Advertisement

ಸಂತೇಶಿವರ: ಹಾಲು ಉತ್ಪಾದಕರ ಪ್ರತಿಭಟನೆ

07:54 AM Jun 08, 2020 | Lakshmi GovindaRaj |

ಚನ್ನರಾಯಪಟ್ಟಣ/ನುಗ್ಗೇಹಳ್ಳಿ: ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಸಂತೇಶಿವರ ಗೇಟ್‌ನ ಹಾಲು ಉತ್ಪಾದಕರ ಸಹಕಾರ ಸಂಘದ ಬಾಗಿಲಿಗೆ ಬೀಗ ಹಾಕಿ ಕಳೆದ ಮೂರು ದಿನದಿಂದ ಹಾಲು ಪಡೆಯದೇ ತಲೆ ಮರೆಸಿಕೊಂಡಿರುವ  ಕಾರ್ಯದರ್ಶಿ ಚಕ್ರಪಾಣಿ ವಿರುದ್ಧ ಉತ್ಪಾದಕರು ಹಾಗೂ ತಾಲೂಕು ರೈತ ಸಂಘದ ಸದಸ್ಯರು ಧರಣಿ ನಡೆಸಿದರು.

Advertisement

ಸಂಘದಲ್ಲಿ 200ಕ್ಕೂ ಹೆಚ್ಚು ಸದಸ್ಯರಿದ್ದು, ಪ್ರತಿ ನಿತ್ಯ 2,650ರಿಂದ 2,750 ಲೀ. ಹಾಲು ಉತ್ಪಾದನೆಯಾಗು ತ್ತಿದೆ. ಆದರೆ  ಮೂರು ದಿನದಿಂದ ಸಂಘದ ಬಾಗಿಲಿಗೆ ಬೀಗ ಹಾಕಿರುವ ಪರಿಣಾಮ 8 ಸಾವಿರ ಲೀ. ಹಾಲು ಹಾಳಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸಂತೇಶಿವರ, ರಾಂಪುರ, ದೇವಲಾಪುರ, ನರೇನಹಳ್ಳಿ, ಹೊಸಹಳ್ಳಿ, ನವಿಲೇಗೇಟ್‌, ಹೊಸೂರು ಹಾಗೂ ನಾಗೇನ ಹಳ್ಳಿ ಸೇರಿದಂತೆ ಎಂಟು ಗ್ರಾಮದಿಂದ ನೂರಾರು ಮಂದಿ ಹಾಲು ಹಾಕುತ್ತಿದ್ದಾರೆ.

ರಾಂಪುರ ಗ್ರಾಮದ ಚಕ್ರಪಾಣಿ ಈ ಸಂಘದ ಕಾರ್ಯದರ್ಶಿಯಾಗಿ ಸುಮಾರು 35 ವರ್ಷಗಳಿಂದ  ಸೇವೆ ಸಲ್ಲಿಸುತ್ತಿದ್ದು, ಹಾಲು ಅಳೆಯುವ ವಿಚಾರದಲ್ಲಿ ಕಾರ್ಯದರ್ಶಿ ಹಾಗೂ ಉತ್ಪಾದಕರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇತ್ತು ಎಂದು ಪ್ರತಿಭಟನಾಕಾರರು ದೂರಿದರು. 15 ವರ್ಷದಿಂದ ಸಂತೇಶಿವರ ಹಾಗೂ ರಾಂಪುರ  ಗ್ರಾಮಗಳಲ್ಲಿಯೇ ಹಾಲನ್ನು ಅಳೆದು ಖಾಸಗಿ ವಾಹನದ ಮೂಲಕ ಸಂಘಕ್ಕೆ ತರಲಾಗುತಿತ್ತು.

ಆದರೆ ಇತ್ತೀಚೆಗೆ ಸಂಘದ ಕಾರ್ಯದರ್ಶಿ ಸಂತೇಶಿವರ ಗ್ರಾಮದ ಉತ್ಪಾದಕರು ನೇರ ಸಂಘಕ್ಕೆ ತಂದು ಹಾಲನ್ನು ಹಾಕುವಂತೆ ತಾಕೀತು  ಮಾಡುತ್ತಿದ್ದರು ಎಂದು ಆಪಾದಿಸಿದರು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಉಪಾಧ್ಯಕ್ಷ ರಂಗಶೆಟ್ಟಿ, ನಿರ್ದೇಶಕರಾದ ಗುರುಮೂರ್ತಿ, ರಾಮೇಗೌಡ, ರಾಮಶೆಟ್ಟಿ, ಮರುಳಪ್ಪಶೆಟ್ಟಿ, ಧರಣಿಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next