Advertisement

ಸಂತೆಕಟ್ಟೆ-ಕುರ್ಪಾಡಿ-ಪೆರ್ಡೂರು ರಸ್ತೆ ಸ್ಥಿತಿ ಚಿಂತಾಜನಕ

06:00 AM May 25, 2018 | Team Udayavani |

ಬ್ರಹ್ಮಾವರ: ಕಳ್ತೂರು ಸಂತೆಕಟ್ಟೆಯಿಂದ ಕುರ್ಪಾಡಿ, ಹತ್ರಬೈಲು ಮೂಲಕ ಪೆರ್ಡೂರು ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಜತೆಗೆ ಮಳೆಗಾಲದಲ್ಲಿ ಬಸ್‌ ಸಂಚಾರ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.

Advertisement

ನಡೆದಾಡಲೂ ಅಸಾಧ್ಯ  
ವಾಹನ ಸಂಚಾರಕ್ಕೆ ಸಂಚಕಾರವಾದ ಈ ರಸ್ತೆಯಲ್ಲಿ ನಡೆಯಲೂ ಅಸಾಧ್ಯವಾಗದ ಪರಿಸ್ಥಿತಿ ಇದೆ. ಸುಮಾರು 4 ಕಿ.ಮೀ. ಇದೇ ಸ್ಥಿತಿ ಇದೆ. ಈ ರಸ್ತೆ ಕುರ್ಪಾಡಿ, ಹತ್ರಬೈಲು, ಹೊಸೂರು, ಸರಂಬೈಲು ಮೊದಲಾದ ಊರುಗಳನ್ನು ಸಂಪರ್ಕಿಸುತ್ತದೆ. ಇದರಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಹದಗೆಟ್ಟ ಪರಿಣಾಮ ಉದ್ಯೋಗ ನಿಮಿತ್ತ ತೆರಳುವವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಕೃಷಿಕರು, ಹೈನುಗಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಇದ್ದ ಒಂದು ಖಾಸಗಿ ಬಸ್‌ ಕೂಡ ಸಂಚಾರ ನಿಲ್ಲಿಸುವ ಆತಂಕವಿದೆ.

ಮಣಿಪಾಲ ಸಂಪರ್ಕ
ಕಳ್ತೂರು ಸಂತೆಕಟ್ಟೆ ಪರಿಸರದ ಜನರು ಉಡುಪಿ, ಮಣಿಪಾಲಕ್ಕೆ ತೆರಳಲು ಇದು ಹತ್ತಿರದ ಮಾರ್ಗವಾಗಿದೆ. ಆದರೆ ಸಂಚಾರಕ್ಕೆ ಯೋಗ್ಯವಿಲ್ಲದ ಕಾರಣ  ತುರ್ತು ಸಂದರ್ಭದಲ್ಲಿ ಮಣಿಪಾಲದ ಆಸ್ಪತ್ರೆಗೆ ಹೋಗಲೂ ಕಷ್ಟವಾಗುತ್ತಿದೆ.

ಟೆಂಡರ್‌ ಹಂತದಲ್ಲಿದೆ
ಸಂತೆಕಟ್ಟೆಯಿಂದ ಕುರ್ಪಾಡಿ ಸೇತುವೆ ತನಕ ರಸ್ತೆ ದುರಸ್ತಿಗೊಳಿಸಲಾಗಿದೆ. ಉಳಿದ ಭಾಗವು ಫೇವರ್‌ ಫಿನಿಶ್‌ಗಾಗಿ ಟೆಂಡರ್‌ ಹಂತದಲ್ಲಿದೆ. ಚುನಾವಣಾ ನೀತಿ ಸಂಹಿತೆಯಿಂದ ಪ್ಯಾಚ್‌ವರ್ಕ್‌ಗೂ ಅಡಚಣೆಯಾಗಿದೆ.
– ಮೈರ್ಮಾಡಿ ಸುಧಾಕರ ಶೆಟ್ಟಿ, ಜಿ.ಪಂ. ಸದಸ್ಯರು

ಚರಂಡಿ ಮಾಯ
ರಸ್ತೆಯ ಇಕ್ಕೆಲಗಳಲ್ಲಿ  ಚರಂಡಿ ಮುಚ್ಚಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಘನ ವಾಹನ ಸಂಚಾರದಿಂದ ದೊಡ್ಡ ಗಾತ್ರದ ಹೊಂಡ ಗುಂಡಿಗಳು ರಸ್ತೆಯಲ್ಲಿ ನಿರ್ಮಾಣವಾಗಿದೆ. ಜತೆಗೆ ಈ ಭಾಗದಲ್ಲಿ ದಾರಿದೀಪದ ವ್ಯವಸ್ಥೆ  ಕೂಡ ಸಮರ್ಪಕವಾಗಿಲ್ಲ. ಈ ಜಿಲ್ಲಾ ಪಂಚಾಯತ್‌ ರಸ್ತೆಯನ್ನು ಮೇಲ್ದರ್ಜೆಗೇರಿಸಬೇಕು. ರಸ್ತೆಯನ್ನು ಸಂಪೂರ್ಣ ಡಾಂಬರೀಕರಣ ಅಥವಾ ಕಾಂಕ್ರಿಟೀಕರಣಗೊಳಿಸಬೇಕೆಂದು ಸಾರ್ವಜನಿಕರು ಮನವಿಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next