ಪನ್ವೇಲ್: ಪನ್ವೇಲ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ಇತ್ತೀಚೆಗೆ ನಡೆದ ಪನ್ವೇಲ್ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 20 ಪ್ರಭಾಗಗಳಿಂದ ಬಿಜೆಪಿಯ 51 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟು ಅತ್ಯಧಿಕ ಮತಗಳೊಂದಿಗೆ ವಿಜಯಿಯಾಗಿ ಮರು ನಗರ ಸೇವಕರಾಗಿ ಆಯ್ಕೆಯಾದ ಸಂತೋಷ್ ಜಿ. ಶೆಟ್ಟಿ ಅವರಿಗೆ ಅಭಿನಂದನ ಕಾರ್ಯಕ್ರಮವು ಸಂಘದ ಕಚೇರಿಯಲ್ಲಿ ನಡೆಯಿತು.
ಪನ್ವೇಲ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ರೋಹಿಣಿ ಮಧ್ಯಸ್ಥ, ಗೌರವ ಪ್ರಧಾನ ಕಾರ್ಯದರ್ಶಿ ಶ್ವೇತಾ ಸಂತೋಷ್ ಶೆಟ್ಟಿ, ಜತೆ ಕಾರ್ಯದರ್ಶಿ ಶಬುನಾ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಜರಗಿದ ಈ ಅಭಿನಂದನ ಕಾರ್ಯಕ್ರಮದಲ್ಲಿ ಪನ್ವೇಲ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ಸದಸ್ಯೆಯರು, ಸ್ಥಳೀಯ ತುಳು-ಕನ್ನಡಿಗರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಸಂತೋಷ್ ಜಿ. ಶೆಟ್ಟಿ ಅವರನ್ನು ಶಾಲು ಹೊದೆಸಿ ಫಲಪುಷ್ಪವನ್ನಿತ್ತು ಅಭಿನಂದಿಸಿ ಗೌರವಿಸಿ ಶುಭ ಹಾರೈಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಂತೋಷ್ ಜಿ. ಶೆಟ್ಟಿ ಅವರು, ನಮ್ಮ ವಿಭಾಗದಲ್ಲಿ ಇತರ ಭಾಷಿಕರು ಹಾಗೂ ತುಳು-ಕನ್ನಡಿಗರೊಂದಿಗೆ ಪನ್ವೇಲ್ ಕರ್ನಾಟಕ ಸಂಘದ ಪ್ರತಿಯೊಬ್ಬರು ನನ್ನ ಗೆಲುವಿಗೆ ಬಹಳಷ್ಟು ಶ್ರಮಿಸಿ ಸಹಕರಿಸಿದ್ದಾರೆ.ಸಹಕರಿಸಿದ ಎಲ್ಲರಿಗೂ ನಾನು ಸದಾ ಋಣಿಯಾಗಿದ್ದೇನೆ. ಅದೇ ಪ್ರಕಾರ ಕರ್ನಾಟಕ ಸಂಘದ ಕಟ್ಟಡವನ್ನು ನಾವು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಇದಕ್ಕೆಲ್ಲ ತುಳು-ಕನ್ನಡಿಗರ ಸಹಕಾರ ಬೇಕಾಗಿದೆ. ಪನ್ವೇಲ್ ಹಾಗೂ ನ್ಯೂ ಪನ್ವೇಲ್
ಪರಿಸರದವರಿಗೆ ನೀರಿನ ಕೊರತೆಯ ಸಮಸ್ಯೆಯನ್ನು ಪೂರ್ಣಗೊಳಿಸುತ್ತೇನೆ. ಇದರೊಂದಿಗೆ ಸ್ವತ್ಛತೆಗೂ ನಾವೆಲ್ಲರೂ ಆದ್ಯತೆ ನೀಡಬೇಕಾಗಿದೆ. ತುಳು-ಕನ್ನಡಿಗರ ಸಮಸ್ಯೆಗಳಿಗೆ ನನ್ನಿಂದಾಗುವ ರೀತಿಯಲ್ಲಿ ಸಹಕರಿಸುತ್ತೇನೆ. ನಾವೆಲ್ಲರೂ ಒಂದಾಗಿ ಈ ಪರಿಸರದ ಅಭಿವೃದ್ಧಿಗೆ ಕಾರ್ಯಪ್ರವೃತ್ತರಾಗೋಣ ಎಂದರು.