ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೆ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ಹಿಂಡಲಗಾ ಗ್ರಾಪಂ ಕಾಮಗಾರಿ ಅನುದಾನದ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿರುವುದಾಗಿ ಆಗಿನ ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಒಪ್ಪಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಬರೆದ ಪತ್ರಕ್ಕೂ ಅನುಮೋದನೆ ನೀಡಲಾಗಿದೆ ಎಂಬ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಇದು ನಕಲಿಯಾಗಿದ್ದು, ಇಲಾಖೆಯ ಸೀಲ್ ಫೋರ್ಜರಿ ಮಾಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಆಶಾ ಐಹೊಳೆ, 2020ರಲ್ಲಿ ಹಿಂಡಲಗಾ ಗ್ರಾಮದ ಶ್ರೀ ಲಕ್ಷ್ಮೀ ದೇವಿ ಜಾತ್ರೆ ಇತ್ತು. ಆ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಪಂ ಸದಸ್ಯರು ನನ್ನ ಬಳಿ ಬಂದಿದ್ದರು. ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಪತ್ರ ನೀಡುವಂತೆ ಕೋರಿದ್ದರು. ಆ ಪ್ರಕಾರ ಗ್ರಾಪಂ ಅಧ್ಯಕ್ಷರಿಗೆ, ಸದಸ್ಯರಿಗೆ ನಾನು ಪತ್ರ ಕೊಟ್ಟಿದ್ದು ನಿಜ. ಆದರೆ ನಾನು ನೀಡಿದ್ದ ಪತ್ರಕ್ಕೆ ಏನು ಪ್ರತಿಕ್ರಿಯೆ ಬಂದಿದೆ ಎಂಬುದು ನನಗೆ ಗೊತ್ತಿಲ್ಲ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅನುಮೋದನೆ ನೀಡಿರುವ ವಿಷಯ ನನಗೆ ಇವತ್ತಷ್ಟೇ ಗೊತ್ತಾಗಿದೆ. ಗುತ್ತಿಗೆದಾರ ಸಂತೋಷ ಪಾಟೀಲ್‌ಗೆ ನಾನು ಮುಖಾಮುಖೀ ಎಂದೂ ಭೇಟಿಯಾಗಿಲ್ಲ. ಅವರ ಆತ್ಮಹತ್ಯೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಬಂದಿರುವ ಸ್ವೀಕೃತಿ ಪ್ರತಿಯೂ ನನಗೆ ಸಿಕ್ಕಿಲ್ಲ. ಜಿಪಂ ಅಧಿಕಾರಿಗಳು ಅದನ್ನು ಕಡತದಲ್ಲಿ ಇಟ್ಟಿರುತ್ತಾರೆ. ಕೆಲಸ ಆದ ಬಗ್ಗೆ ನನಗೇನೂ ಮಾಹಿತಿ ನೀಡಿಲ್ಲ, ಆ ಬಗ್ಗೆ ಗೊತ್ತೂ ಇಲ್ಲ. ನನ್ನ ಪತ್ರಕ್ಕೆ ಅನುಮೋದನೆ ನೀಡಿರುವ ಪತ್ರವೂ ಇವತ್ತಷ್ಟೇ ಸಿಕ್ಕಿದೆ. 2021, ಫೆ.17ರಂದು ಅನುಮೋದನೆ ಆಗಿರುವುದು ಪತ್ರದಲ್ಲಿ ಉಲ್ಲೇಖೀಸಲಾಗಿದೆ. ನಾನು ಕೊಟ್ಟಿರುವ ಲೆಟರ್ ಬಗ್ಗೆ ಮೇಲ ಧಿಕಾರಿಗಳಿಗೆ ಎಷ್ಟು ಮಾಹಿತಿ ಇದೆ ಎಂಬುದು ನನಗೆ ಗೊತ್ತಿಲ್ಲ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ದರ್ಶನ ಎಚ್.ವಿ., ಸಾಮಾನ್ಯವಾಗಿ ಜಿಪಂ ಅಧ್ಯಕ್ಷರಿಗೆ ಯಾರಾದರೂ ಮನವಿ ಕೊಟ್ಟರೆ ಅವರು ಅದನ್ನು ಅ ಧಿಕಾರಿಗಳಿಗೆ ಕಳಿಸುವುದು ಸಹಜ. ಹಿಂದಿನ ಜಿಪಂ ಅಧಕ್ಷರು ಪಂಚಾಯತ್ ರಾಜ್ ಇಲಾಖೆ ಪ್ರದಾನ ಕಾರ್ಯದರ್ಶಿಗೆ 2021, ಫೆ.15ರಂದು ಪತ್ರ ಬರೆದಿದ್ದಾರೆ. ಅದರ ಕೆಳಗೆ 108 ಕಾಮಗಾರಿಗಳ ಬಗ್ಗೆ ಉಲ್ಲೇಖೀಸಿ ಪಟ್ಟಿ ಮಾಡಿ ಅದರ ಕೆಳಗೆ ಸಹಿ ಮಾಡಿದ್ದಾರೆ. ಮೊದಲು ಮತ್ತು ಕೊನೆಯ ಪುಟದಲ್ಲಿ ಹಸಿರು ಅಕ್ಷರದಲ್ಲಿ ಬರೆದ ಸಹಿ ನನ್ನ ಹಸ್ತಾಕ್ಷರ ಅಲ್ಲ ಎಂದು ಜಿಪಂ ಮಾಜಿ ಅಧ್ಯಕ್ಷೆ ಆಶಾ ಐಹೊಳೆ ಹೇಳಿದ್ದಾರೆ ಎಂದರು.
ಸಾಮಾನ್ಯವಾಗಿ ಕಾಮಗಾರಿಗೆ ಅನುಮೋದನೆ ಕೊಡಬೇಕಾದರೆ ಪಟ್ಟಿ ಮಾಡುವುದಿಲ್ಲ. ಅದಕ್ಕೆ ಸರ್ಕಾರದ ನಿಯಮಗಳಿವೆ. ಫೈಲ್ ನೋಟಿಂಗ್ ಆಗಬೇಕು, ಇಲಾಖೆ ಮುಖ್ಯಸ್ಥರು, ಸಂಬಂಧಿ ಸಿದವರು ಅನುಮೋದನೆ ಕೊಡಬೇಕು. ಪ್ರತ್ಯೇಕ ಸರ್ಕಾರಿ ಆದೇಶ ಬರುತ್ತದೆ. ಸರ್ಕಾರದ ಮಟ್ಟದಲ್ಲಿ ಇಲಾಖೆ ಕಾರ್ಯದರ್ಶಿಗಳು, ಜಿಲ್ಲಾಮಟ್ಟದಲ್ಲಿ ನನ್ನ ಅನುಮೋದನೆ ಆಗಬೇಕು. ಆದರೆ ನನ್ನ ಮಟ್ಟದಲ್ಲೂ ಅನುಮೋದನೆ ಆಗಿಲ್ಲ. ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಏನೂ ಹೇಳುವುದಿಲ್ಲ. ಮೇಲಧಿ ಕಾರಿಗಳು ಈ ರೀತಿ ಸಹಿ ಮಾಡಲು ಬರುವುದಿಲ್ಲ. ಯಾರು ಫೋರ್ಜರಿ ಸಹಿ ಮಾಡಿದ್ದಾರೆ, ತಿದ್ದಿದ್ದಾರೆ ಎನ್ನುವುದು ತನಿಖೆ ಮೂಲಕ ಸತ್ಯ ಗೊತ್ತಾಗುತ್ತದೆ ಎಂದರು.
ಹಿಂಡಲಗಾ ಗ್ರಾಮದಲ್ಲಿ 108 ಕಾಮಗಾರಿ ನಡೆದಿರುವುದು ನನಗೂ ಅಚ್ಚರಿ ತರಿಸಿದೆ. ಇಷ್ಟೊಂದು ಸಮಸ್ಯೆ ಆದಾಗ ನಮ್ಮನ್ನು ಭೇಟಿ ಮಾಡುವುದು ಸಹಜ. ಆದರೆ ಈ ಪ್ರಕರಣದಲ್ಲಿ ಯಾವೊಬ್ಬ ಗುತ್ತಿಗೆದಾರರು ನನ್ನ ಭೇಟಿ ಆಗಿಲ್ಲ. 15ನೇ ಹಣಕಾಸು ಆಯೋಗದಲ್ಲಿ 50ರಿಂದ 60 ಲಕ್ಷ ರೂ. ಅನುದಾನ ಬರುತ್ತದೆ. ಆದರೆ ನಾಲ್ಕು ಕೋಟಿ ರೂ. ಅನುದಾನ ಪಂಚಾಯಿತಿಗೆ ಬರುವುದಿಲ್ಲ. ಪತ್ರ ಬರೆದಿದ್ದು ಸತ್ಯ. ಅನುಮೋದನೆ ಅಂತ ಬರೆದಿದ್ದು ನಿಜವಲ್ಲ ಎಂದು ಸ್ಪಷ್ಟಪಡಿಸಿದರು.