ಬಳ್ಳಾರಿಯ ಠಾಣೆಗಳಾದಿಯಾಗಿ, ಸಕಲ ಸರ್ಕಾರಿ ಕಚೇರಿ, ನಗರದ ನಾನಾ ಕಡೆಗಳಲ್ಲಿ ಈ ಶೇಂಗಾ ರಾಜು ಪರಿಚಿತ. ಮಕ್ಕಳಾದಿಯಾಗಿ ಎಲ್ಲರೂ ಈತನನ್ನು ಎದುರು ನೋಡುತ್ತಾರೆ. ಅವನ ವೇಷವೋ, ಸಂಪೂರ್ಣ ಪೊಲೀಸ್‌ಮಯ…
ಇದು ಒಬ್ಬ ಕಡಲೆಕಾಯಿ ಸಾಂತಾಕ್ಲಾಸ್‌ನ ಕಥೆ. ಆ ಕಾಲ್ಪನಿಕ ಸಾಂತಾಕ್ಲಾಸ್‌ನ ಜೇಬನ್ನು ತಡಕಾಡಿದರೆ, ಚಾಕ್ಲೆಟ್, ಒಂದಿಷ್ಟು ಸಿಹಿತಿನಿಸುಗಳು ಸಿಕ್ಕಬಹುದೇನೋ. ಇವರ ಜೇಬಿನಲ್ಲಿ ಹಾಗೆ ಚಾಕ್ಲೆಟ್ ಕಾಣಿಸುವುದಿಲ್ಲ; ಬರೀ ಕಡಲೇಕಾಯಿಗಳು. ಇವರ ಹೆಸರು ರಾಜು. ಬಳ್ಳಾರಿಯ ಕೌಲ್‌ಬಜಾರ್‌ನ ವಾಸಿ. ಎಲ್ಲ ವ್ಯಾಪಾರಸ್ಥರಂತೆ ಶೇಂಗಾ, ಬಟಾಣಿ ಮಾರಿ ತನ್ನ ಬದುಕನ್ನಷ್ಟೆ ಕಟ್ಟಿಕೊಳ್ಳುತ್ತಿಲ್ಲ. ಬದಲಾಗಿ ತನ್ನ ಉದಾರತೆ, ನಿಷ್ಕಲ್ಮಶ ಮನಸ್ಸಿನಿಂದ ಸರ್ವರ ಪ್ರೀತಿ-ವಿಶ್ವಾಸ ಗಳಿಸುತ್ತಾ, ಎಲ್ಲರಿಗೂ ಆಪ್ತನಾಗಿದ್ದಾನೆ.
ಹಣಕ್ಕಿಂತ ನೂರಾರು ಜನರನ್ನು ಸಂಪಾದಿಸಿದ ಹೆಗ್ಗಳಿಕೆ ಈತನದ್ದು. ಪೊಲೀಸರ ಹುಚ್ಚು ಅಭಿಮಾನಿ. ಅದನ್ನು ಈತನ ವೇಷಭೂಷಣವೇ ಸಾರಿ ಹೇಳುತ್ತೆ. ರಾಜುವಿನ ಟಾಪ್ ಟು ಬಾಟಮ್ ಸಂಪೂರ್ಣ ಖಾಕಿಮಯ. ಬೆನ್ನಿಗೆ ಒಂದು ಕಡಲೆ ಚೀಲ, ಕಾಲಲ್ಲಿ ಕಂದು ಬಣ್ಣದ ಶೂ, ತಲೆ ಮೇಲೆ ಬಣ್ಣ ಬಳಿದ ಪೊಲೀಸ್ ಟೋಪಿ. ಆ ಟೋಪಿಯ ತುಂಬಾ ಸಾಲುಗಳು… ಅವುಗಳಲ್ಲಿ ಚೇಷ್ಟೆ ಮಾಡುವರ, ಕಳ್ಳರು, ರೌಡಿಗಳ ಹೆಸರು; ಐ.ಪಿ.ಸಿ. ಸೆಕ್ಷನ್‌ಗಳು ಮತ್ತು ಅವುಗಳ ಶಿಕ್ಷೆಯ ಅವಧಿ ಮತ್ತು ದಂಡ, ತಾನು ಹೆಚ್ಚು ಇಷ್ಟಪಡುವ ಪೊಲೀಸರ ಹೆಸರು…
ಕಳೆದ ಮೂರ್‍ನಾಲ್ಕು ದಶಕದಿಂದ ಈತನು ತರುವ ಶೇಂಗಾವನ್ನು, ಮಕ್ಕಳಾದಿಯಾಗಿ ಎಲ್ಲರೂ ಎದುರು ನೋಡುತ್ತಾರೆ. ಮುಖ್ಯವಾಗಿ ಥಂಡಿ ಬಿದ್ದಾಗ, ನಾಲಿಗೆ ಕೆಟ್ಟಾಗ, ಹೊತ್ತು ಹೋಗದೇ ಇದ್ದಾಗ, ಈತ ಎಲ್ಲರಿಗೂ ಥಟ್ ಅಂತ ನೆನಪಾಗುತ್ತಾನೆ. ಈತನನ್ನು ಕಂಡ ಕೂಡಲೇ ಮಕ್ಕಳು ಕುಣಿದು ಕುಪ್ಪಳಿಸುತ್ತಾರೆ. “ತಗೋಳಿ, ಮಕ್ಕಳಾ ತಿನ್ನಿ, ತಿನ್ನಿ, ಶಕ್ತಿ ಬರುತ್ತೆ. ನೀವು ದೊಡ್ಡವರಾದ ಮೇಲೆ ಪೊಲೀಸರಾಗಿ, ನಮ್ಮನ್ನೆಲ್ಲ ಕಾಯುವಂತ್ರಿ..’ ಎಂದು ಹೇಳುತ್ತಾನೆಂದು ಎಸ್.ಪಿ. ಕಚೇರಿಯ ಸಿಬ್ಬಂದಿ ರುದ್ರಪ್ಪ ಹೇಳುತ್ತಾರೆ.
ಇಲ್ಲಿಂದ ಬೇರೆಡೆ ವರ್ಗಾವಣೆಯಾದ ಪೊಲೀಸರು ಠಾಣೆಗೆ ಕರೆಮಾಡಿ, ಈತನ ಬಗ್ಗೆ ವಿಚಾರಿಸಿದ್ದನ್ನು ಕೇಳಿದಾಗ, ಭಾವುಕನಾಗುತ್ತಾನೆ. ಬಳ್ಳಾರಿ ನಗರದ ಆರು ಠಾಣೆಗಳು, ಎಸ್.ಪಿ. ಕಚೇರಿಗೆ ರಾಜುವಿನ ಹಾಜರಿ ಸದಾ ಇದ್ದಿದ್ದೇ. ಈತ ಅಳತೆ ಮಾಡಿ ಶೇಂಗಾ ಕೊಡಲ್ಲ. ಇಷ್ಟೇ ದುಡ್ಡು ಕೊಡಿ ಅಂತಲೂ ಹೇಳ್ಳೋಲ್ಲ. ಕೈಗೆ ಸಿಕ್ಕಷ್ಟು ಬಾಚಿ ಕೊಡ್ತಾನೆ. ಯಾವುದಾದರೂ ಹಸಿದ ಪುಟಾಣಿ ಕಂಡರೆ, ಅದರ ಕೈಗೆ ಶೇಂಗಾ ತುಂಬಿ, ನಗುತ್ತಾ ಮುಂದೆ ಹೆಜ್ಜೆ ಇಡುತ್ತಾನೆ.
ಪೊಲೀಸ್ ಠಾಣೆಯಲ್ಲದೆ, ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಫೈರ್ ಆಫೀಸ್, ಕೋರ್ಟ್‌ನ ಸಿಬ್ಬಂದಿಗೂ, ರಾಜು ಶೇಂಗಾ ಗೆಳೆಯ. ಬಳ್ಳಾರಿಯ ಪ್ರಮುಖ ರಾಜಕೀಯ ನಾಯಕರಿಗೂ ಶೇಂಗಾ ಕೊಟ್ಟು, ಕೈಲುಕುತ್ತಾ, ನಗು ಬೀರುತ್ತಾನೆ. ಅಂದಹಾಗೆ, ರಾಜು ಖಾಕಿ ಬಟ್ಟೆ ಧರಿಸುವುದು, ಶೇಂಗಾ ಮಾರುವಾಗ ಮಾತ್ರ. ಅದು ಆತನ ಪೊಲೀಸ್ ಶ್ರದ್ಧೆ.
ರೈತರಿಗೂ ಪ್ರೀತಿ…: ರಾಜು ಶೇಂಗಾ ಕೊಳ್ಳುವುದು ಇಲ್ಲಿನ ಎ.ಪಿ.ಎಂ.ಸಿ.ಯಲ್ಲಿ. ಹಳ್ಳಿಯಿಂದ ಬಂದ ರೈತರು, ಈತನಿಗೆ ಭಾರಿ ರಿಯಾಯಿತಿ ದರದಲ್ಲಿ, ಕೆಲವೊಮ್ಮೆ ಪುಕ್ಕಟೆಯಾಗಿಯೂ ಶೇಂಗಾ ಕೊಡುತ್ತಾರಂತೆ. ಅದನ್ನು ಬಾಬೂಜಿ ನಗರದ ಮಂಡಾಳು ಭಟ್ಟಿಯಲ್ಲಿ ಹುರಿಸಿಕೊಂಡು, ಮೊದಲಿಗೆ ತನಗೆ ಶೇಂಗಾ ಕೊಟ್ಟವರಿಗೆ ಅದನ್ನು ಕೊಡುತ್ತಾನೆ.
* ಸ್ವರೂಪಾನಂದ ಎಂ. ಕೊಟ್ಟೂರು