್ಬಿ ಮುಸುಕಿನ ಗುದ್ದಾಟ?

04:01 PM Jun 25, 2021 | Team Udayavani |

ಹುಬ್ಬಳ್ಳಿ: ಕೇವಲ 12 ದಿನಗಳ ಹಿಂದೆಯಷ್ಟೇ ಕಲಘಟಗಿ ಬ್ಲಾಕ್‌ ಕಾಂಗ್ರೆಸ್‌ ನೂತನ ಅಧ್ಯಕ್ಷರ ಆಯ್ಕೆಗೆ ತಡೆಯೊಡ್ಡಲಾಗಿದೆ. ಆ ಮೂಲಕ ಕಲಘಟಗಿ ಕ್ಷೇತ್ರದಲ್ಲಿನ ಕಾಂಗ್ರೆಸ್‌ ನ ಬಣ ಜಗಳ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ಹೇಳಬಹುದಾಗಿದೆ.

Advertisement

ಕಲಘಟಗಿ ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ಸಂತೋಷ ಲಾಡ್‌ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ ಗುಂಪುಗಳ ನಡುವೆ ಮೇಲುಗೈ ಸಾಧಿಸಲು ಯತ್ನಗಳು ನಡೆಯುತ್ತಲೇ ಇರುತ್ತವೆ. ಅದರ ಮುಂದುವರೆದ ಭಾಗವಾಗಿಯೇ ನಡೆದಿದ್ದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ನೇಮಕ ಹಾಗೂ ತಡೆಯೊಡ್ಡುವಿಕೆಯ ಮತ್ತೂಂದು ಹೈಡ್ರಾಮ್‌ ನಡೆದಿದೆ.

ಅಧ್ಯಕ್ಷರಿಂದ ನೇಮಕ ಕಾರ್ಯಾಧ್ಯಕ್ಷರಿಂದ ತಡೆ: ಕಲಘಟಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಗುರುನಾಥ ಶಿವಪ್ಪ ದಾನವೇನವರ ಅವರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಜೂ.12ರಂದು ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಮಂಜುನಾಥ ಗೌಡ ಮುರಳ್ಳಿ ಅವರನ್ನು ಬದಲಾವಣೆ ಮಾಡಿ, ನೂತನ ಅಧ್ಯಕ್ಷರ ನೇಮಕ ಮಾಡಲಾಗಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಅವರು ಜೂ.24ರಂದು ಕಲಘಟಗಿ ಬ್ಲಾಕ್‌ ಕಾಂಗ್ರೆಸ್‌ ನೂತನ ಅಧ್ಯಕ್ಷರ ನೇಮಕವನ್ನು ಕಾರಣಾಂತರದಿಂದ ತಡೆ ಹಿಡಿಯಲಾಗಿದೆ ಎಂದು ಆದೇಶಿಸಿದ್ದು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಮಂಜುನಾಥಗೌಡ ಮುರಳ್ಳಿ ಅವರನ್ನೇ ಮುಂದುವರೆಸಿದ್ದಾರೆಂದು ಹೇಳಲಾಗುತ್ತಿದೆ.

ಕಲಘಟಗಿ ಕ್ಷೇತ್ರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗುವ ನಿಟ್ಟಿನಲ್ಲಿ ಮಾಜಿ ಸಚಿವ ಸಂತೋಷ ಲಾಡ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ ನಡುವೆ ಜಿದ್ದಾಜಿದ್ದಿ ಈಗಿನಿಂದಲೇ ಶುರವಾಗಿದೆ. ಕ್ಷೇತ್ರದಲ್ಲಿ ಇಬ್ಬರು ಮುಖಂಡರು ಈಗಾಗಲೇ ಪ್ರವಾಸ, ಗ್ರಾಮ ವಾಸ್ತವ್ಯ, ಮುಖಂಡರ ಭೇಟಿಯಂತಹ ಕಾರ್ಯಕ್ರಮಗಳಿಗೆ ಮುಂದಾಗಿದ್ದಾರೆ. ಇದರ ನಡುವೆ ಕಲಘಟಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ನೇಮಕ ನಡೆದಿತ್ತು.

ಸಂತೋಷ ಲಾಡ್‌ ಅವರ ಗಮನಕ್ಕೆ ಇಲ್ಲದೆಯೇ ನೇಮಕ ಕೈಗೊಳ್ಳಲಾಗಿತ್ತು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಂತೋಷ ಲಾಡ್‌ ಅವರು ಪಕ್ಷದ ರಾಜ್ಯ ವರಿಷ್ಠರ ಬಳಿ ಅಸಮಾಧಾನ ತೋಡಿಕೊಂಡಿದ್ದರು ಎನ್ನಲಾಗುತ್ತಿದೆ. ಸಹಜವಾಗಿಯೇ ಹೊಸ ನೇಮಕ ನಾಗರಾಜ ಛಬ್ಬಿ ಗುಂಪಿನ ಕಡೆವರಿಗೆ ಸಂತಸ ಮೂಡಿಸಿತ್ತು ಎನ್ನಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ತಮಗೆ ಪೂರಕವಾದ ಪ್ರಕ್ರಿಯೆಗಳು ನಡೆಯುತ್ತಿವೆ ಎಂದೇ ಭಾವಿಸಿದ್ದರು. ಆದರೆ, ಇದೀಗ ಬ್ಲಾಕ್‌ ಕಾಂಗ್ರೆಸ್‌ ನೂತನ ಅಧ್ಯಕ್ಷರ ನೇಮಕಕ್ಕೆ ತಡೆಯೊಡ್ಡುವ ಮೂಲಕ ತಮ್ಮ ಬೆಂಬಲಿಗನನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸುವ ಮೂಲಕ ಸಂತೋಷ ಲಾಡ್‌ ಮೇಲುಗೈ ಸಾಧಿಸಿದ್ದಾರೆ ಎಂದೇ ಪರಿಭಾವಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next