Advertisement

ಮುಖಂಡರೇ ಮೇಲ್ಪಂಕ್ತಿ ಆಗಲಿ

03:34 AM Jul 07, 2020 | Sriram |

ಬೆಂಗಳೂರು: ಬಹುತೇಕ ರಾಜ್ಯಗಳಿಗೆ ವ್ಯಾಪಿಸಿರುವ ಕೋವಿಡ್-19 ಸಮಸ್ಯೆ ಎದುರಿಸುವಲ್ಲಿ ಆತಂಕ, ಉದ್ವೇಗ ಬೇಡ. ಆರೋಗ್ಯ ವ್ಯವಸ್ಥೆ ಜತೆಗೆ ವ್ಯಕ್ತಿಗತ ಎಚ್ಚರಿಕೆಗಳ ಮೂಲಕ ಇನ್ನೂ ನಾಲ್ಕು ತಿಂಗಳು ಅದನ್ನು ಎದುರಿಸಬೇಕಾಗಿದೆ. ಪಕ್ಷದ ನಾಯಕರು, ಮುಖಂಡರು ನಿಯಮಗಳನ್ನು ಪಾಲಿಸುವ ಮೂಲಕ ಮೇಲ್ಪಂಕ್ತಿಯಾಗಬೇಕು.

Advertisement

ಸಮಸ್ಯೆಯಲ್ಲಿ ಇರುವವರಿಗೆ ಕಾರ್ಯಕರ್ತರು ನೆರವಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಕರೆ ನೀಡಿದರು.

“ಮೋದಿ 2.0ರ ಒಂದು ವರ್ಷ’ ಅಭಿಯಾನ ಸಮಾರೋಪದ ಹಿನ್ನೆಲೆಯಲ್ಲಿ ದಿಲ್ಲಿಯಿಂದ ವೀಡಿಯೋ ಸಂವಾದದ ಮೂಲಕ ಸಮಾರೋಪ ಭಾಷಣ ಮಾಡಿದ ಅವರು, ನಾಲ್ಕು ತಿಂಗಳುಗಳಿಂದ ಪಕ್ಷದ ಕಾರ್ಯಕರ್ತರು ಸಂಕಷ್ಟದಲ್ಲಿರುವ ಜನರಿಗೆ ನೆರವಾಗಿದ್ದು, ಮನಸ್ಸಿಗೆ ಧನ್ಯತೆ, ಆನಂದ ಕೊಡುವ ಕ್ಷಣಗಳಲ್ಲಿ ನಾವಿದ್ದೇವೆ. ಈ ಅವಧಿಯಲ್ಲಿ ಸೋಂಕಿನಿಂದ ಮೃತಪಟ್ಟವರ ಬಗ್ಗೆ ನೋವಿದೆ. ಜನತಾ ಕರ್ಫ್ಯೂ ಘೋಷಿಸಿದ ಕ್ಷಣದಿಂದ ಹೊಸ ಚಟುವಟಿಕೆ, ಸವಾಲಿಗೆ ಸಜ್ಜಾದ ರಾಜಕೀಯ ಪಕ್ಷದ ಕಾರ್ಯಕರ್ತರು ಸಾಮಾನ್ಯರ ಕಣ್ಣೀರು, ತಲ್ಲಣ ಕಡಿಮೆ ಮಾಡುವುದನ್ನು ಕಲಿಯುತ್ತ ಸ್ಪಂದಿಸಿದ್ದಾರೆ. ಇದನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು.

ಕೆಲವೆ ರಾಜ್ಯಗಳಲ್ಲಿ ಸೋಂಕು ತೀವ್ರ ಕಡಿಮೆಯಿದ್ದರೆ, ಇನ್ನು ಕೆಲವೆಡೆ ಉಲ್ಬಣಿಸುತ್ತಿದೆ. ಇದನ್ನು ಎದುರಿಸಲು ಆತ್ಮವಿಶ್ವಾಸ ಇರಬೇಕು. ಸರಕಾರದ ಜತೆಗೆ ಆರೋಗ್ಯ ವ್ಯವಸ್ಥೆ ಸರಿಪಡಿಸಲು ಕಾರ್ಯಕರ್ತರು, ಸಮಾಜದ ಸಜ್ಜನ ವರ್ಗ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ವೈಯಕ್ತಿಕವಾಗಿ ಎಚ್ಚರಿಕೆ ವಹಿಸಬೇಕು. ಕೈಗಳನ್ನು ಸ್ವತ್ಛವಾಗಿ ಇರಿಸಿಕೊಳ್ಳಬೇಕು. ಸಾರ್ವಜನಿಕ ಜೀವನದಲ್ಲಿರುವ ಪ್ರಮುಖರು ಇನ್ನೂ ನಾಲ್ಕೈದು ತಿಂಗಳು ವ್ರತದ ರೀತಿಯಲ್ಲಿ ಜನಸಂಪರ್ಕ ಬಿಡಬೇಕು. ಸಾಮಾಜಿಕ ದೂರ, ಶಾರೀರಿಕ ಅಂತರ ಕಾಯ್ದುಕೊಂಡರೆ ಸೋಂಕಿನಿಂದ ಬಚಾವಾಗ ಬಹುದು. ದೇಶ ಕೂಡ ಪಾರಾಗಬಹುದು ಎಂದರು.

Advertisement

ಕೋವಿಡ್-19 ಸಂದರ್ಭದಲ್ಲಿ ಗರಿಷ್ಠ ಪ್ರಮಾಣದ ಎಚ್ಚರಿಕೆ ಅನುಸರಿಸಬೇಕು. ಎಲ್ಲ ಮುಖಂಡರು ಮೇಲ್ಪಂಕ್ತಿ, ಆದರ್ಶ ರಾಗಬೇಕು. ಸರಕಾರದ ತಪ್ಪುಗಳನ್ನು ಸರಿಪಡಿಸಲು ಧನಾತ್ಮಕ ಪಾತ್ರ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕರ್ತರ ಚಟುವಟಿಕೆಗೆ ಧನ್ಯತೆ
ಬಿಜೆಪಿ ಕಾರ್ಯಕರ್ತರ ಚಟುವಟಿಕೆಗೆ ಧನ್ಯತೆ ಇದೆ. ನಾಲ್ಕು ತಿಂಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಭುಜಕ್ಕೆ ಭುಜ ಕೊಟ್ಟು ಸಮಾಜದ ಕಟ್ಟಕಡೆಯ ಬಡವನ ಕಣ್ಣೀರು ಒರೆಸುವ ಪ್ರಯತ್ನ ಮಾಡಿದ್ದೇವೆ. “ಸೇವೆಯೇ ಸಂಘಟನೆ’ ಎಂಬ ಪ್ರಧಾನಿಯವರ ಧ್ಯೇಯವಾಕ್ಯದಂತೆ ಮುನ್ನಡೆಯಬೇಕು ಎಂದು ಕರೆ ನೀಡಿದರು.

ಕರ್ನಾಟಕದಲ್ಲೂ ಉತ್ತಮವಾಗಿ ಕೆಲಸ ನಡೆದಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಸಿಎಂ ಯಡಿಯೂರಪ್ಪ ನೇತೃತ್ವದ ಸರಕಾರದ ಕೆಲಸ ಗಳಿಗೆ ಇನ್ನೂ ಹಲವು ತಿಂಗಳ ಕಾಲ ಹೆಜ್ಜೆಗೆ ಹೆಜ್ಜೆ ಜೋಡಿಸಬೇಕು ಎಂದು ಮನವಿ ಮಾಡಿದರು.

ದಿಲ್ಲಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್‌, ಸಚಿವ ಡಿ.ವಿ. ಸದಾನಂದ ಗೌಡ ಉಪಸ್ಥಿತರಿದ್ದರೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್‌ ಕುಮಾರ್‌ ಕಟೀಲು ಉಪಸ್ಥಿತರಿದ್ದರು. ಸಿಎಂ ಯಡಿಯೂರಪ್ಪ ಕುಟುಂಬ ಸದಸ್ಯ ರೊಂದಿಗೆ ಸಮಾರೋಪ ಸಮಾರಂಭ ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next